ನವದೆಹಲಿ : ಬಿಜೆಪಿ ಸರಕಾರದ ನೂತನ ಕೃಷಿ ಕಾನೂನುಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ಕಳೆದ 71 ದಿನಗಳಿಂದ ದೆಹಲಿ ಗಡಿ ಭಾಗಗಳಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಯನ್ನು ಜಗದ್ವಿಖ್ಯಾತ ಗಾಯಕಿ ರಿಹಾನ್ನಾ ಬೆಂಬಲಿಸಿದ್ದಾರೆ.
ಹರ್ಯಾಣದ 17 ಜಿಲ್ಲೆಗಳಲ್ಲಿ ಇಂಟರ್ನೆಟ್ ಕಡಿತಗೊಳಿಸಲಾಗಿದೆ. ದೆಹಲಿ ಗಡಿ ಭಾಗಗಳಲ್ಲೂ ಇಂಟರ್ನೆಟ್ ಸ್ಥಗಿತಗೊಳಿಸಲಾಗಿದೆ. ಈ ಬಗ್ಗೆ ಸಿಎನ್ ಎನ್ ವರದಿಯನ್ನು ಉಲ್ಲೇಖಿಸಿ ರಿಹನ್ನಾ ಈ ಹೇಳಿಕೆಯನ್ನು ಟ್ವೀಟ್ ಮಾಡಿದ್ದಾರೆ.
“ನಾವ್ಯಾಕೆ ಈ ಕುರಿತು ಮಾತನಾಡುತ್ತಿಲ್ಲ?” ಎಂದು ಬರೆದು, ರೈತರ ಪ್ರತಿಭಟನೆಯ ಕುರಿತು ಹ್ಯಾಶ್ ಟ್ಯಾಗ್ ಕೂಡ ಬಳಸಿದ್ದಾರೆ. 10 ಕೋಟಿ ಹಿಂಬಾಲಕರನ್ನು ಹೊಂದಿರುವ ರಿಹಾನ್ನಾರ ಈ ಟ್ವೀಟ್ ಅನ್ನು 4.20 ಲಕ್ಷ ಮಂದಿ ಲೈಕ್ ಮಾಡಿದ್ದಾರೆ, 1.98 ಲಕ್ಷ ಮಂದಿ ರೀಟ್ವೀಟ್ ಮಾಡಿದ್ದಾರೆ ಮತ್ತು 62 ಸಾವಿರ ಮಂದಿ ಪ್ರತಿಕ್ರಿಯಿಸಿದ್ದಾರೆ.
“ಭಾರತದಲ್ಲಿ 250 ಮಿಲಿಯನ್ ಗೂ ಹೆಚ್ಚಿನ ರೈತರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. ಅವರಿಗೋಸ್ಕರ ಧ್ವನಿ ಎತ್ತಿದ್ದಕ್ಕಾಗಿ ಧನ್ಯವಾದ” ಎಂದು ಟ್ವಿಟರ್ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ. ಇನ್ನೊಂದೆಡೆ, ರೈತರಿಗೆ ರಿಹಾನ್ನಾ ಬೆಂಬಲ ನೀಡಿರುವ ವಿಷಯಕ್ಕೆ ಸಂಬಂಧಿಸಿ ಬಿಜೆಪಿ ಬೆಂಬಲಿಗರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಂಗ್ಯಭರಿತ ಸಂದೇಶಗಳೂ ಹರಿದಾಡುತ್ತಿವೆ.