ಫಿಫಾ ವಿಶ್ವಕಪ್‌ | ಚಾಂಪಿಯನ್‌ ಪಟ್ಟಕ್ಕಾಗಿ ಇಂದು ಅರ್ಜೆಂಟಿನಾ-ಫ್ರಾನ್ಸ್‌ ಫೈನಲ್‌ ಹಣಾಹಣಿ

Prasthutha|


32 ತಂಡಗಳೊಂದಿಗೆ ನವೆಂಬರ್‌ 20ರಂದು ಅದ್ಧೂರಿ ಆರಂಭ ಪಡೆದಿದ್ದ ಫಿಫಾ ವಿಶ್ವಕಪ್‌ ಟೂರ್ನಿ ಇದೀಗ ಅಂತಿಮ ಹಣಾಹಣಿಗೆ ಸಜ್ಜಾಗಿದೆ. ಫುಟ್‌ಬಾಲ್‌ ಜಗತ್ತಿನ ಸಾಮ್ರಾಟನ ಪಟ್ಟಕ್ಕಾಗಿ ಕತಾರ್‌ನ ಲುಸೈಲ್‌ ಸ್ಟೇಡಿಯಂನಲ್ಲಿ ಭಾನುವಾರ, ಭಾರತೀಯ ಕಾಲಮಾನ ರಾತ್ರಿ 8.30ಕ್ಕೆ ‘ಫೈನಲ್‌ ಫೈಟ್‌’ ನಡೆಯಲಿದೆ. ಕ್ರೊವೇಷಿಯಾವನ್ನು ಮಣಿಸಿ ಅರ್ಜೆಂಟಿನಾ ಮತ್ತು ಮೊರೊಕ್ಕೊ ತಂಡವನ್ನು ಹಿಂದಿಕ್ಕಿ ಫ್ರಾನ್ಸ್‌ ಫೈನಲ್‌ ಪ್ರವೇಶಿಸಿದೆ.

- Advertisement -

ಸತತ 2ನೇ ಬಾರಿಗೆ ಚಾಂಪಿಯನ್‌ ಪಟ್ಟವನ್ನೇರಲು ಫ್ರಾನ್ಸ್‌ ಮತ್ತು 36 ವರ್ಷಗಳ ಬಳಿಕ ಚಿನ್ನದ ಟ್ರೋಫಿಯ ಕನಸನ್ನು ನನಸಾಗಿಸಲು ಪುಟ್‌ಬಾಲ್‌ ದಿಗ್ಗಜ ಲಿಯೋನೆಲ್‌ ಮೆಸ್ಸಿ ಸಾರಥ್ಯದ ಅರ್ಜೆಂಟಿನಾ ಫೈನಲ್‌ ಹಣಾಹಣಿಗೆ ಸರ್ವ ರೀತಿಯಲ್ಲೂ ಸಜ್ಜಾಗಿದೆ.

3ನೇ ಕಿರೀಟದ ಗುರಿಯೊಂದಿಗೆ 6ನೇ ಫೈನಲ್‌ನಲ್ಲಿ‌ ಅರ್ಜೆಂಟಿನಾ ಮತ್ತು 4ನೇ ಫೈನಲ್‌ನಲ್ಲಿ ಫ್ರಾನ್ಸ್‌ ಭಾನುವಾರ ಕಣಕ್ಕಿಳಿಯಲಿದೆ. ಕತಾರ್‌ನಲ್ಲಿ ಈ ಬಾರಿ ಹೆಚ್ಚುವರಿ ಅವಧಿ ಮತ್ತು ಪೆನಾಲ್ಟಿ ಶೂಟೌಟ್‌ ಕಾಣದೆ ಫ್ರಾನ್ಸ್‌ ಫೈನಲ್‌ ಪ್ರವೇಶಿಸಿದೆ. ಆದರೆ ಅರ್ಜೆಂಟಿನಾ-ನೆದರ್‌ಲ್ಯಾಂಡ್ಸ್‌ ತಂಡಗಳ ನಡುವಿನ ಕ್ವಾರ್ಟರ್‌,  ಹೆಚ್ಚುವರಿ ಅವಧಿಗೆ ಮುಂದೂಡಲ್ಪಟ್ಟು, ಬಳಿಕ ಪೆನಾಲ್ಟಿ ಶೂಟೌಟ್‌ನಲ್ಲಿ ಮೆಸ್ಸಿ ಪಡೆ ಸೆಮಿಪೈನಲ್‌ ಪ್ರವೇಶಿಸಿತ್ತು. 

- Advertisement -

1930ರಲ್ಲಿ ನಡೆದ ಚೊಚ್ಚಲ ಫುಟ್‌ಬಾಲ್‌ ವಿಶ್ವಕಪ್‌ ಪಂದ್ಯವಳಿಯ ಫೈನಲ್‌ ಪ್ರವೇಶಿಸಿದ್ದ ಅರ್ಜೆಂಟಿನಾ, ಆತಿಥೇಯ ಉರುಗ್ವೆ ವಿರುದ್ಧ 4-2 ಅಂತರದಲ್ಲಿ ಸೋಲು ಕಂಡಿತ್ತು. ಆ ಬಳಿಕ ತನ್ನದೇ ನೆಲದಲ್ಲಿ1978ರಲ್ಲಿ  ನಡೆದ ವಿಶ್ವಕಪ್‌ ಟೂರ್ನಿಯಲ್ಲಿ ನೆದರ್‌ಲ್ಯಾಂಡ್ಸ್‌ ತಂಡವನ್ನು ಮಣಿಸಿ ಚಾಂಪಿಯನ್‌ ಪಟ್ಟವನ್ನು ತನ್ನದಾಗಿಸಿಕೊಳ್ಳುವಲ್ಲಿ ಅರ್ಜೆಂಟಿನಾ ಯಶಸ್ವಿಯಾಗಿತ್ತು. ಅದಾದ ಬಳಿಕ 1986 ರಲ್ಲಿ ಮೆಕ್ಸಿಕೋದಲ್ಲಿ ನಡೆದ ವಿಶ್ವಕಪ್‌ ಟೂರ್ನಿಯಲ್ಲಿ ಅರ್ಜೆಂಟಿನಾ, ಕೊನೆಯದಾಗಿ ವಿಶ್ವ ಚಾಂಪಿಯನ್‌ ಪಟ್ಟವನ್ನೇರಿತ್ತು.

ನಂತರದಲ್ಲಿ 1990 ಮತ್ತು 2014 ಆವೃತ್ತಿಗಳಲ್ಲಿ ರನ್ನರ್-ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಮತ್ತೊಂದೆಡೆ, ಮೊರೊಕ್ಕೊ ವಿರುದ್ಧದ ಗೆಲುವಿನೊಂದಿಗೆ ಫ್ರಾನ್ಸ್, ಫಿಫಾ ವಿಶ್ವಕಪ್ ಟೂರ್ನಿಯಲ್ಲಿ 4ನೇ‌ ಬಾರಿ ಫೈನಲ್ ತಲುಪಿದೆ. ಇದಕ್ಕೂ ಮೊದಲು 1998, 2006 ಹಾಗೂ 2018ರಲ್ಲಿ ಫ್ರಾನ್ಸ್ ಫೈನಲ್ ಫೈಟ್‌ನಲ್ಲಿ ಕಾಣಿಸಿಕೊಂಡಿದೆ. ಇದರಲ್ಲಿ 1998 ಮತ್ತು 2018ರಲ್ಲಿ ‘ವಿಶ್ವ ಚಾಂಪಿಯನ್‌’ ಆಗಿ ಸಂಭ್ರಮಿಸಿದ್ದಾರೆ. ಭಾನುವಾರ ಅರ್ಜೆಂಟಿನಾ ತಂಡವನ್ನು ಮಣಿಸುವಲ್ಲಿ ಫ್ರಾನ್ಸ್‌ ಯಶಸ್ವಿಯಾದರೆ ಇಟಲಿ, ಬ್ರೆಜಿಲ್‌ ತಂಡಗಳನ್ನೊಳಗೊಂಡ ಎಲೈಟ್‌ ಕ್ಲಬ್‌ಗೆ ಸೇರ್ಪಡೆಯಾಗಲಿದೆ.  

92 ವರ್ಷಗಳ ಫಿಫಾ ವಿಶ್ವಕಪ್‌ ಇತಿಹಾಸದಲ್ಲಿ 60 ವರ್ಷಗಳ ಬಳಿಕ ತಂಡವೊಂದು ಸತತ 2ನೇ ಬಾರಿಗೆ ಚಾಂಪಿಯನ್‌ ಪಟ್ಟಕ್ಕೇರಿದಂತಾಗುತ್ತದೆ. ಇದ್ಕೂ ಮೊದಲು 1962ರಲ್ಲಿ ಬ್ರೆಜಿಲ್‌ ಮತ್ತು 1938ರಲ್ಲಿ ಇಟಲಿ ಸತತ ಎರಡು ಬಾರಿ ಚಾಂಪಿಯನ್‌ ಆದ ದಾಖಲೆಯನ್ನು ಹೊಂದಿವೆ.



Join Whatsapp