ಗುಜರಾತ್ ಗಲಭೆಯ ಬಿಬಿಸಿ ಸಾಕ್ಷ್ಯಚಿತ್ರ ನಿಷೇಧ: ಪಿಐಎಲ್ ವಿಚಾರಣೆಗೆ ಒಪ್ಪಿದ ಸುಪ್ರೀಂಕೋರ್ಟ್

Prasthutha|

ನವದೆಹಲಿ: ‘ಇಂಡಿಯಾ: ದ ಮೋದಿ ಕ್ವಶ್ಚನ್’ ಗುಜರಾತ್ ಗಲಭೆ ಬಗ್ಗೆ ಬಿಬಿಸಿ ತಯಾರಿಸಿರುವ ಸಾಕ್ಷ್ಯ ಚಿತ್ರಗಳನ್ನು ನಿಷೇಧಿಸಿರುವ ಮೋದಿ ಸರಕಾರದ ತೀರ್ಮಾನವನ್ನು ಪಿಐಎಲ್- ಸಾರ್ವಜನಿಕ ಹಿತಾಸಕ್ತಿಯ ಅರ್ಜಿ ಮೂಲಕ ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿದೆ. ಇದು ದುರುದ್ದೇಶಪೂರಿತ, ನಿರಂಕುಶಮತಿ, ಅಸಾಂವಿಧಾನಿಕ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

- Advertisement -

ಹಿರಿಯ ವಕೀಲರಾದ ಎಂ. ಎಲ್. ಶರ್ಮಾ ಅವರು ಸಲ್ಲಿಸಿರುವ ಪಿಐಎಲ್ ಅನ್ನು ಜನವರಿ 30ರ ಸೋಮವಾರದಂದು ವಿಚಾರಣೆಗೆ ಕೈಗೆತ್ತಿಕೊಳ್ಳುವುದಾಗಿ ಸಿಜೆಐ ಡಿ. ವೈ. ಚಂದ್ರಚೂಡ್ ತಿಳಿಸಿದರು. 2002ರ ಗುಜರಾತ್ ಗಲಭೆ ಬಗ್ಗೆ ಬಿಬಿಸಿ ತಯಾರಿಸಿರುವ ಸಾಕ್ಷ್ಯಚಿತ್ರಗಳ ನಿಷೇಧ ವಿಷಯವನ್ನು ಆದಷ್ಟು ಬೇಗ ನೋಡುವ ಅಗತ್ಯವಿದೆ ಎಂಬ ವಕೀಲರ ವಾದವನ್ನು ಸುಪ್ರೀಂಕೋರ್ಟ್ ಗಮನಕ್ಕೆ ತೆಗೆದುಕೊಂಡಿತು.

ವಕೀಲರಾದ ಶರ್ಮಾ ಅವರು ‘ಇಂಡಿಯಾ: ದ ಮೋದಿ ಕ್ವಶ್ಚನ್’ ನಿಷೇಧೇವು ದುರುದ್ದೇಶಪೂರಿತ, ನಿರಂಕುಶಮತಿ, ಅಸಾಂವಿಧಾನಿಕ ಎಂದು ಹೇಳಿದರು.

- Advertisement -

ಬಿಬಿಸಿ ತಯಾರಿಸಿರುವ ಸಾಕ್ಷ್ಯಚಿತ್ರದ ಎರಡೂ ಭಾಗಗಳನ್ನು ತರಿಸಿ ಪರಿಶೀಲಿಸುವಂತೆ ಪಿಐಎಲ್’ನಲ್ಲಿ ಮನವಿ ಮಾಡಲಾಗಿದೆ. ಅದರ ಮೇಲೆ 2002ರ ಗುಜರಾತ್ ಗಲಭೆಗಳಿಗೆ ಕಾರಣರಾದವರ ಮೇಲೆ ಕ್ರಮ ತೆಗೆದುಕೊಳ್ಳುವಂತೆಯೂ ಅರ್ಜಿಯಲ್ಲಿ ಕೇಳಲಾಗಿದೆ. ಭಾರತದ ನಾಗರಿಕರಿಗೆ 19(1)(2)ರಡಿ 2002ರ ಗುಜರಾತ್ ಗಲಭೆ ಬಗ್ಗೆ ಸುದ್ದಿ, ಸತ್ಯಾಂಶ, ವರದಿ ತಿಳಿಯುವ ಹಕ್ಕು ಇದೆಯೋ ಇಲ್ಲವೋ ಎಂಬುದನ್ನು ಕೋರ್ಟ್ ಪರಿಶೀಲಿಸಬೇಕು ಎಂದೂ ಅರ್ಜಿಯಲ್ಲಿ ಶರ್ಮಾ ಕೋರಿದ್ದಾರೆ.

ಗುಜರಾತ್ ಗಲಭೆ ಬಗ್ಗೆ, ಮೋದಿ ಪಾತ್ರದ ಬಗ್ಗೆ ಬಿಬಿಸಿ ತಯಾರಿಸಿರುವ ಸಾಕ್ಷ್ಯಚಿತ್ರಗಳನ್ನು ಜನವರಿ 27ರಂದು ಕೇಂದ್ರ ಸರಕಾರವು ನಿಷೇಧಿಸಿದ್ದಲ್ಲದೆ ಯೂಟ್ಯೂಬ್, ಟ್ವಿಟರ್ ಮೊದಲಾದ ಜಾಲ ತಾಣಗಳಿಂದಲೂ ಅದನ್ನು ತೆಗೆದುಹಾಕುವಂತೆ ಮಾಡಿದೆ. ಭಾರತದ ವಿದೇಶಾಂಗ ಸಚಿವಾಲಯವು ಸಾಕ್ಷ್ಯಚಿತ್ರವನ್ನು ಪ್ರಚಾರದ ವಸ್ತು ಎಂದು ಹೇಳಿದ್ದಲ್ಲದೆ, ಅದರ ಹಿಂದೆ ವಸಾಹತುಶಾಹಿ ಮನೋಭಾವ ಕೆಲಸ ಮಾಡಿದ್ದಾಗಿಯೂ ಹೇಳಿದೆ.

ಕೇಂದ್ರ ಸುದ್ದಿ ಮತ್ತು ಪ್ರಸಾರ ಸಚಿವಾಲಯವು ಜನವರಿ 27ರಂದು ಮಾಡಿರುವ ಆಜ್ಞೆಯನ್ನು ಕಿತ್ತು ಹಾಕುವಂತೆ ಕೋರ್ಟಿಗೆ ಅರ್ಜಿಯಲ್ಲಿ ಮನವಿ ಮಾಡಲಾಗಿದೆ. ಸಂವಿಧಾನದ 19(1)(2)ರಡಿ 2002ರ ವಿಧಿ ಪ್ರಕಾರ ದೇಶದ ಪ್ರಜೆಗಳಿಗೆ ಇರುವ ಮೂಲಭೂತ ಹಕ್ಕು ಮತ್ತು ಮುಕ್ತ ಮಾಧ್ಯಮದ ಹಕ್ಕನ್ನು ಮುಚ್ಚಿ ಹಾಕಲು ಕೇಂದ್ರ ಸರಕಾರ ನೋಡುತ್ತಿದೆಯೇ ಎಂಬುದನ್ನು ಗಮನಿಸಬೇಕು ಎಂದೂ ನ್ಯಾಯಾಲಯಕ್ಕೆ ಮನವಿ ಮಾಡಲಾಗಿದೆ.  

ಸಂವಿಧಾನದ 352ನೇ ವಿಧಿಯಂತೆ ರಾಷ್ಟ್ರಾಧ್ಯಕ್ಷರು ತುರ್ತು ಪರಿಸ್ಥಿತಿ ಘೋಷಿಸದೆಯೇ ಕೇಂದ್ರ ಸರಕಾರವು ತುರ್ತು ಪರಿಸ್ಥಿತಿಯ ವಾತಾವರಣವನ್ನು ಸೃಷ್ಟಿಸಿದೆಯೇ ಎಂದು ಪಿಐಎಲ್’ನಲ್ಲಿ ಪ್ರಶ್ನಿಸಲಾಗಿದೆ.

ಬಿಬಿಸಿ ಸಾಕ್ಷ್ಯ ಚಿತ್ರಗಳು ದಾಖಲಿಸಿಕೊಂಡಿರುವ ಸತ್ಯ ಸಂಗತಿಗಳು, ಗುಜರಾತ್ ಗಲಭೆಯ ಸಂತ್ರಸ್ತರಿಗೆ ಮುಂದಿನ ದಿನಗಳಲ್ಲಾದರೂ ನ್ಯಾಯ ಒದಗಿಸಲು ಅವು ಸಾಕ್ಷ್ಯಗಳಾಗಿವೆ ಎಂದು ಸಹ ಪಿಐಎಲ್’ನಲ್ಲಿ ಹೇಳಲಾಗಿದೆ. 



Join Whatsapp