ಕೊನೆಗೂ ಸುಯೆಝ್ ಕಾಲುವೆಯಿಂದ ಚಲಿಸಲಾರಂಭಿಸಿದ ‘ಎವರ್ ಗಿವೆನ್’ ಹಡಗು । ನೂರಾರು ಹಡಗುಗಳ ಸಂಚಾರ ಸುಗಮ

Prasthutha|

ಸುಯೆಝ್ (ಈಜಿಪ್ಟ್‌): ಸುಯೆಝ್ ಕಾಲುವೆಯಲ್ಲಿ ಅಡ್ಡಲಾಗಿ ಆರು ದಿನಗಳಿಂದ ಸಿಲುಕಿಕೊಂಡಿದ್ದ ಬೃಹತ್‌ ಕಂಟೇನರ್ ಹಡಗು ಈಗ ಚಲಿಸಲು ಪ್ರಾರಂಭಿಸಿದೆ. ಕಾರ್ಯಾಚರಣೆಯಲ್ಲಿದ್ದ ತಜ್ಞ ಸಿಬ್ಬಂದಿ ಬೆಳಗಿನ ಜಾವ ಸುಮಾರು 5:40ಕ್ಕೆ ಹಡಗು ಮತ್ತೆ ಚಲಿಸುವಂತೆ ಮಾಡಿದ್ದಾರೆ.

- Advertisement -

ಎವರ್‌ಗ್ರೀನ್‌ ಕಂಪನಿಯ ಎವರ್‌ ಗಿವೆನ್‌ ಬೃಹತ್‌ ಹಡಗಿನ ಬಳಿಯ ಮರಳು ಮತ್ತು ಮಣ್ಣನ್ನು ತೆಗೆಯುವ ಕಾರ್ಯಾಚರಣೆ ನಡೆಸುವ ಜೊತೆಗೆ ಸುಮಾರು 10ಕ್ಕೂ ಹೆಚ್ಚು ಟಗ್‌ಬೋಟ್‌ಗಳ ಸಹಕಾರದಿಂದ ಹಡಗಿನ ಪಥ ಬದಲಿಸುವ ಪ್ರಯತ್ನ ನಡೆಸಲಾಗಿತ್ತು.

ಸುಯೆಝ್ ಕಾಲುವೆಯಲ್ಲಿ ಸಿಲುಕಿಕೊಂಡಿದ್ದ ಕಂಟೇನರ್‌ ಹಡಗು ಸೋಮವಾರ ಮತ್ತೆ ಚಲಿಸಿದೆ ಎಂದು ಇಂಚ್‌ ಕೇಪ್‌ ಶಿಪ್ಪಿಂಗ್‌ ಸರ್ವೀಸಸ್‌ ಟ್ವಿಟರ್‌ನಲ್ಲಿ ತಿಳಿಸಿರುವುದಾಗಿ ರಾಯಿಟರ್ಸ್‌ ವರದಿ ಮಾಡಿದೆ.

- Advertisement -

ಕಾಲುವೆಯ ಎರಡೂ ಬದಿಯಲ್ಲಿ ಸುಮಾರು 200ಕ್ಕೂ ಹೆಚ್ಚು ಹಡಗುಗಳು ಹಿಂದಕ್ಕೆ ಹೋಗಲಾರದೆ, ಮುಂದಕ್ಕೂ ಸಂಚರಿಸಲಾರದೆ ನಿಂತಿವೆ. ಎವರ್‌ ಗಿವೆನ್‌ ಹಡಗು ಪಥವನ್ನು ನೇರವಾಗಿಸಿಕೊಂಡು ಸಂಚರಿಸಿದರೆ, ಕಾಲುವೆಯಲ್ಲಿ ನಿರ್ಮಾಣವಾಗಿರುವ ಟ್ರಾಫಿಕ್‌ ಜಾಮ್‌ ಸಡಿಲಗೊಳ್ಳಲಿದೆ.

ಮಧ್ಯಪ್ರಾಚ್ಯ ದೇಶಗಳಿಂದ ವಿಶ್ವದ ವಿವಿಧೆಡೆಗೆ ಹೋಗಬೇಕಿರುವ ತೈಲವಾಹಕ ಹಡಗುಗಳು ಕಾಲುವೆಯಲ್ಲಿ ಸಿಲುಕಿವೆ. ಹಲವು ಹಡಗುಗಳು ಆಫ್ರಿಕಾವನ್ನು ಬಳಸಿ ಪ್ರಯಾಣಿಸಿರುವುದರಿಂದ ಕಚ್ಚಾತೈಲ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಹಡಗು ಮತ್ತೆ ಸಂಚರಿಸಿರುವ ಸುದ್ದಿ ಹೊರ ಬರುತ್ತಿದ್ದಂತೆ ಏಷ್ಯಾದ ರಾಷ್ಟ್ರಗಳು ಸೇರಿದಂತೆ ಹಲವು ಷೇರುಪೇಟೆಗಳಲ್ಲಿ ಸಕಾರಾತ್ಮಕ ವಹಿವಾಟು ದಾಖಲಾಗಿದೆ.

ಮೆಡಿಟರೇನಿಯನ್ ಸಮುದ್ರದಿಂದ ಕೆಂಪು ಸಮುದ್ರದ ಕಡೆಗೆ ಬರುತ್ತಿದ್ದ ಎವರ್‌ ಗಿವೆನ್ ಹಡಗು, ಸುಯೆಝ್ ಕಾಲುವೆಯ ದಕ್ಷಿಣದ ತುದಿಯಲ್ಲಿ ಕೆಟ್ಟು ನಿಂತಿತ್ತು. ಇದೇ ವೇಳೆ ಬಿರುಗಾಳಿ ಬೀಸಿದ ಕಾರಣ, ಹಡಗಿನ ಮುಂಭಾಗ ದಕ್ಷಿಣದ ಕಡೆಗೆ, ಹಿಂಭಾಗ ಉತ್ತರದ ಕಡೆಗೆ ತೇಲಿದೆ. ಇದನ್ನು ನಿಯಂತ್ರಿಸಲು ಸಾಧ್ಯವಾಗದ ಕಾರಣ ಹಡಗು ಕಾಲುವೆಗೆ ಅಡ್ಡವಾಯಿತು. ಆದರೆ, ಹಡಗಿನ ಮುಂಭಾಗ ಮತ್ತು ಹಿಂಭಾಗವು ಕಾಲುವೆಯ ಅಂಚಿನಲ್ಲಿ ಇರುವ ಮರಳಿನಲ್ಲಿ ಸಿಲುಕಿಕೊಂಡಿತ್ತು. ಮರಳಿನಿಂದ ಅದನ್ನು ಬಿಡಿಸಲು ಸಾಧ್ಯವಾಗದೆ ಕಾಲುವೆ ಸಂಪೂರ್ಣವಾಗಿ ಬಂದ್ ಆಗಿತ್ತು.

ಬೃಹತ್ ಹಡಗಿನ ವಿವರ ಇಲ್ಲಿದೆ.

➤   400 ಮೀಟರ್‌ – ಹಡಗಿನ ಉದ್ದ

➤  2 ಲಕ್ಷ ಟನ್ – ಹಡಗಿನ ತೂಕ

➤  22,000 – ಹಡಗಿನಲ್ಲಿರುವ ಕಂಟೇರ್‌ನಗಳ ಸಂಖ್ಯೆ

Join Whatsapp