ಉತ್ತರಪ್ರದೇಶದಲ್ಲಿ ಮುಸ್ಲಿಮ್ ವ್ಯಕ್ತಿಯನ್ನು ಮರಕ್ಕೆ ಕಟ್ಟಿ ಹಾಕಿ ಹಲ್ಲೆ: ಗೋ ರಕ್ಷಣಾ ಗುಂಪಿನ ಮುಖ್ಯಸ್ಥನ ಬಂಧನ

Prasthutha|

ಉತ್ತರ ಪ್ರದೇಶದ ಮೊರಾದಾಬಾದ್ ಜಿಲ್ಲೆಯ ಕೋಡ್ ಗ್ರಾಮದಲ್ಲಿ ಮುಸ್ಲಿಮ್ ಮಾಂಸ ಮಾರಾಟಗಾರ ಶಾಕಿರ್ ಕುರೇಷಿ ಎಂಬವರನ್ನು ಮರಕ್ಕೆ ಕಟ್ಟಿ ಹಾಕಿ ತೀವ್ರವಾಗಿ ಥಳಿಸಿದ ಪ್ರಕರಣದ ಪ್ರಮುಖ ಆರೋಪಿ ಸ್ವಯಂ ಘೋಷಿತ ಗೋ ರಕ್ಷಣಾ ಗುಂಪಿನ ಮುಖ್ಯಸ್ಥ ಮನೋಜ್ ಠಾಕೂರ್ ಎಂಬಾತನನ್ನು ಉತ್ತರ ಪ್ರದೇಶ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.ಐದು ದಿನಗಳ ಶೋಧ ಕಾರ್ಯಾಚರಣೆಯ ಬಳಿಕ ಈತನನ್ನು ಬಂಧಿಸಲಾಯಿತು ಎಂದು ಕಟ್ಗರ್ ಪೊಲೀಸ್ ಠಾಣೆಯ ಅಧಿಕಾರಿ ರಶೀದ್ ಖಾನ್ ತಿಳಿಸಿದ್ದಾರೆ.

- Advertisement -

ಈ ಹಿಂದೆಯೇ ಮೊರಾದಾಬಾದ್ ಪೊಲೀಸರು ಈ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರನ್ನು ಬಂಧಿಸಿದ್ದರು. ಶುಕ್ರವಾರ ಠಾಕೂರ್ ಸೇರಿದಂತೆ ಇಬ್ಬರನ್ನು ಬಂಧಿಸಲಾಗಿದೆ. ಮೇ 16 ರಂದು ಶಾಕಿರ್ ಅವರು ಕೋಣದ ಮಾಂಸವನ್ನು ತೆಗೆದುಕೊಂಡು ಹೋಗುತ್ತಿದ್ದಾಗ ಗೋ ರಕ್ಷಣಾ ಗುಂಪಿನ ಕಾರ್ಯಕರ್ತರು ತಡೆದು ನಿಲ್ಲಿಸಿ,  ಇದು ದನದ ಮಾಂಸ ಎಂದು ಆರೋಪಿಸಿ ಅವರ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ್ದರು. ಮಾತ್ರವಲ್ಲ 50 ಸಾವಿರ ರೂ. ನೀಡುವಂತೆ ಬೇಡಿಕೆ ಇಟ್ಟಿದ್ದರು. ಬಳಿಕ ಅವರನ್ನು ಪೊಲೀಸರಿಗೆ ಒಪ್ಪಿಸಿದರು.

ಹಲ್ಲೆಕೋರರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳುವ ಬದಲು, ಪರವಾನಗಿ ಇಲ್ಲದೆ ಮಾಂಸವನ್ನು ಕೊಂಡೊಯ್ದ ಮತ್ತು ಮಾಸ್ಕ್ ಧರಿಸದ ಆರೋಪದ ಮೇಲೆ ಪೊಲೀಸರು ಮೊದಲು ಸಂತ್ರಸ್ತ ಶಾಕೀರ್ ಅವರನ್ನೇ ಬಂಧಿಸಿದ್ದರು. ಘಟನೆಯ ವಿಡಿಯೋ ವೈರಲ್ ಆಗಿ ಸೋಶಿಯಲ್ ಮೀಡಿಯಾದಲ್ಲಿ ಜನರಿಂದ ಆಕ್ರೋಶ ವ್ಯಕ್ತವಾದ ಬಳಿಕವಷ್ಟೇ ಪೊಲೀಸರು ಗೋ ರಕ್ಷಣಾ ಗುಂಪಿನ ವಿರುದ್ಧ ಕ್ರಮ ಕೈಗೊಂಡಿದ್ದಾರೆ.

Join Whatsapp