ರಾಯಚೂರು: ತಂದೆಯೊಬ್ಬ 14 ತಿಂಗಳ ತನ್ನ ಹಸುಗೂಸನ್ನು ಕೊಂದಿರುವ ಘಟನೆ ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಕನಸಾವಿ ಗ್ರಾಮದಲ್ಲಿ ನಡೆದಿದೆ.
14 ತಿಂಗಳ ಅಭಿನವ್ ತಂದೆಯಿಂದಲೇ ಹತ್ಯೆಗೀಡಾದ ಮಗು. ತನ್ನ ಮಗುವನ್ನೇ ಕೊಂದು 3 ದಿನ ಕಲ್ಲಿನ ಅಡಿಯಲ್ಲಿ ಮುಚ್ಚಿಟ್ಟ ತಂದೆ ಮಹಾಂತೇಶ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಮತ್ತೊಂದು ಮದುವೆಯಾಗುವ ಆಸೆಯಿಂದ ಮಗುವನ್ನು ಕೊಂದು ಕಲ್ಲಿನ ಅಡಿಯಲ್ಲಿ 3 ದಿನ ಮುಚ್ಚಿಟ್ಟಿರುವುದಾಗಿ ಆರೋಪಿ ಬಾಯ್ಬಿಟ್ಟಿದ್ದಾನೆ.
ಪರ ಪುರುಷನೊಂದಿಗೆ ಪತ್ನಿ ಅನೈತಿಕ ಸಂಬಂಧ ಹೊಂದಿರುವ ಬಗ್ಗೆ ಅನುಮಾನ ಹೊಂದಿದ್ದ ಮಹಾಂತೇಶ್ ಮತ್ತೊಂದು ಮದುವೆಗೆ ತಯಾರಿ ನಡೆಸಿದ್ದ. ಮರು ಮದುವೆಗೆ ಮಗು ಅಡ್ಡಿಯಾಗುತ್ತದೆ ಎಂದು ಕೊಲೆ ಮಾಡಿದ್ದಾನೆ.
ಅನುಮಾನದ ಮೇಲೆ ಪೊಲೀಸರು ಹಂತಕ ತಂದೆಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಮೊದಲು ಮಗುವನ್ನು ಸುಟ್ಟು ಹಾಕಿರುವುದಾಗಿ ಮಾಹಿತಿ ನೀಡಿದ್ದ. ಬಳಿಕ ಕಲ್ಲಿನ ಅಡಿ ಮುಚ್ಚಿಟ್ಟ ಮಗುವನ್ನು ತೋರಿಸಿದ್ದಾನೆ. ಘಟನೆ ಹಿನ್ನೆಲೆ ಮುದಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.