ಮಹಾರಾಷ್ಟ್ರದ ಖಾಸಗಿ ಕಂಪನಿಯೊಂದರಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಕನಿಷ್ಠ 8 ಮಂದಿ ಸಾವನ್ನಪ್ಪಿರುವ ಘಟನೆ ಸೋಮವಾರ ನಡೆದಿದೆ.
ಪುಣೆ ಜಿಲ್ಲೆಯ ಮುಲ್ಶಿ ತಾಲೂಕಿನ ಪಿರಂಗುತ್ ಸಮೀಪದ ಉರವಾಡೆ ಎಂಬಲ್ಲಿ ಈ ಘಟನೆ ನಡೆದಿದ್ದು, ಕಟ್ಟಡದೊಳಗೆ ಸಿಲುಕಿರುವವರ ರಕ್ಷಣೆಗೆ ಕಾರ್ಯಾಚರಣೆ ಕೈಗೊಳ್ಳಲಾಗಿದೆ.
ನೀರು ಶುದ್ಧೀಕರಣದ ಕ್ಲೋರಿನ್ ಡೈಆಕ್ಸೈಡ್ ಟ್ಯಾಬ್ಲೆಟ್ ಉತ್ಪಾದಿಸುವ ಎಸ್ವಿಎಸ್ ಆಕ್ವಾ ಟೆಕ್ನಾಲಜೀಸ್ ಎಂಬ ಕಂಪನಿಯಲ್ಲಿ ಈ ಬೆಂಕಿ ಸಂಭವಿಸಿದೆ.
ಸುಮಾರು 15 ರಿಂದ 16 ಕಾರ್ಮಿಕರು ಕಾರ್ಖಾನೆಯೊಳಗೆ ಸಿಲುಕಿದ್ದು, ಅಗ್ನಿಶಾಮಕ ದಳ ಮತ್ತು ಪೊಲೀಸ್ ಸಿಬ್ಬಂದಿ ಕಾರ್ಯಾಚರಣೆ ಕೈಗೊಂಡಿದ್ದಾರೆ. ಇದುವರೆಗೆ ಎಂಟು ಶವಗಳು ಪತ್ತೆಯಾಗಿವೆ. ಇನ್ನೂ ಕೆಲವರು ಮೃತಪಟ್ಟಿರುವ ಶಂಕೆ ಇದೆ ಎಂದು ಪುಣೆ ಗ್ರಾಮೀಣ ಪೊಲೀಸ್ ಅಧೀಕ್ಷಕ ಅಭಿನವ್ ದೇಶ್ ಮುಖ್ ತಿಳಿಸಿದ್ದಾರೆ.