ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಸರಕಾರದ ವಿರುದ್ಧ ಸಿಡಿದೆದ್ದಿರುವ ರೈತರ ಹೋರಾಟದ ತೀವ್ರತೆ ಕ್ಷಣಕ್ಷಣಕ್ಕೂ ಹೆಚ್ಚುತ್ತಲೇ ಇದೆ. ಈ ನಡುವೆ, ರೈತರ ಆಕ್ರೋಶ ಮುಗಿಲು ಮುಟ್ಟಿದ್ದರೂ, ಪ್ರಧಾನಿ ಮೋದಿ ಅವರನ್ನು ಸಮರ್ಥಿಸಿಕೊಳ್ಳುವ ಮುಖ್ಯವಾಹಿನಿ ಮಾಧ್ಯಮಗಳಿಗೆ ರೈತ ಚಳವಳಿಗಾರರು ತೀವ್ರ ಮುಖಭಂಗ ಆಗುವಂತೆ ನಡೆದುಕೊಂಡಿದ್ದಾರೆ.
ಚಳವಳಿಯ ನಡುವೆ, ರೈತರು ಮಾಧ್ಯಮಗಳ ವಿರುದ್ಧವೂ ಆಕ್ರೋಶ ಹೊರಹಾಕುತ್ತಿರುವ ಮತ್ತು ಅವುಗಳನ್ನು ‘ಗೋದಿ ಮೀಡಿಯಾ (ಪ್ರಧಾನಿ ಮೋದಿ ಅವರನ್ನು ಓಲೈಕೆ ಮಾಡುವ ಮುಖ್ಯವಾಹಿನಿ ಮಾಧ್ಯಮಗಳಿಗೆ ಜನ ಸಾಮಾನ್ಯರು ಕೊಟ್ಟಿರುವ ಹೆಸರು)’ ಎಂದು ನೇರಾನೇರವಾಗಿ ಖಂಡಿಸಿರುವ ಘಟನೆಯ ಸಾಕಷ್ಟು ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿರುತ್ತವೆ.
‘ಗೋದಿ ಮೀಡಿಯಾ ಮುರ್ದಾಬಾದ್’, “ಗೋದಿ ಮೀಡಿಯಾ, ಗೋ ಬ್ಯಾಕ್”, “ಗೋದಿ ಮೀಡಿಯಾ ಶರಮ್ ಕರೋ” ಎಂಬ ಘೋಷಣೆಗಳನ್ನು ರೈತರು ದೊಡ್ಡದಾಗಿ ಕೂಗಿರುವ ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಆಜ್ ತಕ್ ವರದಿಗಾರರ ಜೊತೆ ಮಾತನಾಡಲು ರೈತರು ನೇರವಾಗಿ ನಿರಾಕರಿಸಿದ್ದಾರೆ. “ಇಲ್ಲ, ನಾವು ಆಜ್ ತಕ್ ಜೊತೆ ಮಾತನಾಡುವುದಿಲ್ಲ’’ ಎಂದು ರೈತರು ಹೇಳಿದ್ದಾರೆ.
ಝೀ ನ್ಯೂಸ್ ನ ಸುಧೀರ್ ಚೌಧರಿ ರೈತರ ಚಳವಳಿಯ ಹಿಂದೆ “ಖಲಿಸ್ತಾನಿ’ಗಳ ಕೈವಾಡವಿದೆ ಎಂದು ಪ್ರತಿಪಾದಿಸಿದ್ದರು. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ರೈತರು, ಖಲಿಸ್ತಾನ್ ಗಾಗಿ ನಾವು ಹೋರಾಟ ಮಾಡುತ್ತಿದ್ದೇವೆ ಎಂದು ಹೇಳುವವರು ಸ್ವತಃ ಭಾರತೀಯರು ಆಗಿರಲು ಸಾಧ್ಯವಿಲ್ಲ ಎಂದು ರೈತ ಮುಖಂಡರೊಬ್ಬರು ಹೇಳಿದ್ದಾರೆ.