ಮಂಗಳೂರು, ಜು.24: ಬಿಜೆಪಿ ರಾಜ್ಯ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಮ್ಮ ಆತ್ಮೀಯರೊಂದಿಗೆ ಹೇಳಿರುವ, ‘ಏನಾದರು ಕೊಡುವುದಿದ್ದರೆ ಈಗ ಕೊಡುವುದು ಬೇಡ, ಮುಖ್ಯಮಂತ್ರಿ ಬದಲಾವಣೆ ಆಗುತ್ತಿದೆ’ಎಂದಿರುವುದು ಜಿಲ್ಲೆಯಲ್ಲಿ ನಡೆಯುತ್ತಿರುವ ವ್ಯಾಪಕ ಭ್ರಷ್ಟಾಚಾರಕ್ಕೆ ಕನ್ನಡಿ ಹಿಡಿದಂತಿದೆ ಎಂದು ಮಾಜಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.
ಶನಿವಾರ ನಗರದ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಅವರು ಮಾತನಾಡಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಾವ ಮಟ್ಟದ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಬಿಜೆಪಿ ಅಧ್ಯಕ್ಷರ ಮಾತುಗಳಿಂದ ಬಯಲಾಗುತ್ತಿದೆ ಎಂದರು.
ಜಿಲ್ಲೆಯ ಶಾಸಕರ ಬಗ್ಗೆ ಕನಿಕರ:
ಬಿಜೆಪಿಯ ಜಿಲ್ಲಾಧ್ಯಕ್ಷರ ಧ್ವನಿ ಯಾವ ತಿಳಿದುಕೊಳ್ಳಲಾಗದ ಜಿಲ್ಲೆಯ ಬಿಜೆಪಿ ಶಾಸಕರ ಬಗ್ಗೆ ಕನಿಕರ ಆಗುತ್ತಿದೆ ಎಂದು ರಮಾನಾಥ ರೈ ವ್ಯಂಗ್ಯವಾಡಿದರು.
ನಳಿನ್ ಕುಮಾರ್ 15 ವರ್ಷಗಳಿಂದ ಸಂಸದರಾಗಿದ್ದಾರೆ. ಶಾಸಕರಿಗೆ ರಾಜ್ಯ ಅಧ್ಯಕ್ಷರ ಧ್ವನಿ ಗುರುತು ಹಿಡಿಯಲು ಅಸಾಧ್ಯ ಆಗುತ್ತಿದೆ ಅಂದರೆ ಇವರು ಜನರ ಅಹವಾಲುಗಳಿಗೆ ಸ್ಪಂದನೆ ನೀಡಲು ಸಾಧ್ಯವೇ ಇಲ್ಲ ಎಂದು ಮಾಜಿ ಸಚಿವರು ಹೇಳಿದರು.
ವೈರಲ್ ಆದ ನಳಿನ್ ಕುಮಾರ್ ಆಡಿಯೋ ಕ್ಲಿಪ್ ಬಗ್ಗೆ ತನಿಖೆ ನಡೆಸಬೇಕೆಂಬ ಬಿಜೆಪಿ ಶಾಸಕರ ನಿಯೋಗ ಮಂಗಳೂರು ಪೊಲೀಸ್ ಆಯುಕ್ತರಲ್ಲಿ ಮನವಿ ಮಾಡಿದೆ. ತನಿಖೆಗೆ ಮನವಿ ಮಾಡಿ ಒಂದು ವಾರ ಆದರೂ ತನಿಖೆಯ ಫಲಿತಾಂಶ ಬಂದಿಲ್ಲ. ಮುಖ್ಯಮಂತ್ರಿ ಯಡಿಯೂರಪ್ಪ ವೃದ್ಧರಾದರು ಅವರಿಗೆ ನಳಿನ್ ಕುಮಾರ್ ಧ್ವನಿ ಪರಿಚಯಗೊತ್ತಿದೆ. ಆದರೆ, ಯುವ ಬಿಜೆಪಿ ಶಾಸಕರಿಗೆ ಧ್ವನಿಗೊತ್ತಾಗದಿರುವುದು ವಿಪರ್ಯಾಸ ಎಂದವರು ಹೇಳಿದರು. ಮಂಗಳೂರಿನ ಬುದ್ಧಿವಂತ ಪತ್ರಕರ್ತರಿಗೆ ನಳಿನ್ ಕುಮಾರ್ ಧ್ವನಿ ಪರಿಚಯವಿದೆ. ನಳಿನ್ ಅವರ ವ್ಯಂಗ್ಯ ನಗುವನ್ನು ಯಾರಿಂದಲೂ ಮಿಮಿಕ್ರಿ ಮಾಡಲು ಸಾಧ್ಯವಿಲ್ಲ ಎಂದರು.
ಪೊಲೀಸ್ ಕಮಿಷನರ್ ಎಕ್ಸ್ ಪರ್ಟ್:
ಮಂಗಳೂರು ಪೊಲೀಸ್ ಕಮಿಷನರ್ ಸಾಮಾಜಿಕ ಜಾಲತಾಣ ವಿಚಾರದಲ್ಲಿ, ಅದರಲ್ಲೂ ನಿರ್ದಿಷ್ಟವಾಗಿ ಇಂತಹ ಪ್ರಕರಣಗಳಲ್ಲಿ ಪತ್ತೆ ಮಾಡುವುದರಲ್ಲಿ ನಿಸ್ಸೀಮ, ಎಕ್ಸ್ ಪರ್ಟ್ ಇದ್ದಾರೆ ಹೇಳಿದ ರೈ ಯವರು, ಸೋಶಿಯಲ್ ಮೀಡಿಯಾ ಪ್ರಕರಣಗಳಲ್ಲಿ ಈ ಹಿಂದೆ ಕೆಲವರನ್ನು ಒಳಗೆ ಕೂಡ ಹಾಕಿದ್ದಾರೆ. ಅಂತಹ ನಿಸ್ಸೀಮ ಪೊಲೀಸ್ ಆಯುಕ್ತರಿಗೆ ಈ ಪ್ರಕರಣ ಕಂಡು ಹಿಡಿಯಲು ಕಷ್ಟ ಆಗುವುದಿಲ್ಲ ಎಂದರು.
ಈ ವೈರಲ್ ಆಡಿಯೋ ವೈರಲ್ ಆಗಲು ಕಾಂಗ್ರೆಸ್ ಕೈವಾಡ ಇದೆ ಎಂದು ಆರೋಪವನ್ನು ಬಿಜೆಪಿ ಮಾಡುತ್ತಿದೆ. ಆದುದರಿಂದ ತನಿಖೆ ಆಗಲೇ ಬೇಕಾಗುತ್ತದೆ. ಸಾಮಾನ್ಯವಾಗಿ ದೇಶದಲ್ಲಾಗಲಿ ಬಿಜೆಪಿ ಸರಕಾರಗಳು ಯಾವುದೇ ಆರೋಪಗಳ ತನಿಖೆ ನಡೆಸುವುದಿಲ್ಲ. ಕಳೆದ ಬಾರಿ ಕಾಂಗ್ರೆಸ್ ಸರಕಾರ 7 ಪ್ರಕರಣಗಳನ್ನು ಸಿಬಿಐಗೆ ನೀಡಿತ್ತು. ಇವರು ಒಂದೇ ಒಂದು ಪ್ರಕರಣ ತನಿಖೆಗೆ ನೀಡಿಲ್ಲ ಎಂದರು.
ಸಂದರ್ಭದಲ್ಲಿರುವ ಶಿಶುವಿನ ಆಹಾರ ಕದಿಯುವವರು:
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಮಕ್ಕಳಿಗೆ ನೀಡುವ ಆಹಾರದಲ್ಲೂ ಭ್ರಷ್ಟಾಚಾರ ಮಾಡುತ್ತಿದೆ ಎಂದು ವರದಿಯಾಗಿದೆ.
ಅಂಗನವಾಡಿ ಕಾರ್ಯಕ್ರಮ ತಂದವರು ಇಂದಿರಾಗಾಂಧಿ. ಅಲ್ಲಿ ಮಕ್ಕಳಿಗೆ ಮಾತ್ರವಲ್ಲ ಗರ್ಭಿಣಿ ಮಹಿಳಎಯರಿಗೆ ಕೂಡ ಪೌಷ್ಠಿಕ ಆಹಾರ ನೀಡಲಾಗುತ್ತಿದೆ. ಕಾಂಗ್ರೆಸ್ ಸರ್ಕಾರ ಹಾಲು ಮತ್ತು ಮೊಟ್ಟೆ ನೀಡಲು ಆರಂಭಿಸಿತ್ತು. ಸಚಿವೆ ಜೊಲ್ಲೆ ಅವರು ಮತ್ತು ಬಿಜೆಪಿಯವರು ಗರ್ಭಿಣಿ ಶಿಶುವಿನ ಆಹಾರವನ್ನು ಕದಿಯುವ ಹೀನಾಯ ಕೆಲಸ ಮಾಡಿದೆ. ಈ ಬಗ್ಗೆ ತನಿಖೆ ನಡೆಯಲಿ ಎಂದು ರಮಾನಾಥ ರೈ ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಮಾಜಿ ಉಪಮಹಾಪೌರ ಪುರುಷೋತ್ತಮ ಚಿತ್ರಾಪುರ, ಕಾರ್ಪೊರೇಟರ್ ಅಬ್ದುಲ್ ರವೂಫ್, ಮಹಿಳಾ ಕಾಂಗ್ರೆಸ್ ನಾಯಕಿ ಕು.ಅಪ್ಪಿ, ಗುರುಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಂದ್ರ ಬಿ. ಕಂಬಳಿ, ಕಾಂಗ್ರೆಸ್ ಮುಖಂಡ ಗಣೇಶ್ ಪೂಜಾರಿ, ಜಿಲ್ಲಾ ಕಾಂಗ್ರೆಸ್ ಪ್ರ.ಕಾರ್ಯದರ್ಶಿಗಳಾದ ನೀರಜ್ ಚಂದ್ರ ಪಾಲ್, ಶಬ್ಬೀರ್ ಎಸ್, ನಝೀರ್ ಬಜಾಲ್, ಯುವ ಕಾಂಗ್ರೆಸ್ ಮುಖಂಡ ಆಶೀತ್ ಜಿ. ಪಿರೇರಾ, ಎನ್.ಎಸ್.ಯು.ಐ ಮುಖಂಡ ಫಾರೂಕ್ ಬಯಾಬೆ ಉಪಸ್ಥಿತರಿದ್ದರು.