ನವದೆಹಲಿ : ಕಳೆದ ಎರಡು ತಿಂಗಳಿಗಿಂತಲೂ ಹೆಚ್ಚಿನ ದಿನಗಳಿಂದ ದೆಹಲಿ ಗಡಿ ಭಾಗಗಳಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯಲ್ಲಿ ಭಾಗವಹಿಸಲು ಪಂಜಾಬ್ ನಿಂದ ಆಗಮಿಸುತ್ತಿದ್ದ 1000ಕ್ಕೂ ಹೆಚ್ಚು ರೈತರಿದ್ದ ಪ್ರಯಾಣಿಕರ ರೈಲನ್ನು ಬೇರೆಡೆಗೆ ತಿರುಗಿಸಿರುವ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಕಾರ್ಯನಿರ್ವಹಣಾ ಒತ್ತಡದಿಂದ ರೈಲು ಹಾದಿಯನ್ನು ತಿರುಗಿಸಲಾಗಿದೆ ಎಂದು ರೈಲ್ವೆ ಇಲಾಖೆ ಸಮರ್ಥನೆ ನೀಡಿದೆ.
ಮುಂಬೈಗೆ ಪ್ರಯಾಣಿಸುತ್ತಿದ್ದ ಪಂಜಾಬ್ ಮೇಲ್ ರೈಲನ್ನು ರೇವರಿಗೆ ತಿರುಗಿಸಲಾಗಿದೆ. ದೆಹಲಿಯ ರೋಹ್ಟಕ್ ಮತ್ತು ಶಕುರ್ ಬಸ್ತಿ ನಡುವೆ, ಸಮಸ್ಯೆಯಿತ್ತು ಎಂದು ಇಲಾಖೆಯ ಕೆಲವರು ಹೇಳಿದ್ದಾರೆ. ಆದರೆ, ರೈಲು ತಿರುಗಿಸಲು ನಿರ್ದಿಷ್ಟ ಕಾರಣವೇನೆಂದು ಹೇಳಲು ಸಿದ್ಧರಿಲ್ಲ.
ಪ್ರತಿಭಟನಾ ಸ್ಥಳಕ್ಕೆ ದೊಡ್ಡ ಸಂಖ್ಯೆಯ ರೈತರು ತಲುಪದಿರಲೆಂದೇ ರೈಲನ್ನು ತಿರುಗಿಸಲಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗಳಾಗುತ್ತಿವೆ.