ನವದೆಹಲಿ: ರಸ್ತೆ ವಿಭಜಕದಲ್ಲಿ ಮಲಗಿದ್ದ ಆರು ಜನರ ಮೇಲೆ ಅಪರಿಚಿತ ಟ್ರಕ್ ಒಂದು ಹರಿದ ಪರಿಣಾಮ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿ, ಇತರ ಇಬ್ಬರು ಗಾಯಗೊಂಡಿರುವ ಘಟನೆ ದೆಹಲಿಯ ಸೀಮಾಪುರಿ ಪ್ರದೇಶದಲ್ಲಿ ಬುಧವಾರ ನಡೆದಿದೆ.
ಮೃತರನ್ನು ಕರೀಮ್ (52), ಚೋಟೆ ಖಾನ್ಸ್ (25), ಶಾ ಆಲಂ (38) ಮತ್ತು ರಾಹುಲ್ (45) ಎಂದು ಗುರುತಿಸಲಾಗಿದ್ದು, ಗಾಯಗೊಂಡ 16 ವರ್ಷದ ಮನೀಶ್ ಮತ್ತು 30 ವರ್ಷದ ಪ್ರದೀಪ್ ಎಂಬವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆಯಲ್ಲಿ ರಸ್ತೆ ವಿಭಜಕದ ಮೇಲೆ ಮಲಗಿದ್ದ ನಾಲ್ವರು ಸಾವನ್ನಪ್ಪಿದ್ದರೆ, ಇಬ್ಬರು ಗಾಯಗೊಂಡಿದ್ದಾರೆ. ಮೃತ ನಾಲ್ವರಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದರೆ ಓರ್ವ ಮಾರ್ಗ ಮಧ್ಯೆ ಮೃತಪಟ್ಟಿದ್ದು ಇನ್ನೋರ್ವ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.
ಸೀಮಾಪುರಿ ಡಿಟಿಸಿ ಡಿಪೋವನ್ನು ಲಾರಿ ಹಾದು ಹೋಗುವಾಗ ಈ ದಾರುಣ ಘಟನೆ ನಡೆದಿದ್ದು ಸುದ್ದಿ ತಿಳಿದ ತಕ್ಷಣವೇ ಸ್ಥಳಕ್ಕೆ ಸ್ಥಳೀಯ ಪೊಲೀಸರು ಧಾವಿಸಿ ಪ್ರಕರಣವನ್ನು ದಾಖಲಿಸಿಕೊಂಡು ಅಪಘಾತ ನಡೆಸಿ ಪರಾರಿಯಾಗಿರುವ ವಾಹನ ಹಾಗೂ ಚಾಲಕನಿಗಾಗಿ ಶೋಧ ಕೈಗೊಂಡಿದ್ದಾರೆ.