July 24, 2021

ಬಿಜೆಪಿಯವರು ಮಕ್ಕಳು ತಿನ್ನುವ ಮೊಟ್ಟೆಯಲ್ಲೂ ಲಂಚ ಪಡೆಯುವಷ್ಟು ಕೆಳ ಮಟ್ಟಕ್ಕೆ ಇಳಿಯುತ್ತಾರೆ ಎಂದುಕೊಂಡಿರಲಿಲ್ಲ; ಸಿದ್ದರಾಮಯ್ಯ

ತುಮಕೂರು, ಜು.24: ಬಿಜೆಪಿಯ ಒಬ್ಬ ಭ್ರಷ್ಟ ಮುಖ್ಯಮಂತ್ರಿ ರಾಜೀನಾಮೆ ನೀಡಿದರೆ, ಆ ಸ್ಥಾನಕ್ಕೆ ಇನ್ನೊಬ್ಬ ಭ್ರಷ್ಟ ಬರುತ್ತಾನೆ. ಇಡೀ ಬಿಜೆಪಿ ಪಕ್ಷ ಭ್ರಷ್ಟರಿಂದ ತುಂಬಿದೆ ಎಂದು ವಿಧಾನಸಭೆಯ ವಿಪಕ್ಷ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.


ತುಮಕೂರಿನಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಮಾಜಿ, ಹಾಲಿ ಶಾಸಕರು, ಸಂಸದರು, ಪರಾಜಿತ ಅಭ್ಯರ್ಥಿಗಳು, ಕಾಂಗ್ರೆಸ್ ಮುಖಂಡರ ಸಭೆಯ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಪಕ್ಷ ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿದೆ, ಈಗ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನದಿಂದ ಇಳಿಯುತ್ತಾರಂತೆ, ಒಬ್ಬ ಭ್ರಷ್ಟ ಮುಖ್ಯಮಂತ್ರಿ ಹೋದರೆ ಬರುವ ಇನ್ನೊಬ್ಬ ಮುಖ್ಯಮಂತ್ರಿಯೂ ಭ್ರಷ್ಟನೇ ಆಗಿರುತ್ತಾನೆ, ಕಾರಣ ಬಿಜೆಪಿ ಪಕ್ಷವೇ ಭ್ರಷ್ಟರಿಂದ ತುಂಬಿದೆ ಎಂದರು.


ಕೊರೊನಾ ನಿರ್ವಹಣೆಯ ಉಪಕರಣ ಖರೀದಿ, ಆಸ್ಪತ್ರೆ, ವೆಂಟಿಲೇಟರ್, ಹಾಸಿಗೆ ಖರೀದಿಯಲ್ಲೂ ಭ್ರಷ್ಟಾಚಾರ ನಡೆಸಿದವರು ಬಿಜೆಪಿಯವರು. ಈಗ ಚಿಕ್ಕ ಮಕ್ಕಳಿಗೆ ನೀಡುವ ಮೊಟ್ಟೆಯಲ್ಲೂ ಲಂಚಕ್ಕೆ ಬೇಡಿಕೆಯಿಟ್ಟಿದ್ದಾರೆ. ಈ ವಿಚಾರ ಖಾಸಗಿ ಸುದ್ದಿ ವಾಹಿನಿ ನಡೆಸಿದ ಸ್ಟಿಂಗ್ ಆಪರೇಷನ್ ನಿಂದ ಬಹಿರಂಗಗೊಂಡಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಸಾಕ್ಷಿ ಸಮೇತ ಸಿಕ್ಕಿಬಿದ್ದಿದ್ದಾರೆ. ಆದರೂ ಬಿಜೆಪಿ ನಾಯಕರಿಗೆ ನಾಚಿಕೆಯಾಗಲ್ಲ ಎಂದು ಕಿಡಿಕಾರಿದರು.


ಬಿಜೆಪಿಯವರು ಆರ್.ಟಿ.ಜಿ.ಎಸ್, ಚೆಕ್, ಕ್ಯಾಶ್ ಹೀಗೆ ಹಲವು ರೀತಿ ಲಂಚ ಪಡೆದು ಈಗಾಗಲೇ ಸಿಕ್ಕಿಬಿದ್ದಿದ್ದಾರೆ, ಆದರೆ ಚಿಕ್ಕ ಮಕ್ಕಳು ತಿನ್ನುವ ಮೊಟ್ಟೆಯಲ್ಲೂ ಲಂಚ ಪಡೆಯುವಷ್ಟು ಕೆಳ ಮಟ್ಟಕ್ಕೆ ಇಳಿಯುತ್ತಾರೆ ಎಂದುಕೊಂಡಿರಲಿಲ್ಲ. ನಾನು ಶಾಸಕನಾಗಿ, ಸಚಿವನಾಗಿ, ಉಪಮುಖ್ಯಮಂತ್ರಿಯಾಗಿ, ಮುಖ್ಯಮಂತ್ರಿಯಾಗಿ ನಲವತ್ತು ವರ್ಷ ರಾಜಕಾರಣ ಮಾಡಿದ್ದೇನೆ, ಆದರೆ ಇಂತಹ ಹೊಲಸು ಭ್ರಷ್ಟ ಸರ್ಕಾರವನ್ನು ಈ ವರೆಗೆ ಕಂಡಿಲ್ಲ. ಕಳೆದ ಬಾರಿಯ ಪ್ರವಾಹದಲ್ಲಿ ಮನೆ ಕಳೆದುಕೊಂಡವರಿಗೆ ಇನ್ನೂ ಪರಿಹಾರ ನೀಡಿಲ್ಲ, ಈಗ ಮತ್ತೆ ರಾಜ್ಯದಲ್ಲಿ ಪ್ರವಾಹ ಬಂದಿದೆ ಈ ಸರ್ಕಾರ ಅವರಿಗೆ ಪರಿಹಾರ ಕೊಡುತ್ತಾದಯಾ? ವಿವಿಧ ವಸತಿ ಯೋಜನೆಗಳಲ್ಲಿ ನಿರ್ಮಿಸಲಾದ ಮನೆಗಳಿನ್ನು ಅಪೂರ್ಣ ಆಗಿ ನಿಂತಿದೆ, ಅವುಗಳಿಗೆ ಹಣ ಬಿಡುಗಡೆ ಮಾಡದೆ ಹೊಸದಾಗಿ ಎರಡು ಲಕ್ಷ ಮನೆ ನಿರ್ಮಾಣ ಮಾಡುತ್ತೇವೆ ಎಂದು ಮುಖ್ಯಮಂತ್ರಿಗಳು ಸುಳ್ಳು ಭರವಸೆ ನೀಡಿದ್ದಾರೆ. ಹೊಸ ಮನೆಗಳ ನಿರ್ಮಾಣ ಮಾಡಲು ಈ ಸರ್ಕಾರದ ಬಳಿ ಹಣವಾದರೂ ಇದೆಯೇ ಎಂದು ಪ್ರಶ್ನಿಸಿದರು.


ತಾಲೂಕು ಹಾಗೂ ಜಿಲ್ಲಾ ಪಂಚಾಯತಿ ಚುನಾವಣೆಗಳನ್ನು ಯಾವಾಗ ಮಾಡಬೇಕು ಎಂದು ನಿರ್ಧರಿಸುವುದು ಚುನಾವಣಾ ಆಯೋಗವೇ ಹೊರತು ರಾಜ್ಯ ಸರ್ಕಾರವಲ್ಲ. ಮೀಸಲಾತಿ ಪಟ್ಟಿ ಸಿದ್ಧಪಡಿಸಿದ ನಂತರ ದಿನಾಂಕ ಘೋಷಣೆ ಮಾಡಲಾಗುತ್ತದೆ. ರಾಜ್ಯ ಸರ್ಕಾರ ಡಿಸೆಂಬರ್ ವರೆಗೂ ಚುನಾವಣೆ ನಡೆಸಲ್ಲ ಎನ್ನುತ್ತದೆ, ಚುನಾವಣೆ ದಿನ ನಿಗದಿ ಮಾಡುವ ಅಧಿಕಾರ ಇವರಿಗೆ ಎಲ್ಲಿದೆ? ಇದೇ ಕಾರಣಕ್ಕೆ ರಾಜ್ಯ ಚುನಾವಣಾ ಆಯೋಗ ಸರ್ಕಾರದ ಮಾತನ್ನು ಪರಿಗಣಿಸುವುದಿಲ್ಲ ಎಂದು ಹೇಳಿಗೆ. ಹಾಗಾಗಿ ಡಿಸೆಂಬರ್ ಒಳಗೆ ತಾಲೂಕು ಹಾಗೂ ಜಿಲ್ಲಾ ಪಂಚಾಯತಿ ಚುನಾವಣೆ ಯಾವ ಕ್ಷಣದಲ್ಲಿ ಬೇಕಾದರೂ ನಡೆಯಬಹುದು.
ಮುಂಬರುವ ಚುನಾವಣೆಗಳಲ್ಲಿ ಪಕ್ಷದ ಕಾರ್ಯತಂತ್ರಗಳು ಹಾಗೂ ಜಿಲ್ಲೆ, ತಾಲೂಕು, ಗ್ರಾಮ ಮಟ್ಟದಲ್ಲಿ ಪಕ್ಷ ಸಂಘಟನೆಗೆ ಕೈಗೊಳ್ಳಬೇಕಾದ ಕ್ರಮಗಳು, ಪಕ್ಷದ ಮುಖಂಡರ ಅಭಿಪ್ರಾಯ ಸಂಗ್ರಹ ಹೀಗೆ ಮುಂತಾದ ಪ್ರಜಾಸತ್ತಾತ್ಮಕ ಉದ್ದೇಶಗಳೊಂದಿಗೆ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಅವರ ನೇತೃತ್ವದಲ್ಲಿ ಮೊಟ್ಟ ಮೊದಲ ಬಾರಿಗೆ ಇಂದು ಸಭೆ ನಡೆಸಲಾಯಿತು. ನಮ್ಮ ಕಾರ್ಯಕರ್ತರು, ಮುಖಂಡರ ನಡುವೆ ಸಮನ್ವಯ ಸಾಧಿಸುವುದು, ಪಕ್ಷ ನಿಶ್ಚಲವಾಗಿರುವ ಕಡೆಗಳಲ್ಲಿ ಪಕ್ಷ ಕಟ್ಟಲು ಏನೆಲ್ಲಾ ಮಾಡಬೇಕು ಎಂಬ ವಿಚಾರಗಳನ್ನೆಲ್ಲಾ ಇಂದು ನಡೆದ ಪಕ್ಷದ ವಲಯಾವಾರು ಸಭೆಯಲ್ಲಿ ಚರ್ಚಿಸಿದ್ದೆವು.
ರಾಜ್ಯವನ್ನು ಉಳಿಸುವ ಕಾರಣಕ್ಕಾಗಿ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಬೇಕು ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ತರಬೇಕು. ಈ ನಿಟ್ಟಿನಲ್ಲಿ ನಮ್ಮ ಪಕ್ಷ ಒಂದಾಗಿ ಶ್ರಮಿಸುತ್ತಿದೆ ಎಂದು ಅವರು ತಿಳಿಸಿದರು.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!