ಫಿಫಾ ವಿಶ್ವಕಪ್‌| ಕ್ರೊವೇಷಿಯಾ ಮೂರನೇ ಸ್ಥಾನ

Prasthutha|

- Advertisement -

ಕತಾರ್‌ನಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್‌ ಟೂರ್ನಿಯ ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ, ಕ್ರೊವೇಷಿಯಾ, ಮೊರಕ್ಕೊ ತಂಡವನ್ನು 2-1 ಗೋಲುಗಳ ಅಂತರದಲ್ಲಿ ಮಣಿಸಿದೆ.

ಖಲೀಫಾ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಶನಿವಾರ ರಾತ್ರಿ ನಡೆದ ಪಂದ್ಯದ 7ನೇ ನಿಮಿಷದಲ್ಲಿ ಜೋಸ್ಕೊ ಗ್ವಾರ್ಡಿಯೋಲ್ ಗೋಲು ಗಳಿಸುವ ಮೂಲಕ ಕ್ರೊವೇಷಿಯಾಗೆ ಮುನ್ನಡೆ ತಂದುಕೊಟ್ಟಿದ್ದರು. ಆದರೆ, ಇದಾಗಿ ಎರಡೇ ನಿಮಿಷದಲ್ಲಿ ಅಚ್ರಾಫ್ ದರಿ ಗೋಲಿನ ಮೂಲಕ ಮೊರಕ್ಕೊ ಸಮಬಲ ಸಾಧಿಸಿತ್ತು. ಮೊದಲಾರ್ಧದ 42ನೇ ನಿಮಿಷದಲ್ಲಿ ಕ್ರೊವೇಷಿಯಾ ಪರ 2ನೇ ಗೋಲು ದಾಖಲಿಸಿದ ಮಿಸ್ಲಾವ್ ಓರ್ಸಿಕ್ ತಂಡಕ್ಕೆ ಮಹತ್ವದ ಮುನ್ನಡೆ ತಂದುಕೊಟ್ಟಿದ್ದರು.

- Advertisement -

2-1 ಅಂತರದಲ್ಲಿ ಅಂತ್ಯಕಂಡ ಪಂದ್ಯದ ಮೊದಲಾರ್ಧದ ನಂತರದಲ್ಲಿ ಯಾವುದೇ ಗೋಲು ದಾಖಲಾಗಲಿಲ್ಲ. ಉಭಯ ತಂಡಗಳ ಆಟಗಾರರು ಗೋಲ್‌ ಪೋಸ್ಟ್‌ ಗುರಿಯಾಗಿಸಿ ನಿರಂತರ ಮುನ್ನಡೆ ನಡೆಸಿದರೂ ಸಫಲತೆ ಕಾಣಲಿಲ್ಲ. 29 ಮತ್ತು 76ನೇ ನಿಮಿಷದಲ್ಲಿ ಮೊರಕ್ಕೊ ತಂಡದ ಸ್ಟಾರ್‌ ಆಟಗಾರ ಎನ್‌ ನೆಸ್ರಿ, ಇನ್ನೇನು ಗೋಲು ದಾಖಲಿಸಿದರೂ ಅನಿಸುವಷ್ಟರ ಮಟ್ಟಿಗೆ ಸನಿಹ ತಲುಪಿದರಾದರೂ, ಕ್ರೊವೇಷಿಯಾದ ಗೋಲ್‌ ಕೀಪರ್‌ ಲಿವಕೋವಿಕ್, ತಡೆಗೋಡೆಯಂತೆ ನಿಂತು ತಂಡದ ಪಾಲಿಗೆ ರಕ್ಷಕನಾದರು.  

ಈ ಗೆಲುವಿನೊಂದಿಗೆ ದಿಗ್ಗಜ ಮಿಡ್‌ಫೀಲ್ಡರ್, ಕ್ರೊವೇಷಿಯಾ ತಂಡದ ನಾಯಕ ಲೂಕಾ ಮಾಡ್ರಿಚ್‌ ಅವರಿಗೆ ‘ಗೌರವ‘ದ ಬೀಳ್ಕೊಡುಗೆ ದೊರೆತಿದೆ. 37 ವರ್ಷದ ಆಟಗಾರನಿಗೆ ಬಹುತೇಕ ಇದು ಕೊನೆಯ ವಿಶ್ವಕಪ್ ಆಗಿದೆ.

ಫಿಫಾ ವಿಶ್ವಕಪ್‌ ಇತಿಹಾಸದಲ್ಲೇ ಸೆಮಿಫೈನಲ್‌ ಪ್ರವೇಶಿಸುವ ಮೂಲಕ ಈ ಸಾಧನೆ ಮಾಡಿದ ಆಫ್ರಿಕಾದ ಮೊದಲ ರಾಷ್ಟ್ರವೆಂಬ ಖ್ಯಾತಿಗೆ ಮೊರೊಕ್ಕೊ ಪಾತ್ರವಾಗಿತ್ತು. ಮತ್ತೊಂದೆಡೆ, ಕಳೆದ ಬಾರಿ ರಷ್ಯಾದಲ್ಲಿ ನಡೆದಿದ್ದ ಫಿಫಾ ವಿಶ್ವಕಪ್‌ ಟೂರ್ನಿಯ ಫೈನಲ್‌ ಪ್ರವೇಶಿಸಿ, ಫ್ರಾನ್ಸ್‌ ಎದುರು ಸೋಲು ಕಂಡಿದ್ದ ಕ್ರೊವೇಷಿಯಾ, ಈ ಬಾರಿ ಸೆಮಿಫೈನಲ್‌ನಲ್ಲಿ ಅರ್ಜೆಂಟಿನಾ ವಿರುದ್ಧ 3-0 ಅಂತರದಲ್ಲಿ ಸೋಲು ಕಂಡಿತ್ತು.

ಬೆಲ್ಜಿಯಂ, ಸ್ಪೇನ್‌ ಹಾಗೂ ಪೋರ್ಚುಗಲ್‌ನಂತಹ ಬಲಿಷ್ಠ ತಂಡಗಳನ್ನು ಮಣಿಸಿ ಮೊರಕ್ಕೊ ಸೆಮಿಫೈನಲ್‌ ಪ್ರವೇಶಿಸಿತ್ತು. ವಿಶೇಷವೆಂದರೆ, ಸೆಮಿಫೈನಲ್‌ವರೆಗೂ ಒಂದೇ ಒಂದು ಗೋಲು ಬಿಟ್ಟುಕೊಡದ ಮೊರಕ್ಕೊ, ನಾಲ್ಕರ ಘಟ್ಟ ನಿರ್ಣಾಯಕ ಪಂದ್ಯದಲ್ಲಿ ಫ್ರಾನ್ಸ್‌ ವಿರುದ್ಧ 2-0 ಅಂತರದಲ್ಲಿ ಮಣಿದಿತ್ತು.

Join Whatsapp