ಮೈಸೂರು: ಜೇನುಕುರುಬರ ಹಾಡಿಯ ಆದಿವಾಸಿಯೊಬ್ಬರ ಮೇಲೆ ಅರಣ್ಯ ಇಲಾಖೆಯ ವಾಚ್ ಮನ್ ಮತ್ತು ಗಾರ್ಡ್ ಗಳು ಕ್ಷುಲ್ಲಕ ಕಾರಣಕ್ಕೆ ಗುಂಡು ಹಾರಿಸಿ ಗಾಯಗೊಳಿಸಿರುವ ಘಟನೆ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಬೈಲಕುಪ್ಪೆ ನಡೆದಿದೆ.
ಜೇನುಕುರುಬರ ಹಾಡಿಯ ಆದಿವಾಸಿ ಬಸವ ಗಾಯಗೊಂಡು ಮೈಸೂರಿನ ಕೆ.ಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಜೇನುಕುರುಬರ ಯುವಕ ಬಸವ ಡಿಸೆಂಬರ್ 1ರ ಬುಧವಾರ ಮಧ್ಯಾಹ್ನ 12 ಗಂಟೆ ಸಮಯದಲ್ಲಿ ಬಹಿರ್ದೆಸೆಗೆ ಹೋಗಿದ್ದಾಗ ಆತನಿಗೆ ಅರಣ್ಯ ಇಲಾಖೆಯ ವಾಚ್ ಮನ್ ಸುಬ್ರಮಣಿ ಎಂಬಾತ ಬಂದೂಕಿನಿಂದ ಗುಂಡು ಹಾರಿಸಿದ್ದಾರೆ ಎಂದು ಸಂತ್ರಸ್ತನ ಪತ್ನಿ ಬೈಲಕುಪ್ಪೆ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಜೋಳ ಕೊಯ್ಲು ಮಾಡುವ ಸಂದರ್ಭದಲ್ಲಿ ಬಸವ ಎಂಬುವವರು ಪಕ್ಕದ ಅಣ್ಣಯ್ಯ ಎಂಬುವವರ ಜಮೀನಿಗೆ ಬರ್ಹಿದೆಸೆಗೆಂದು ಹೋಗಿದ್ದಾರೆ. ಆಗ ಅರಣ್ಯ ಇಲಾಖೆಯ ವಾಚ್ ಮನ್ ಸುಬ್ರಮಣಿ ಜೊತೆಗೆ ಮಹೇಶ ಮತ್ತು ಸಿದ್ದ ಎಂಬುವವರು ಹಾಗೂ ಗಾರ್ಡ್ ಮಂಜು ಅವರು ಬಸವನನ್ನು ಅಟ್ಟಿಸಿಕೊಂಡು ಬಂದು ಸಿಗದಿದ್ದಾಗ ಸುಬ್ರಮಣಿ ಎಂಬಾತ ಕೋವಿಯಿಂದ ಗುಂಡು ಹಾರಿಸಿದ್ದಾನೆ. ಇದು ಬಸವ ಅವರಿಗೆ ತಗುಲಿದ್ದು, ನಂತರ ಅವರನ್ನು ಸ್ಥಳೀಯರು ಕುಶಾಲನಗರ ಆಸ್ಪತ್ರೆಗೆ ದಾಖಲಿಸಿದ್ದಾರೆ. ನಂತರ ಶಸ್ತ್ರ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್ ಆಸ್ಪತ್ರೆಗೆ ಸೇರಿಸಲಾಗಿದೆ. ಈ ಬಗ್ಗೆ ಬೈಲಕುಪ್ಪೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.