ಆಮ್ ಆದ್ಮಿ ಪಾರ್ಟಿಗೆ ರಾಷ್ಟ್ರೀಯ ಸ್ಥಾನಮಾನ ನೀಡಿದ ಚುನಾವಣಾ ಆಯೋಗ

Prasthutha|

ಹೊಸದಿಲ್ಲಿ: ಆಮ್ ಆದ್ಮಿ ಪಕ್ಷಕ್ಕೆ ರಾಷ್ಟ್ರೀಯ ಪಕ್ಷ ಮಾನ್ಯತೆ ನೀಡಿ ಕೇಂದ್ರ ಚುನಾವಣಾ ಆಯೋಗವು ಆದೇಶ ಹೊರಡಿಸಿದೆ. ಇದೇ ವೇಳೆ ತೃಣ ಮೂಲ ಕಾಂಗ್ರೆಸ್ (TMC) ಹಾಗೂ ಭಾರತೀಯ ಕಮ್ಯುನಿಸ್ಟ್ ಪಕ್ಷ (CPI) ರಾಷ್ಟ್ರೀಯ ಪಕ್ಷಗಳು ಅಲ್ಲ ಎಂದು ಹೇಳಿದೆ.

- Advertisement -

ದೆಹಲಿ, ಪಂಜಾಬ್ ನಂತರ ಗುಜರಾತ್​ ರಾಜ್ಯದಲ್ಲೂ ಕೆಲವೊಂದು ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಮೂಲಕ ಎಎಪಿ ರಾಷ್ಟ್ರೀಯ ಸ್ಥಾನಮಾನ ಪಡೆಯುವ ಅರ್ಹತೆಯನ್ನು ಗಿಟ್ಟಿಸಿಕೊಂಡಿತ್ತು. ಸದ್ಯ ಚುನಾವಣಾ ಆಯೋಗವು ಆಪ್ ಪಕ್ಷಕ್ಕೆ ರಾಷ್ಟ್ರೀಯ ಸ್ಥಾನಮಾನ ನೀಡಿದೆ. ಅದರಂತೆ ಕೇವಲ 10 ವರ್ಷಗಳಲ್ಲಿ ರಾಷ್ಟ್ರೀಯ ಪಕ್ಷವಾಗಿ ಹೊರಹೊಮ್ಮಿದೆ.

ತಮ್ಮ ಪಕ್ಷಕ್ಕೆ ರಾಷ್ಟ್ರೀಯ ಸ್ಥಾನಮಾನ ಸಿಕ್ಕಿದ ಬಗ್ಗೆ ಟ್ವೀಟ್ ಮಾಡಿದ ಪಕ್ಷದ ಮುಖ್ಯಸ್ಥ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, “ಇಷ್ಟು ಕಡಿಮೆ ಅವಧಿಯಲ್ಲಿ ರಾಷ್ಟ್ರೀಯ ಪಕ್ಷವೇ? ಇದು ಪವಾಡಕ್ಕಿಂತ ಕಡಿಮೆಯಿಲ್ಲ. ಎಲ್ಲರಿಗೂ ಅಭಿನಂದನೆಗಳು, ದೇಶದ ಲಕ್ಷಾಂತರ ಜನರು ನಮ್ಮನ್ನು ಈ ಸ್ಥಾನಕ್ಕೆ ತಂದಿದ್ದಾರೆ. ಜನರು ನಮ್ಮಿಂದ ಹೆಚ್ಚಿನ ನಿರೀಕ್ಷೆಗಳನ್ನು ಹೊಂದಿದ್ದಾರೆ. ಇಂದು ಜನರು ನಮಗೆ ಈ ದೊಡ್ಡ ಜವಾಬ್ದಾರಿಯನ್ನು ನೀಡಿದ್ದಾರೆ. ಈ ಜವಾಬ್ದಾರಿಯನ್ನು ಚೆನ್ನಾಗಿ ಪೂರೈಸಲು ನಮ್ಮನ್ನು ಆಶೀರ್ವದಿಸಿ” ಎಂದು ಹೇಳಿದ್ದಾರೆ.

- Advertisement -

ರಾಷ್ಟ್ರೀಯ ಪಕ್ಷವಾಗಲು ಇರಬೇಕಾದ ಅರ್ಹತೆಗಳೇನು?

ಯಾವುದೇ ಒಂದು ಪಕ್ಷ ರಾಷ್ಟ್ರೀಯ ಪಕ್ಷವಾಗಲು ಮೂರು ಷರತ್ತುಗಳನ್ನು ಚುನಾವಣಾ ಆಯೋಗ ಮುಂದಿಡುತ್ತದೆ. ರಾಷ್ಟ್ರೀಯ ಪಕ್ಷದ ಸ್ಥಾನಮಾನವನ್ನು ಗಳಿಸಲು, ಒಂದು ರಾಜಕೀಯ ಪಕ್ಷವು ಕನಿಷ್ಟ ನಾಲ್ಕು ರಾಜ್ಯಗಳಲ್ಲಿ ಗುರುತಿಸಲ್ಪಡಬೇಕು. ಕನಿಷ್ಠ ನಾಲ್ಕು ರಾಜ್ಯಗಳಲ್ಲಿ ಕನಿಷ್ಠ ಎರಡು ಸ್ಥಾನಗಳನ್ನು ಮತ್ತು ಶೇ. 6 ರಷ್ಟು ಮತಗಳನ್ನು ಆಯಾ ಪಕ್ಷವು ಪಡೆಯಬೇಕು. ಶೇ. 3ರಷ್ಟು ವಿಧಾನಸಭಾ ಸ್ಥಾನಗಳನ್ನು ಅಥವಾ 3 ವಿಧಾನಸಭಾ ಸ್ಥಾನಗಳಲ್ಲಿ ಯಾವುದು ಹೆಚ್ಚೋ ಅದನ್ನು ಗೆಲ್ಲಬೇಕು. ಮಾತ್ರವಲ್ಲದೆ, ಶೇ. 8ಕ್ಕಿಂತ ಹೆಚ್ಚಿನ ಮತಗಳನ್ನು ಪಡೆಯಬೇಕು. ಆಗ ಮಾತ್ರ ಪಕ್ಷವೊಂದು ರಾಷ್ಟ್ರೀಯ ಸ್ಥಾನಮಾನವನ್ನು ಪಡೆಯಬಹುದು.

Join Whatsapp