ರಿಯಾದ್: ಸೌದಿ ಅರೇಬಿಯಾದಲ್ಲಿ ಇನ್ನು ಮುಂದೆ ವಿದೇಶಿಯರು ಸೌದಿ ಮಾಲೀಕತ್ವದ ಕಂಪೆನಿಗಳನ್ನು ನಡೆಸಬಹುದಾಗಿದೆ. ಈ ಕುರಿತು ವಾಣಿಜ್ಯ ಸಚಿವಾಲಯ ನಿರ್ಣಯ ಕೈಗೊಂಡಿರುವುದಾಗಿ ತನಗೆ ಮಾಹಿತಿ ದೊರೆತಿದೆ ಎಂದು ಒಕಾಝ್/ಸೌದಿ ಗಝೆಟ್ ವರದಿ ಮಾಡಿದೆ.
ಹಿಜರಿ 1426ರಲ್ಲಿ ಬಿಡುಗಡೆಗೊಳಿಸಲಾದ ಸಚಿವಾಲಯದ ನಿರ್ಣಯದ ಎರಡನೆ ಪ್ಯಾರಾವನ್ನು ನ್ಯಾಯಾಂಗ ಸಚಿವಾಲಯ ಹಿಂಪಡೆದಿದೆ. ‘ವಿದೇಶಿಯೊಬ್ಬ ಸೌದಿ ಕಂಪೆನಿಯನ್ನು ನಿರ್ವಹಿಸುವುದು ಅನುವದನೀಯವಲ್ಲ. ಅಲ್ಲದೆ ವಿದೇಶಿಯೊಬ್ಬನಿಗೆ ನ್ಯಾಯಾಂಗ ಆದೇಶದ ಮೂಲಕ ಸೌದಿ ನಾಗರಿಕನ ಅಧಿಕಾರವನ್ನು ಪ್ರತಿನಿಧಿಸುವ ಯಾವುದೇ ಹಕ್ಕನ್ನು ನೀಡುವುದು ಅನುವದನೀಯವಲ್ಲ’ ಎಂದು ಅದರಲ್ಲಿ ಉಲ್ಲೇಖಿಸಲಾಗಿತ್ತು.
ರಾಷ್ಟ್ರೀಯ ಸ್ಪರ್ಧಾತ್ಮಕತೆ ಕೇಂದ್ರದ ನಿರ್ದೇಶಕರ ಮಂಡಳಿಯ (ಥೈಸೀರ್) ಚೆಯರ್ಮ್ಯಾನ್ ಮತ್ತು ವಾಣಿಜ್ಯ ಮಂತ್ರಿ ಮಾಜಿದ್ ಅಲ್ ಕಸಾಬಿಯವರಿಂದ ಈ ಕುರಿತು ಟೆಲಿಗ್ರಾಮ್ ಬಂದಿರುವುದಾಗಿ ನ್ಯಾಯಾಂಗ ಸಚಿವ ಡಾ.ವಾಲಿದ್ ಅಲ್ ಸಮಾನಿ ತಿಳಿಸಿದ್ದಾರೆ.
“ವಾಣಿಜ್ಯ ಸಚಿವಾಲಯದಿಂದ ರಚಿಸಲ್ಪಟ್ಟಿರುವ ಕ್ರಿಯಾ ತಂಡವೊಂದು ಈ ಕುರಿತು ಅಧ್ಯಯನ ಮಾಡಿದೆ. ಸೌದಿ ಮಾಲೀಕತ್ವದ ಕಂಪೆನಿಗಳ ವ್ಯವಸ್ಥಾಪಕರಾಗಿ ವಿದೇಶಿಯರನ್ನು ನೇಮಿಸುವುದರಲ್ಲಿ ಮತ್ತು ಕಂಪೆನಿಗಳನ್ನು ನಡೆಸುವುದಕ್ಕಾಗಿ ಸೌದಿಗಳ ಸ್ಥಾನದಲ್ಲಿ ವಿದೇಶಿಯರಿಗೆ ಅಧಿಕಾರ ನೀಡುವ ವಿಷ್ಯದಲ್ಲಿ ಯಾವುದೇ ವಿರೋಧವಿಲ್ಲ ಎಂಬ ತೀರ್ಮಾನಕ್ಕೆ ಈ ಕ್ರಿಯಾ ತಂಡ ಬಂದಿದೆ” ಎಂದು ಸರ್ಕ್ಯುಲರ್ ನಲ್ಲಿ ಉಲ್ಲೇಖಿಸಲಾಗಿದೆ.