ಬೆಂಗಳೂರು: ಪತಿ ಹಾಗೂ ಕೆ.ಆರ್. ಪುರ ಠಾಣೆ ಪೊಲೀಸರು ನನಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಮಾಜಿ ಉಪ ಮೇಯರ್ ಶಹತಾಜ್ ಬೇಗಂ, ಪ್ರಧಾನಿ ಮೋದಿಗೆ ವೀಡಿಯೋ ಕಳುಹಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಕುತ್ತಿಗೆಗೆ ಸೀರೆಯಿಂದ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಫೇಸ್ ಬುಕ್ ನಲ್ಲಿ ವಿಡಿಯೊ ಅಪ್ ಲೋಡ್ ಮಾಡಿರುವ ಶಹತಾಜ್, ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ಮೋದಿ ಅವರೇ ಅನುಮತಿ ಕೊಡಿ. ಇಲ್ಲ, ನನಗೆ ರಕ್ಷಣೆ ನೀಡಿ ಎಂದು ಹೇಳಿದ್ದಾರೆ.
ಸಂಬಂಧಿಕರೇ ಆದ ಅನ್ವರ್ ಪಾಷಾ ಜೊತೆ ನನ್ನ ಮದುವೆ ಮಾಡಿದ್ದರು. ಮದ್ಯ ವ್ಯಸನಿ ಆದ ಅನ್ವರ್, ಹಲವು ಯುವತಿಯರ ಜೊತೆ ಸಂಬಂಧವಿಟ್ಟುಕೊಂಡಿದ್ದಾರೆ. ಆಸ್ತಿ ಮೇಲೂ ಸಾಲ ಮಾಡಿ, ಬ್ಯಾಂಕ್ ನಿಂದ ನೋಟಿಸ್ ಕೊಡಿಸಿದ್ದಾರೆ. ಇದನ್ನು ಪ್ರಶ್ನಿಸಿದ್ದಕ್ಕೆ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ.
ತಲಾಖ್ ಪ್ರಶ್ನಿಸಿ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದೆ. ನನ್ನ ಪರ ತೀರ್ಪು ಬಂದಿತ್ತು. ಇಷ್ಟಾದರೂ ಪತಿಯ ಕಿರುಕುಳ ತಪ್ಪಿಲ್ಲ. ಕೆ.ಆರ್.ಪುರ ಠಾಣೆಗೆ ದೂರು ನೀಡಿದರೆ, ರಕ್ಷಣೆ ನೀಡಲು ಇನ್ ಸ್ಪೆಕ್ಟರ್ ನಂದೀಶ್ ಹಣ ಕೇಳಿದರು ಹಾಗೂ ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಮದ್ಯ ಕುಡಿದು ಮನೆಗೆ ಬಂದಿದ್ದ ಕೆಲ ಪೊಲೀಸರು, ಸಂಬಂಧಿಕರ ಮೇಲೆ ಹಲ್ಲೆ ಕೂಡ ಮಾಡಿದ್ದಾರೆ’ ಎಂದು ಶಹತಾಜ್ ತಿಳಿಸಿದ್ದಾರೆ. ನನಗೆ ರಕ್ಷಣೆ ನೀಡಿ ಎಂದು ಮೋದಿಯ ಬಳಿ ಶಹತಾಜ್ ಬೇಡಿಕೆ ಇಟ್ಟಿದ್ದಾರೆ.