ಚೆನ್ನೈ : ಕ್ರಿಮಿನಲ್ ಪ್ರಕರಣಗಳ ತನಿಖೆ ವಿಚಾರದಲ್ಲಿ ನಮ್ಮಲ್ಲಿ ಸಿಬಿಐ ಬಗ್ಗೆ ಅಪಾರ ಗೌರವ, ನಂಬಿಕೆಯ ಪರಂಪರೆಯಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಇದು ಕೇಂದ್ರದಲ್ಲಿ ಆಡಳಿತದಲ್ಲಿರುವ ಪಕ್ಷಗಳ ಕೈಗೊಂಬೆಯಾಗಿದೆ ಎನ್ನುವ ಆರೋಪಗಳಿವೆ. ಈ ನಡುವೆ, ಇದೀಗ ಬಹುದೊಡ್ಡ ಕಳ್ಳತನದ ಆರೋಪವೂ ಕೇಳಿಬಂದಿದೆ.
ಅಂದರೆ, ಸಿಬಿಐ ವಶಪಡಿಸಿಕೊಂಡಿದ್ದ ಸುಮಾರು 400 ಕೆ.ಜಿ. ಚಿನ್ನದಲ್ಲಿ 100 ಕೆ.ಜಿ. ಕಳವಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ತನಿಖೆ ನಡೆಸುವಂತೆ ಸಿಬಿ-ಸಿಐಡಿ ತನಿಖೆಗೆ ಮದ್ರಾಸ್ ಹೈಕೋರ್ಟ್ ತನಿಖೆಗೆ ಆದೇಶಿಸಿದೆ.
2012ರಲ್ಲಿ ಖಾಸಗಿ ಆಮದುದಾರರಿಂದ ಸಿಬಿಐ ವಶಕ್ಕೆ ಪಡೆದಿದ್ದ 400 ಕೆ.ಜಿ.ಯಷ್ಟು ಚಿನ್ನವಿದ್ಡ ನೆಲಮಾಳಿಗೆಯನ್ನು ತೆರೆದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ಈ ಘಟನೆಗೆ ಸಂಬಂಧಿಸಿ ಸಿಬಿಐ ವಿರುದ್ಧವೇ ಕಳ್ಳತನದ ಆರೋಪದಡಿ ಪ್ರಕರಣ ದಾಖಲಿಸಬಾರದು ಎಂದು ಮದ್ರಾಸ್ ಹೈಕೋರ್ಟ್ ಪ್ರಶ್ನಿಸಿದೆ.
ಸ್ಥಳೀಯ ಪೊಲೀಸರು ತನಿಖೆ ನಡೆಸಿದರೆ ತನಿಖಾ ಸಂಸ್ಥೆಯ ಘನತೆಗೆ ಧಕ್ಕೆಯಾಗುತ್ತದೆ ಎಂದು ಕೋರ್ಟ್ ನಲ್ಲಿ ಸಿಬಿಐ ಪ್ರತಿಪಾದಿಸಿತ್ತು. ಆದರೆ, ಎಲ್ಲಾ ಪೊಲೀಸರು ನಂಬಿಕಸ್ಥರೇ ಎಂದು ಹೇಳಿದ ಕೋರ್ಟ್ ತನಿಖೆಗೆ ಆದೇಶಿಸಿತು.