ಮುಸ್ಲಿಮರ ವಿರುದ್ಧ ದ್ವೇಷ ವರದಿ : ವಿಜಯ ಕರ್ನಾಟಕ ಪತ್ರಿಕೆಯ ವಿರುದ್ಧ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ ವಾರಂಟ್

Prasthutha|

- Advertisement -

ಆಧಾರ ರಹಿತವಾದ ದ್ವೇಷ ಹುಟ್ಟಿಸುವ ವರದಿ ಪ್ರಕಟಿಸಿದ ಆರೋಪದಲ್ಲಿ ವಿಜಯ ಕರ್ನಾಟಕ ದಿನಪತ್ರಿಕೆಯ ಸಂಪಾದಕರ ವಿರುದ್ಧ ಪಿಸಿಐ (ಪ್ರೆಸ್ ಕೌನ್ಸಿಲ್‌ ಆಫ್ ಇಂಡಿಯಾ) ಐದು ಸಾವಿರ ರೂಗಳ ಜಾಮೀನಿನ ವಾರೆಂಟ್ (ಬೇಯ್ಲಬಲ್ ವಾರೆಂಟ್) ಹೊರಡಿಸಲಾಗಿದೆ ಎಂದು ದ್ವೇಷದ ಮಾತುಗಳ ವಿರುದ್ಧ ಜನಾಂದೋಲನ ತಿಳಿಸಿದೆ.

- Advertisement -

 “ಸತ್ತವರೆಲ್ಲ ಒಂದೇ ಸಮುದಾಯದವರು – ಈಗಲೂ ಪ್ರಾರ್ಥನೆಯ ಹೆಸರಿನಲ್ಲಿ ಗುಂಪು ಸೇರುವುದೇಕೆ” ಎಂಬ ಶೀರ್ಷಿಕೆಯಲ್ಲಿ 2020ರ ಮಾರ್ಚ್ 28ರಂದು ವಿಜಯ ಕರ್ನಾಟಕ ದಿನಪತ್ರಿಕೆಯಲ್ಲಿ ವರದಿ ಪ್ರಕಟವಾಗಿತ್ತು. ಕೊರೊನಾ ಸೋಂಕು ಹರಡಲು ಮುಸ್ಲಿಂ ಸಮುದಾಯವೇ ಕಾರಣ ಎಂದು ವರದಿಯಲ್ಲಿ ಆಧಾರ ರಹಿತವಾಗಿ ನಿರೂಪಿಸಲಾಗಿತ್ತು. ಸಾಂಕ್ರಾಮಿಕ ರೋಗದ ಭಯದ ಸಮಯದಲ್ಲಿ ಇಂತಹ ವರದಿಗಳೇ ಮುಸ್ಲಿಮರ ಮೇಲೆ ದೌರ್ಜನ್ಯ ನಡೆಯಲು ಕಾರಣವಾಗಿವೆ ಎಂದು ಆರೋಪಿಸಿ ಪಿಸಿಐ ಬಳಿ ದ್ವೇಷದ ಮಾತುಗಳ ವಿರುದ್ಧ ಜನಾಂದೋಲನ ದೂರು ನೀಡಿತ್ತು.

ವಿಜಯ ಕರ್ನಾಟಕದ ಮೇಲಿನ ವರದಿಯು ಪಿಸಿಐ ನ  “ನಾರ್ಮ್ಸ್ ಆಫ್ ಜರ್ನಲಿಸ್ಟಿಕ್ ಕಂಡ್ಕಕ್ಟ್ 2019” ಅನ್ನು ಉಲ್ಲಂಘಿಸಿದೆ ಎಂಬ ಆಧಾರದಲ್ಲಿ ನಡೆಸುತ್ತಿರುವ ವಿಚಾರಣೆಗೆ ಹಾಜರಾಗುವಂತೆ ವಿಜಯ ಕರ್ನಾಟಕ ಪತ್ರಿಕೆಗೆ ಎರಡು ಬಾರಿ ಸಮನ್ಸ್ ಹೊರಡಿಸಲಾಗಿತ್ತು. ಆದರೆ ಎರಡು ವಿಚಾರಣೆಗೂ ವಿಜಯ ಕರ್ನಾಟಕ ಪತ್ರಿಕೆಯ ಪ್ರತಿನಿಧಿಗಳು ಹಾಜರಾಗದ ಕಾರಣ ವಾರೆಂಟ್ ಹೊರಡಿಸಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಒಂದು ಸಮುದಾಯವನ್ನು ಗುರಿಯಾಗಿಸಿ ಆಧಾರ ರಹಿತ ವರದಿಗಳನ್ನು ಪ್ರಕಟಿಸುವ ಮೂಲಕ ದ್ವೇಷ ಸೃಷ್ಟಿಸಲು ವಿಜಯ ಕರ್ನಾಟಕ ದಿನ ಪತ್ರಿಕೆ ಕಾರಣವಾಗಿದೆ. ಆದ್ದರಿಂದ ವಿಚಾರಣೆ ನಡೆಸಿ ಪತ್ರಿಕೆಯ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ಪತ್ರಿಕೆಯು ಬಹಿರಂಗವಾಗಿ ಕ್ಷಮೆ ಕೇಳಬೇಕೆಂದು ನಾವು ಒತ್ತಾಯಿಸುತ್ತೇವೆ. ಅಲ್ಲದೇ ಪಿಸಿಐನಂತಹ ಸಂಸ್ಥೆಯ ವಿಚಾರಣೆಗೆ ಹಾಜರಾಗದಿರುವುದು ಪತ್ರಿಕೆಗೆ ಶೋಭೆ ತರುವುದಿಲ್ಲ. ಸ್ವತಃ ಕಾನೂನು ಉಲ್ಲಂಘಿಸುವ ಮೂಲಕ ಓದುಗರಿಗೆ ಅದು ಕೆಟ್ಟ ಸಂದೇಶವನ್ನು ನೀಡುತ್ತಿದೆ ಎಂದು ದ್ವೇಷದ ಮಾತುಗಳ ವಿರುದ್ಧ ಜನಾಂದೋಲನ ಅಸಮಾಧಾನ ವ್ಯಕ್ತಪಡಿಸಿದೆ.

Join Whatsapp