ಹಜ್ ಯಾತ್ರೆ ಕೈಗೊಂಡ ಇಂಗ್ಲೆಂಡ್ ಸ್ಪಿನ್ನರ್ ಆದಿಲ್ ರಶೀದ್: ಭಾರತ ವಿರುದ್ಧ ಸರಣಿಗೆ ಅಲಭ್ಯ

Prasthutha|

ಲಂಡನ್: ಕಳೆದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯಲ್ಲಿ ಭಾರತೀಯರನ್ನು ಅತಿಯಾಗಿ ಕಾಡಿದ್ದ ಇಂಗ್ಲೆಂಡ್ ತಂಡದ ಪ್ರಮುಖ ಸ್ಪಿನ್ನರ್ ಆದಿಲ್ ರಶೀದ್ ಮುಂಬರುವ ಭಾರತ ಮತ್ತು ಇಂಗ್ಲೆಂಡ್ ಸರಣಿಯಿಂದ ವಂಚಿತರಾಗಲಿದ್ದಾರೆ. ಪವಿತ್ರ ಹಜ್ ಯಾತ್ರೆ ಕೈಗೊಂಡಿರುವ ಆದಿಲ್, ಅನಿವಾರ್ಯವಾಗಿ ಭಾರತದ ವಿರುದ್ಧದ ಟೆಸ್ಟ್-ಏಕದಿನ, ಟಿ-20 ಸರಣಿಯಿಂದ ಹೊರಗುಳಿಯಲಿದ್ದಾರೆ.

- Advertisement -

ಹಜ್ ಕರ್ಮ ನಿರ್ವಹಿಸಲು ಕುಟುಂಬ ಸಮೇತ ಯಾತ್ರೆ ಕೈಗೊಂಡಿರುವ ಸ್ಪಿನ್ನರ್ ಆದಿಲ್ ರಶೀದ್ ಈ ವಾರಾಂತ್ಯದಲ್ಲಿ ಸೌದಿ ಅರೇಬಿಯಾ ತಲುಪಲಿದ್ದಾರೆ. ಇದೀಗಾಗಲೇ ಇಸಿಬಿ (ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್) ಮತ್ತು ಕೌಂಟಿ ಕ್ಲಬ್ ಯಾರ್ಕ್ಷೈರ್ ನಿಂದ ವಿಶೇಷ ಅನುಮತಿಯನ್ನು ಪಡೆದಿದ್ದಾರೆ. ನೀವು ಅಂದುಕೊಂಡಿದ್ದನ್ನು ಮಾಡಿ, ನಿಮಗೆ ಸಾಧ್ಯವಾದಾಗ ಹಿಂತಿರುಗಿ ಎಂದು ಇಸಿಬಿ ಪ್ರೋತ್ಸಾಹಿಸಿದೆ ಎಂದು ಆದಿಲ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಈವರೆಗೆ ಹಜ್ ಯಾತ್ರೆಯನ್ನು ಮುಂದೂಡುತ್ತಲೇ ಬಂದಿದ್ದು, ಈ ಬಾರಿ ಉದ್ದೇಶವನ್ನು ಪೂರೈಸಲಿದ್ದೇನೆ. ಅನುಮತಿಯ ವೇಳೆ ಇಸಿಬಿ ಪದಾಧಿಕಾರಿಗಳು ಪ್ರೋತ್ಸಾಹ ನೀಡಿದ್ದು, ಹಜ್ ಯಾತ್ರೆಯ ಬಗ್ಗೆ ಅವರು ಅರ್ಥೈಸಿಕೊಂಡಿದ್ದಾರೆ. ಸೌದಿ ಅರೇಬಿಯಾದಲ್ಲಿ ಕುಟುಂಬದೊಂದಿಗೆ ಒಂದೆರಡು ವಾರಗಳಿರಲಿದ್ದೇನೆ, ಇದು ನನ್ನ ಜೀವನದ ಒಂದು ಅಮೂಲ್ಯ ಕ್ಷಣವಾಗಿದ್ದು, ಇಸ್ಲಾಂ ಧರ್ಮವನ್ನು ಅನುಸರಿಸುತ್ತಿರುವುದು ವೈಯಕ್ತಿವಾಗಿ ನನ್ನ ಪಾಲಿಗೆ ದೊಡ್ಡ ವಿಷಯವಾಗಿದೆ ಎಂದು ಆದಿಲ್ ಹೇಳಿದ್ದಾರೆ.

- Advertisement -

ಇಂಗ್ಲೆಂಡ್ ಮತ್ತು ಭಾರತ ನಡುವಿನ ಟೆಸ್ಟ್ ಸರಣಿಯು ಎಡ್ಜ್ಬಾಸ್ಟನ್ ಕ್ರೀಡಾಂಗಣದಲ್ಲಿ ಜುಲೈ 1ರಂದು ಆರಂಭಗೊಳ್ಳಲಿದೆ. ಕೋವಿಡ್ ಹಿನ್ನೆಲೆಯಲ್ಲಿ ಕಳೆದ ವರ್ಷ ಭಾರತ ಮತ್ತು ಇಂಗ್ಲೆಂಡ್ ಟೆಸ್ಟ್ ಸರಣಿ ಅರ್ಧದಲ್ಲೇ ಮೊಟಕುಗೊಂಡಿತ್ತು. ಸರಣಿಯಲ್ಲಿ ಭಾರತ 2-1 ಮುನ್ನಡೆಯನ್ನು ಸಾಧಿಸಿತ್ತು. ಟೆಸ್ಟ್ ಪಂದ್ಯದ ಬಳಿಕ ಮೂರು ಪಂದ್ಯಗಳ ಟಿ-20 ಸರಣಿ ಮತ್ತು ಜುಲೈ 12ರಿಂದ ಮೂರು ಪಂದ್ಯಗಳ ಏಕದಿನ ಸರಣಿ ನಡೆಯಲಿದೆ.

Join Whatsapp