ಒಂದು ಕೋಟಿ ಸುಪಾರಿ ಕೊಟ್ಟು ತಂದೆಯ ಕೊಲೆ: ಪುತ್ರ ಸೇರಿ ಮೂವರ ಬಂಧನ

Prasthutha|

ಬೆಂಗಳೂರು: ಆಸ್ತಿಗಾಗಿ ಬರೋಬ್ಬರಿ 1 ಕೋಟಿ ಸುಪಾರಿ ನೀಡಿ ತಂದೆಯನ್ನು ಕೊಲೆ ಮಾಡಿಸಿದ್ದ ಮಗ ಸೇರಿ ಮೂವರನ್ನು ಮಾರತ್ತಹಳ್ಳಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಾರತ್ ಹಳ್ಳಿಯ ಅಪಾರ್ಟ್ಮೆಂಟ್’ವೊಂದರ ವಾಹನ ನಿಲುಗಡೆ ಪ್ರದೇಶದಲ್ಲಿ ತಂದೆ ನಾರಾಯಣಸ್ವಾಮಿಯನ್ನು ಸುಪಾರಿ ಕೊಟ್ಟು ಕೊಲೆ ಮಾಡಿಸಿದ್ದ ಪುತ್ರ ಮಣಿಕಂಠ, ಸುಪಾರಿ ಪಡೆದ ಶಿವಕುಮಾರ್, ನವೀನ್ ಕುಮಾರ್ ಬಂಧಿತ ಆರೋಪಿಗಳಾಗಿದ್ದಾರೆ ಎಂದು ಡಿಸಿಪಿ ಎಸ್.ಗಿರೀಶ್ ತಿಳಿಸಿದ್ದಾರೆ.

- Advertisement -


ಕಳೆದ ಫೆ.13ರಂದು ಅಪಾರ್ಟ್’ಮೆಂಟ್ನ ವಾಹನ ನಿಲುಗಡೆ ಪ್ರದೇಶದಲ್ಲಿ ನಾರಾಯಣಸ್ವಾಮಿ (70) ಎಂಬುವರ ಕೊಲೆ ಆಗಿತ್ತು. ಪುತ್ರ ಮಣಿಕಂಠ ಶಿವಕುಮಾರ್, ನವೀನ್ ಕುಮಾರ್’ಗೆ ಮುಂಗಡ 1 ಲಕ್ಷ ನೀಡಿ ತನ್ನ ತಂದೆಯ ಕೊಲೆ ಮಾಡಲು 1 ಕೋಟಿ ರೂ. ಸುಪಾರಿ ನೀಡಿದ್ದ. ಅದರಂತೆಯೇ ಇಬ್ಬರು ದುಷ್ಕರ್ಮಿಗಳು ನಾರಾಯಣಸ್ವಾಮಿಯನ್ನು ಕೊಂದು ಪರಾರಿಯಾಗಿದ್ದು ಈ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿ ಕಾರ್ಯಾಚರಣೆ ಕೈಗೊಂಡು ಮೂವರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ ಎಂದರು.


ಘಟನೆ ಹಿನ್ನೆಲೆ:
ಮಣಿಕಂಠ ಹಿಂದೆ ತನ್ನ ಮೊದಲ ಪತ್ನಿಯನ್ನು ಕೊಲೆ ಮಾಡಿ ಜೈಲು ಸೇರಿ ಜಾಮೀನು ಜೈಲಿನಿಂದ ಹೊರಬಂದು ಎರಡನೇ ವಿವಾಹವಾಗಿದ್ದು ದಂಪತಿಗೆ ಒಬ್ಬ ಹೆಣ್ಣು ಮಗಳಿದ್ದಾಳೆ. ಎರಡನೇ ಮದುವೆ ಬಳಿಕವೂ ಮಣಿಕಂಠ ಬೇರೊಬ್ಬ ಮಹಿಳೆ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದನು. ಈ ವಿಚಾರ ಗೊತ್ತಾಗಿ ಎರಡನೇ ಪತ್ನಿ ಪತಿಯಿಂದ ದೂರವಾಗಿ ವಿಚ್ಛೇದನ ವಿಚಾರವಾಗಿಯೂ ಮಾತುಕತೆ ನಡೆಯುತ್ತಿತ್ತು.
ಆದರೆ ವಿಚ್ಛೇದನ ಕೊಡುವುದು ಬೇಡ ಎಂದು ಮಾವ ನಾರಾಯಣಸ್ವಾಮಿ ಕೇಳಿಕೊಂಡಿದ್ದನು. ಆದರೂ ಇದಕ್ಕೆ ಸೊಸೆ ಒಪ್ಪಲಿಲ್ಲ. ಹೀಗಾಗಿ ವಿಚ್ಛೇದನದ ಬಳಿಕ ಸೊಸೆ ಹಾಗೂ ಮೊಮ್ಮಗಳಿಗೆ ಕಷ್ಟವಾಗಬಹುದು, ಅವರ ಜೀವನ ನಿರ್ವಹಣೆ ಕಷ್ಟ ಆಗಲಿದೆ ಎಂದು ನಿವೇಶನವೊಂದನ್ನು ಅವರ ಹೆಸರಿಗೆ ಮಾಡಲು ಮಾವ ನಾರಾಯಣಸ್ವಾಮಿ ಮುಂದಾಗಿದ್ದರು.
ಸೊಸೆ ಹಾಗೂ ಮೊಮ್ಮಗಳ ಹೆಸರಿಗೆ ನಿವೇಶನ ನೊಂದಣಿ ಮಾಡಿಸಲು ನಾರಾಯಣಸ್ವಾಮಿ ತಯಾರಿ ನಡೆಸಿದ್ದ ಪುತ್ರ ಮಣಿಕಂಠನಿಗೆ ಇಷ್ಟವಿರಲಿಲ್ಲ. ಹೀಗಾಗಿ ತಂದೆ ಕೊಲೆಗೆ ಮಗ ಮಣಿಕಂಠ ಸುಪಾರಿ ನೀಡಿದ್ದಾನೆ ಎಂಬ ಅನುಮಾನ ವ್ಯಕ್ತವಾಗಿದೆ.

- Advertisement -


ಪತ್ನಿಯನ್ನೂ ಕೊಲ್ಲಲು ಯತ್ನ:
ಮೂರ್ನಾಲ್ಕು ತಿಂಗಳ ಹಿಂದೆ ಆರೋಪಿ ಮಣಿಕಂಠ ಎರಡನೇ ಪತ್ನಿಗೂ ಚಾಕು ಇರಿದು ಕೊಲೆ ಮಾಡಲು ಯತ್ನಿಸಿದ್ದು ಪೊಲೀಸರು ಠಾಣೆಗೆ ಕರೆಸಿ ಇಬ್ಬರಿಗೂ ಸರಿಯಾಗಿ ಬಾಳುವಂತೆ ಕೇಸ್ ದಾಖಲಿಕೊಳ್ಳದೆ ಸಂಧಾನ ಮಾಡಿಕಳುಹಿಸಿದ್ದರು.ಆದರೂ ಮಣಿಕಂಠನ ವರ್ತನೆ ಸರಿಯಾಗಿರಲಿಲ್ಲ ಎಂದು ತಿಳಿಸಿದರು.

Join Whatsapp