ರೈತರ ಪ್ರತಿಭಟನೆ | ಸಿಖ್ಖರ ವೇಷದಲ್ಲಿ SDPI ಕಾರ್ಯಕರ್ತನೆಂದು ಬಿಂಬಿಸಲು 2011ರ ವೀಡಿಯೊ ವೈರಲ್ ಮಾಡಿದ ದುಷ್ಟರು!

Prasthutha|

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಸರಕಾರದ ನೂತನ ಕೃಷಿ ನೀತಿ ವಿರೋಧಿಸಿ ಉತ್ತರ ಭಾರತದ ರೈತರು ಕೊರೆವ ಚಳಿಯಲ್ಲೂ ಬೀದಿಗಿಳಿದು ಹೋರಾಟ ನಡೆಸುತ್ತಿದ್ದಾರೆ. ಆದರೆ, ಈ ಹೋರಾಟದ ಬಗ್ಗೆ ತಪ್ಪು ಕಲ್ಪನೆಗಳನ್ನು ಮೂಡಿಸಲು ಬಿಜೆಪಿಗರು ಪ್ರಯತ್ನಿಸುವುದು ಸಹಜ. ತಮ್ಮ ಪಕ್ಷದ ಆಡಳಿತವನ್ನು ಸಮರ್ಥಿಸಿಕೊಳ್ಳುವುದು ಅವರಿಗೆ ಅನಿವಾರ್ಯವೆಂದು ಭಾವಿಸೋಣ. ಆದರೆ, ದೇಶದ ಮುಖ್ಯವಾಹಿನಿಯ ಪ್ರಮುಖ ಪತ್ರಕರ್ತರೂ, ರೈತರ ಪ್ರತಿಭಟನೆಯ ಬಗ್ಗೆ ತಪ್ಪು ಅಭಿಪ್ರಾಯಗಳನ್ನು ಸೃಷ್ಟಿಸಲು ಹೋಗಿ ಪೇಚಿಗೆ ಸಿಲುಕುತ್ತಿರುವುದು ಇತ್ತಿಚೆಗೆ ಕಂಡುಬರುತ್ತಿರುವುದು ಮಾತ್ರ ವಿಷಾಧನೀಯ. ಇದೀಗ ಕರ್ನಾಟಕದಲ್ಲೂ ದೊಡ್ಡ ದೊಡ್ಡ ಪತ್ರಿಕೆಗಳಲ್ಲಿ ಕೆಲಸ ಮಾಡಿದ ಪತ್ರಕರ್ತ, ‘ವಿಶ್ವವಾಣಿ’ ಸಂಪಾದಕ ವಿಶ್ವೇಶ್ವರ ಭಟ್ ಕೂಡ ಇದೇ ರೀತಿ ಪೇಚಿಗೊಳಗಾಗಿರುವ ಘಟನೆ ನಡೆದಿದೆ.

- Advertisement -

ಸಿಖ್ಖರ ಶಿರವಸ್ತ್ರ ಧರಿಸಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿ, ಆತನ ಶಿರವಸ್ತ್ರ ತೆಗೆಯುವ ವೀಡಿಯೊವೊಂದನ್ನು ಹಲವು ಬಿಜೆಪಿ ಬೆಂಬಲಿಗರು ತಮ್ಮ ಫೇಸ್ ಬುಕ್ ಪೋಸ್ಟ್ ಗಳಲ್ಲಿ ಶೇರ್ ಮಾಡಿದ್ದರು. ಅಲ್ಲದೆ, “ಸರ್ದಾರ್ಜಿ(ಸಿಖ್ಖರು) ರೀತಿ ಬಟ್ಟೆ ತೊಟ್ಟಿದ್ದ ಎಸ್ ಡಿಪಿಐ ಕಾರ್ಯಕರ್ತ ನಝೀರ್ ಮೊಹಮ್ಮದ್ ಇಂದು ಮುಂಜಾನೆ ಹರ್ಯಾಣದಲ್ಲಿ ರೈತರ ಪ್ರತಿಭಟನೆಯಲ್ಲಿ ಬಂಧಿತನಾಗಿದ್ದಾನೆ” ಎಂಬ ಸಂದೇಶ ಆ ವೀಡಿಯೊದೊಂದಿಗೆ ಹರಿಬಿಡಲಾಗಿತ್ತು.

ನರೇಶ್ ಶೆಣೈ ಎಂಬವರು ನ.30ರಂದು ಈ ವೀಡಿಯೊವನ್ನು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದರು. ಕನ್ನಡ ದೈನಿಕ ‘ವಿಶ್ವವಾಣಿ’ ಸಂಪಾದಕ ವಿಶ್ವೇಶ್ವರ ಭಟ್ ಕೂಡ ಈ ವೀಡಿಯೊ ಟ್ವೀಟ್ ಮಾಡಿ ಮತ್ತೆ ಅದನ್ನು ವಾಪಾಸ್ ಪಡೆದಿದ್ದರು ಎಂದು ‘ಆಲ್ಟ್ ನ್ಯೂಸ್’ ವರದಿ ಮಾಡಿದೆ.

- Advertisement -

ಪ್ರಧಾನಿ ನರೇಂದ್ರ ಮೋದಿ ಫಾಲೋ ಮಾಡುವ ಬಿಜೆಪಿ ಬೆಂಬಲಿಗೆ ರೇಣುಕಾ ಜೈನ್ ಕೂಡ ಇಂತಹುದೇ ತಪ್ಪು ಮಾಹಿತಿಯನ್ನೊಳಗೊಂಡ ಟ್ವೀಟ್ ಮಾಡಿ ಮತ್ತೆ ಹಿಂದಕ್ಕೆ ಪಡೆದಿದ್ದರು. ಹಲವು ಫೇಸ್ ಬುಕ್ ಬಳಕೆದಾರರು ಕೂಡ ಈ ವೀಡಿಯೊವನ್ನು ಇದೇ ಅರ್ಥದಲ್ಲಿ ಶೇರ್ ಮಾಡಿದ್ದರು.

ಒಂದು ಟ್ವಿಟರ್ ಖಾತೆಯಲ್ಲಿ ರೈತರ ಪ್ರತಿಭಟನೆಯಲ್ಲಿ ಪೊಲೀಸರು ಸೆರೆ ಹಿಡಿದ ಪಾಪ್ಯುಲರ್ ಫ್ರಂಟ್ ನ ನಝೀರ್ ಮುಹಮ್ಮದ್ ಎಂದೂ ಪ್ರಕಟಿಸಲಾಗಿದೆ.

ಈ ವಿವಾದಾತ್ಮಕ ವೀಡಿಯೊ ಬಗ್ಗೆ ‘ಆಲ್ಟ್ ನ್ಯೂಸ್’ ಸತ್ಯಾಂಶ ಶೋಧಿಸಿದ್ದು, ಈ ಕುರಿತು ಹೆಚ್ಚಿನ ಮಾಹಿತಿಯನ್ನು ಹೊರಹಾಕಿದೆ. ಕಳೆದ ವರ್ಷವೂ ಇದೇ ವೀಡಿಯೊ ಸಿಖ್ಖರಂತೆ ವೇಷಧರಿಸಿದ್ದ ಮುಸ್ಲಿಂ ವ್ಯಕ್ತಿ ಎಂಬರ್ಥದಲ್ಲಿ ಪ್ರಸಾರವಾಗಿತ್ತು. ಆದರೆ, ಈ ವೀಡಿಯೊ ಬರೋಬ್ಬರಿ 10 ವರ್ಷಗಳ ಹಿಂದಿನದ್ದು. 2011, ಮಾ.28ರಂದು ಪಂಜಾಬ್ ನ ಮೊಹಾಲಿಯ ಪಿಸಿಎ ಸ್ಟೇಡಿಯಂ ಬಳಿ ನಡೆದ ಘಟನೆಗೆ ಸಂಬಂಧಿಸಿದ್ದು ಎಂದು ‘ಸಿಖ್ ನೆಟ್ ಡಾಟ್ ಕಾಂ’ ವೆಬ್ ಮೀಡಿಯಾದಲ್ಲಿ ಪ್ರಸಾರವಾಗಿತ್ತು.

ಆ ವರದಿಯ ಪ್ರಕಾರ, “ಗ್ರಾಮೀಣ ಪಶುಸಂಗೋಪನಾ ಫಾರ್ಮಾಸಿಸ್ಟ್ ಗಳು ಮತ್ತು ನೌಕರರ ಶಾಂತಿಯುತ ಧರಣಿಯಲ್ಲಿ ಸಿಖ್ ಯುವಕನೊಬ್ಬನನ್ನು ಪೊಲೀಸರು ಬದಿಗೆ ಎಳೆದೊಯ್ದು, ಕಾರಣ ನೀಡದೆ ಆತನ ಶಿರವಸ್ತ್ರ ಬಲವಂತವಾಗಿ ತೆಗೆದಿದ್ದಾರೆ” ಎಂದು ಹೇಳಲಾಗಿತ್ತು.

ಈ ಘಟನೆಗೆ ಸಂಬಂಧಿಸಿ ಸಿಖ್ ಯುವಕನ ಶಿರವಸ್ತ್ರ ತೆಗೆದುದಕ್ಕೆ ಪೊಲೀಸರ ವಿರುದ್ಧ ಯುನೈಟೆಡ್ ಸಿಖ್ಖರು ಎಂಬ ಸಂಘಟನೆ ನ್ಯಾಯಾಲಯದಲ್ಲಿ ದೂರು ಕೂಡ ದಾಖಲಿಸಿತ್ತು. ಅವರು ಈ ಸಂಬಂಧ ಪ್ರಧಾನಿ, ಸಿಜೆಐ, ಎನ್ ಎಚ್ ಆರ್ ಸಿಗೆ ಈ ಸಂಬಂಧ ಪತ್ರವನ್ನೂ ಬರೆದಿದ್ದರು.

ನೌಕರರು ತಮ್ಮ ಉದ್ಯೋಗವನ್ನು ಖಾಯಂಗೊಳಿಸುವಂತೆ ಒತ್ತಾಯಿಸಿ ಈ ಪ್ರತಿಭಟನೆ ನಡೆಸಿದ್ದರು. 2011ರ ಮಾ.28ರಂದು ನಡೆದ ಈ ಪ್ರತಿಭಟನೆ ಹಿಂಸಾತ್ಮಕ ರೂಪ ತಾಳಿತ್ತು. 2011, ಮಾ.29ರಂದು ಇದೇ ವೀಡಿಯೊ ಯೂಟ್ಯೂಬ್ ನಲ್ಲಿ ಅಪ್ ಲೋಡ್ ಆಗಿತ್ತು.

ಇದೇ ವೀಡಿಯೊ 2019ರಲ್ಲಿ ಹರ್ಯಾಣದಲ್ಲಿ ರೈತರ ಪ್ರತಿಭಟನೆಯ ವೇಳೆಯೂ ಹರಿಬಿಡಲಾಗಿತ್ತು ಮತ್ತು ಸಿಖ್ ವೇಷದಲ್ಲಿ ಎಸ್ ಡಿಪಿಐ ಕಾರ್ಯಕರ್ತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂಬರ್ಥದಲ್ಲಿ ಪ್ರಸಾರ ಮಾಡಲಾಗಿತ್ತು. ಇದೀಗ ಎಸ್ ಡಿಪಿಐ ಬಗ್ಗೆ ಕೆಟ್ಟ ಅಭಿಪ್ರಾಯವನ್ನು ಜನರಲ್ಲಿ ಮೂಡಿಸುವ ಮತ್ತು ರೈತರ ನಿಜವಾದ ಹೋರಾಟದ, ಚಳವಳಿಯ ಮಹತ್ವವನ್ನು ಕುಗ್ಗಿಸುವ ಯತ್ನವಾಗಿ ಈ ದುಷ್ಕೃತ್ಯವನ್ನು ಎಸಗಲಾಗಿದೆ. ತಮ್ಮ ಸರಕಾರದ ವೈಫಲ್ಯವನ್ನು ಸಮರ್ಥಿಸಿಕೊಳ್ಳಲು ಬಿಜೆಪಿಗರು ಯಾವ ಹಂತಕ್ಕಾದರೂ ಇಳಿಯಬಲ್ಲರು ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.    



Join Whatsapp