ಮಾವೋವಾದಿ ಸಂಪರ್ಕ ಆರೋಪ: ದೆಹಲಿ ವಿವಿಯ ಮಾಜಿ ಪ್ರೊಫೆಸರ್ ಸಾಯಿಬಾಬ ಖುಲಾಸೆ

Prasthutha|

ನವದೆಹಲಿ: ಮಾವೋವಾದಿ ಸಂಪರ್ಕ ಪ್ರಕರಣದಲ್ಲಿ ದೆಹಲಿ ವಿಶ್ವವಿದ್ಯಾಲಯದ ಮಾಜಿ ಪ್ರೊಫೆಸರ್ ಜಿ.ಎನ್.ಸಾಯಿಬಾಬಾ ಮತ್ತು ಇತರ ಐವರನ್ನು ಬಾಂಬೆ ಹೈಕೋರ್ಟ್ ಖುಲಾಸೆಗೊಳಿಸಿದೆ.

- Advertisement -

ಬಾಂಬೆ ಹೈಕೋರ್ಟ್  ನಾಗ್ಪುರ ಪೀಠವು ಆರೋಪಿಗಳಾದ ಮಹೇಶ್ ಟಿರ್ಕಿ, ಪಾಂಡು ಪೋರಾ ನರೋಟೆ, ಹೇಮ್ ಕೇಶವದತ್ತ ಮಿಶ್ರಾ, ಪ್ರಶಾಂತ್ ರಾಹಿ, ವಿಜಯ್ ನನ್ ಟಿರ್ಕಿ ಮತ್ತು ಜಿ.ಎನ್.ಸಾಯಿಬಾಬಾ ಅವರನ್ನು ಖುಲಾಸೆಗೊಳಿಸಿದೆ.

2017ರಲ್ಲಿ ವಿಚಾರಣಾ ನ್ಯಾಯಾಲಯ ತನ್ನನ್ನು ದೋಷಿ ಎಂದು ಪರಿಗಣಿಸಿ ಜೀವಾವಧಿ ಶಿಕ್ಷೆ ವಿಧಿಸಿದ್ದನ್ನು ಪ್ರಶ್ನಿಸಿ ಸಾಯಿಬಾಬಾ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿ ರೋಹಿತ್ ದೇವ್ ಮತ್ತು ಅನಿಲ್ ಪನ್ಸಾರೆ ಅವರಿದ್ದ ವಿಭಾಗೀಯ ಪೀಠ ಪುರಸ್ಕರಿಸಿದೆ.

- Advertisement -

ಈ ಪ್ರಕರಣದ ಇತರ ಐವರು ಅಪರಾಧಿಗಳ ಮೇಲ್ಮನವಿಯನ್ನು ನ್ಯಾಯಪೀಠವು ಅನುಮತಿಸಿತು ಮತ್ತು ಅವರನ್ನು ಖುಲಾಸೆಗೊಳಿಸಿತು. ಐವರಲ್ಲಿ ಒಬ್ಬರು ಈ ವರ್ಷದ ಆಗಸ್ಟ್ ನಲ್ಲಿ ಹಂದಿಜ್ವರಕ್ಕೆ ತುತ್ತಾಗಿ ಜೈಲಿನಲ್ಲಿ ನಿಧನರಾಗಿದ್ದಾರೆ.

ವಿಶ್ವವಿದ್ಯಾನಿಲಯದ ಮಾಜಿ ಪ್ರೊಫೆಸರ್ ಮತ್ತು ಇತರರನ್ನು ಮಾರ್ಚ್ 2017 ರಲ್ಲಿ ಮಾವೋವಾದಿಗಳೊಂದಿಗೆ  ಸಂಪರ್ಕದಲ್ಲಿದ್ದರೆಂದು  ಘೋಷಿಸಿ, ಅವರನ್ನು ನಾಗ್ಪುರ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿತ್ತು.

ಬೇರೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಬಂಧಿತರಾಗದೆ ಇದ್ದರೆ ತಕ್ಷಣ ಬಿಡುಗಡೆಗೊಳಿಸುವಂತೆ ಬಾಂಬೆ ಹೈಕೋರ್ಟ್ ನಾಗಪುರ ಪೀಠ ಆದೇಶದಲ್ಲಿ ತಿಳಿಸಿದೆ.

  90% ವಿಕಲ ಚೇತನರಾಗಿರುವ ಗಾಲಿ ಕುರ್ಚಿಯಲ್ಲಿ ಇರುವ ಪ್ರೊ. ಜಿ. ಎನ್. ಸಾಯಿಬಾಬಾ ಅವರು ನಕ್ಸಲ್ ಆಪಾದನೆಯಿಂದ ಮುಕ್ತರಾಗಿದ್ದಾರೆ.

ಜಸ್ಟಿಸ್ ಗಳಾದ ರೋಹಿತ್ ದೇವ್, ಅನಿಲ್ ಪನ್ಸಾರೆ ಅವರಿದ್ದ ವಿಭಾಗೀಯ ಪೀಠವು ನಾಗಪುರ ಕೇಂದ್ರೀಯ ಜೈಲಿನಲ್ಲಿದ್ದ ಮಹೇಶ್ ಟಿಕ್ರಿ, ಪಾಂಡು ಪೋರ ನರೋತೆ, ಹೇಮ್ ಕೇಶವದತ್ತ ಮಿಶ್ರಾ, ಪ್ರಶಾಂತ್ ರಾಹಿ, ವಿಜಯ್ ನಾನ್ ಟಿಕ್ರಿ ಮತ್ತು ಜಿ. ಎನ್. ಸಾಯಿಬಾಬಾರನ್ನು ಬಿಡುಗಡೆ ಮಾಡಲು ಸೂಚನೆ ನೀಡಿದೆ. ಇನ್ನೊಬ್ಬರು 33ರ ಹರೆಯದ ಪಾಂಡು ನರೋಟೆಯವರು ಆಗಸ್ಟ್ 26ರಂದು ಸ್ವೈನ್ ಫ್ಲೂನಿಂದ ಜೈಲಿನಲ್ಲೇ ಸಾವಿಗೀಡಾಗಿದ್ದರು. ಸಾಯಿಬಾಬಾರ ಮೇಲೆ ನಗರ ನಕ್ಸಲ ಆಪಾದನೆ ಹೊರಿಸಲಾಗಿತ್ತು.

ಯುಎಪಿಎ- ಕಾನೂನು ಬಾಹಿರ ಚಟುವಟಿಕೆ ತಡೆ ಕಾಯ್ದೆಯಡಿ ಬಂಧನವಾಗಿದ್ದು, ಆ ನಿಟ್ಟಿನಲ್ಲಿ ಯಾವುದೇ ಮುಂದಿನ ಕಾರ್ಯ ಕೈಗೊಳ್ಳದ್ದರಿಂದ ಸೆಷನ್ ಕೋರ್ಟಿನ ತೀರ್ಪನ್ನು ಪೀಠ ವಜಾ ಮಾಡಿದೆ.

“ಕಾನೂನಿನಂತೆ ಕ್ರಮಪ್ರಕಾರವಾಗಿ ಆಪಾದಿತನ ಆಪಾದನೆ ರುಜುವಾತಾಗಿ ಶಿಕ್ಷೆ ಆಗಬೇಕು. ಆದರೆ ಇಲ್ಲಿ ಉಗ್ರ ಸಂಪರ್ಕದ ಆರೋಪ ಹೊರಿಸಿ ಬಂಧಿಸಲಾಗಿದೆ; ಒಬ್ಬರಿಗೆ ಶಿಕ್ಷೆಯೂ ಆಗಿದೆ. ಆದರೆ ಅದಕ್ಕೆ ಪೂರಕವಾಗಿ ಮೊಕದ್ದಮೆ ದೃಢೀಕರಿಸಿ ಶಿಕ್ಷೆ ಕೊಡಿಸುವ ಇಲ್ಲವೇ ಕಾಯಂ ಪಡಿಸುವ ಕೆಲಸವೇ ಆಗಿಲ್ಲ. ಅಂದರೆ ಸೂಕ್ತ ಸಾಕ್ಷಾಧಾರ ಇಲ್ಲವೆಂದೇ ಆಗುತ್ತದೆ. ಹಾಗಿರುವಾಗ ಸುಮ್ಮನೆ ಸೆರೆಮನೆಯಲ್ಲಿ ಇಟ್ಟಿರುವುದರಲ್ಲಿ ಅರ್ಥವಿಲ್ಲ” ಎಂದು ತೀರ್ಪಿನಲ್ಲಿ ಹೇಳಲಾಗಿದೆ.

ಮಾರ್ಚ್ 7, 2017ರಲ್ಲಿ ಗಡ್ಚಿರೋಲಿ ಸೆಶನ್ಸ್ ಕೋರ್ಟು ಪ್ರೊ. ಸಾಯಿಬಾಬಾ ಅವರು ನಿಷೇಧಿತ ಮಾವೋ ನಕ್ಸಲವಾದಿ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದು ಅವರಿಗೆ ಯುಎಪಿಎ ಕಾಯ್ದೆಯಡಿ ಜೀವಾವಧಿ ಶಿಕ್ಷೆ ವಿಧಿಸಿತ್ತು. ಈ ತೀರ್ಪಿನ ವಿರುದ್ಧ ಅವರ ಅರ್ಜಿಯು ಕಳೆದ ಐದು ವರ್ಷಗಳಿಂದ ಹೈ ಕೋರ್ಟಿನಲ್ಲಿ  ಉಳಿದಿತ್ತು.

ಸಾಯಿಬಾಬಾರ ಎಡ ಕೈ ಸ್ವಾದೀನ ಕಳೆದುಕೊಂಡಿತ್ತು. ಅದು ಇನ್ನೊಂದು ಕೈಗೂ ಹರಡುತ್ತಿತ್ತು. ಪ್ಯಾಂಕ್ರಿಯಾಟೀಸ್, ಅತಿ ರಕ್ತದೊತ್ತಡ, ಕಾರ್ಡಿಮೈಯೋಪತಿ, ಸತತ ಬೆನ್ನು ನೋವು, ನಿದ್ರಾಹೀನತೆ, ಚಲಿಸಲಾಗದ ಸ್ಥಿತಿ ಸೇರಿದಂತೆ ದೈಹಿಕವಾಗಿ 90% ನಿಷ್ಕ್ರಿಯರಾಗಿದ್ದರು.

47ರ ಪ್ರಾಯದ ಗೋಕಲ್ ಕೊಂಡ ನಾಗ ಸಾಯಿಬಾಬಾರನ್ನು 2014ರ ಫೆಬ್ರವರಿ 16ರಂದು ಬಂಧಿಸಲಾಗಿತ್ತು. ನಿರ್ಬಂಧ ಪ್ರಾಧಿಕಾರದ ಕೆ. ಪಿ. ಭಕ್ಷಿಯವರು 2015ರ ಏಪ್ರಿಲ್ 6ರಂದು ಪ್ರಾಸಿಕ್ಯೂಶನ್ ಆಧಾರ ನೀಡಿದರು. ಫೆಬ್ರವರಿ 21, 2015ರಂದು ಸೆಶನ್ಸ್ ಕೋರ್ಟು ಆರು ಜನ ಆಪಾದಿತರ ಮೇಲೂ ಆರೋಪದ ಚೌಕಟ್ಟಿನ ಮೇಲೆ ಶಿಕ್ಷೆ ವಿಧಿಸಿತು.

ಸಾಯಿಬಾಬಾ ಅವರು ತನ್ನ ಐದರ ಪ್ರಾಯದಿಂದ ಪೋಲಿಯೋ ಪೀಡಿತರು. ಆದರೆ ಕೈಕಾಲುಗಳಿಗೆ ಚಪ್ಪಲಿ ಧರಿಸಿ ಅವರು ತೆವಳಿದಂತೆ ಓಡಾಡುತ್ತಿದ್ದರು, ಓದಿನಲ್ಲೂ ಮುಂದಿದ್ದರು. 2008ರವರೆಗೆ ಅವರು ಗಾಲಿ ಕುರ್ಚಿ ಬಳಸುತ್ತಿರಲಿಲ್ಲ.

ಹೈದರಾಬಾದ್ ವಿಶ್ವವಿದ್ಯಾನಿಲಯದಲ್ಲಿ ಕಲಾ ಮಾಸ್ಟರ್ಸ್ ಪದವಿ, ಸೆಂಟ್ರಲ್ ಇನ್ ಸ್ಟಿಟ್ಯೂಟ್ ಆಫ್ ಫಾರಿನ್ ಲ್ಯಾಂಗ್ವೇಜಸ್ ನಲ್ಲಿ ಪೋಸ್ಟ್ ಗ್ರಾಜುಯೇಶನ್ ಮಾಡಿದರು. 1991ರಲ್ಲಿ ಇಂಗ್ಲಿಷ್ ಕಲಿಕೆ ಕೋರ್ಸ್ ಡಿಪ್ಲೊಮಾ ಪಡೆದರು.

ದಿಲ್ಲಿ ವಿಶ್ವವಿದ್ಯಾನಿಲಯ ವ್ಯಾಪ್ತಿಯ ರಾಂಲಾಲ್ ಆನಂದ್ ಕಾಲೇಜಿನಲ್ಲಿ ಸಾಯಿಬಾಬಾರು ಇಂಗ್ಲಿಷ್ ವಿಭಾಗದಲ್ಲಿ ಪ್ರೊಫೆಸರ್ ಆಗಿದ್ದರು. 2021ರಲ್ಲಿ ಅವರನ್ನು ಸೇವೆಯಿಂದ ವಜಾ ಮಾಡಲಾಯಿತು. 

Join Whatsapp