ಬೆಂಗಳೂರು : ಜೆಡಿಎಸ್ ಮಾಜಿ ಶಾಸಕ ಮಧು ಬಂಗಾರಪ್ಪ ಇಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು “ಕಾಂಗ್ತೆಸ್ ಈ ದೇಶಕ್ಕೆ ಹಾಗೂ ರಾಜ್ಯಕ್ಕೆ ಅಗತ್ಯವಿದೆ ಆದುದರಿಂದ ನಾನು ಮನಸಾರೆ ಕಾಂಗ್ರೆಸ್ ಗೆ ಸೇರ್ಪಡೆಯಾಗುವ ತೀರ್ಮಾನ ಮಾಡಿದ್ದೇನೆ. ಜೆಡಿಎಸ್ ನಲ್ಲಿ ನನ್ನ ಭಾವನೆಗೆ ಬೆಲೆ ಸಿಗಲಿಲ್ಲ ಎಂದು ನಾನು ಹಿಂದೆಯೇ ಹೇಳಿದ್ದೇನೆ. ನನ್ನ ಭಾವನೆಗಳಿಗೆ ಸೂಕ್ತ ವೇದಿಕೆ ಕಾಂಗ್ರೆಸ್ ಆಗಿರುವುದರಿಂದ ಸಿದ್ಧರಾಮಯ್ಯನವರ ಜೊತೆ ಮಾತನಾಡಿದ್ದೇನೆ. ಇವತ್ತಿನಿಂದಲೇ ಕಾಂಗ್ರೆಸ್ ಗೆ ಕೆಲಸ ಮಾಡಲಿದ್ದೇನೆ. ಶೀಘ್ರವೇ ಅಧಿಕೃತವಾಗಿ ಕಾಂಗ್ರೆಸ್ ಸೇರಿಕೊಳ್ಳಲಿದ್ದೇನೆ ಎಂದಿದ್ದಾರೆ.
ಮಧು ಬಂಗಾರಪ್ಪ ಎಲ್ಲ ಅಧಿಕಾರ ಅನುಭವಿಸಿ, ಪಕ್ಷಕ್ಕೆ ದ್ರೋಹ ಮಾಡಿ ಹೋಗುತ್ತಿದ್ದಾರೆ ಎಂಬ ಕುಮಾರಸ್ವಾಮಿ ಹೇಳಿಕೆಯ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಮಧು ಬಂಗಾರಪ್ಪ, “ಅವರ ಮೇಲೆ ನನಗೆ ಅಪಾರ ಗೌರವವಿದೆ, ನಾನು ಎಲ್ಲೇ ಇದ್ರೂ ದೇವೇಗೌಡ, ಕುಮಾರಸ್ವಾಮಿ ಬಗ್ಗೆ ಗೌರವ ಇದೆ. ಅವರು ರಾಜಕೀಯದಲ್ಲಿ ಹಿರಿಯರು, ಅವರ ಬಗ್ಗೆ ನಾನು ಮಾತನಾಡುವುದಿಲ್ಲ. ಮಧು ಬಂಗಾರಪ್ಪ ವೈಯಕ್ತಿಕವಾಗಿ ಬದಲಾಗಲ್ಲ, ಪಕ್ಷ ಮಾತ್ರ ಬದಲಾವಣೆ ಆಗುತ್ತಿದೆ. ಸದ್ಯಕ್ಕೆ ರಾಜಕೀಯ ಹಾದಿಯ ಬಗ್ಗೆಯಷ್ಟೇ ಚಿಂತೆ ಮಾಡುತ್ತಿದ್ದೇನೆ. ಜೆಡಿಎಸ್ ನಲ್ಲಿ ನಾನು ಯಾವ ಅಧಿಕಾರವನ್ನೂ ಅನುಭವಿಸಿಲ್ಲ. ಈಗ ಹೊಸದೊಂದು ಹಾದಿ, ಕಾಂಗ್ರೆಸ್ ಪರವಾಗಿ ಇವತ್ತಿನಿಂದ ಕೆಲಸ ಮಾಡಲಿದ್ದೇನೆ ಎಂದು ಅವರು ಹೇಳಿದ್ದಾರೆ.