ಮಕ್ಕಳಿಗೆ ಶೂ, ಸಾಕ್ಸ್ ನೀಡುವ ವಿಚಾರದಲ್ಲಿ ಶಿಕ್ಷಣ ಸಚಿವರ ಹೇಳಿಕೆ ಕ್ರೂರತನದಿಂದ ಕೂಡಿದೆ: ಸಿದ್ದರಾಮಯ್ಯ

Prasthutha|


ಬೆಂಗಳೂರು: ಶಾಲಾ ಮಕ್ಕಳಿಗೆ ಶೂ ಮತ್ತು ಸಾಕ್ಸ್ ನೀಡುವ ವಿಚಾರದಲ್ಲಿ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರು ನೀಡಿರುವ ಹೇಳಿಕೆ ಅಮಾನವೀಯ. ಅವರ ಮಾತುಗಳು ಬೇಜವಾಬ್ದಾರಿತನ ಹಾಗೂ ಕ್ರೂರತನದಿಂದ ಕೂಡಿದೆ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

- Advertisement -


ಚುನಾವಣೆಗಳು ಹತ್ತಿರ ಬಂದಂತೆಲ್ಲ ಬಿಜೆಪಿಗೆ ಸುಳ್ಳು ಹೇಳುವ ದೆವ್ವ ಮೈಮೇಲೆ ಹತ್ತಿ ಕುಣಿಯಲಾರಂಭಿಸುತ್ತದೆ. ತಾವು ಮಾತನಾಡಬೇಕಾದರೆ ಕನಿಷ್ಠ ಮಟ್ಟದ ಪ್ರಜ್ಞೆ, ಲಜ್ಜೆ, ನೈತಿಕತೆ ಇವ್ಯಾವುಗಳೂ ಇಲ್ಲದಂತೆ ವರ್ತಿಸಲು ಪ್ರಾರಂಭಿಸುತ್ತಾರೆ. ಅದರ ಭಾಗವಾಗಿ ಕಲ್ಬುರ್ಗಿಯಲ್ಲಿ ನಿನ್ನೆ ಮಾತನಾಡಿದ್ದಾರೆ. ಸಚಿವರು ‘ಮಕ್ಕಳು ಶಾಲೆಗೆ ಬರುವುದು ಕಲಿಯುವುದಕ್ಕೆ ಹೊರತು, ಶೂ ಸಾಕ್ಸ್ ಹಾಕಿಕೊಳ್ಳುವುದಕ್ಕೆ ಅಲ್ಲ’ ಎಂದಿದ್ದಾರೆ. ನಾನು ನಾಗೇಶ್ ಅವರನ್ನು ಕೇಳಬಯಸುತ್ತೇನೆ, ನಿಮ್ಮ ಮಕ್ಕಳಾಗಲಿ ಅಥವಾ ನೀವಾಗಲಿ ಎಂದಾದರೂ ಕಾಲಿಗೆ ಚಪ್ಪಲಿ ಇಲ್ಲದೆ ಓಡಾಡಿದ ಅನುಭವ ಇದೆಯೆ, ಅದರ ಅವಮಾನ, ಕೀಳರಿಮೆಗಳನ್ನು ಅನುಭವಿಸಿದ ಉದಾಹರಣೆಗಳಿವೆಯೆ ಎಂದು ಪ್ರಶ್ನಿಸಿದ್ದಾರೆ.


ಕಾನ್ವೆಂಟ್ ಸ್ಕೂಲಿಗೆ ಹೋಗುವ ಮಕ್ಕಳು ಶುಭ್ರ ಬಟ್ಟೆ, ಟೈ, ಕಾಲಿಗೆ ಶೂ, ಸಾಕ್ಸ್ ಹಾಕಿಕೊಂಡು ನಡೆದಾಡುವುದನ್ನು ನೋಡಿದಾಗ ಅದೇ ಬೀದಿಯಲ್ಲಿ, ಅದೇ ಹಳ್ಳಿಯಲ್ಲಿ ಆಟವಾಡುವ ಬಡವರ ಮಕ್ಕಳು ಬರಿಗಾಲಲ್ಲಿ, ಹರಿದ ಬಟ್ಟೆಯಲ್ಲಿದ್ದರೆ ನಿಮಗೆ ಏನೂ ಅನ್ನಿಸುವುದಿಲ್ಲವೆ? ಅಥವಾ ಆ ಕಷ್ಟದಲ್ಲಿರುವ ಮಕ್ಕಳಿಗೆ ಏನನ್ನಿಸುತ್ತದೆ ಎಂಬ ಅರಿವಾದರೂ ಇದೆಯೆ ನಿಮಗೆ? ಅವರು ಹಾಗೆಯೆ ಬರಿಗಾಲಿನಲ್ಲಿ ಇರಬೇಕೆಂದು ರಾಷ್ಟ್ರ ಭಕ್ತಿಯ ಬಗ್ಗೆ ಮಾತನಾಡುವ ಸಂಘ ನಿಮಗೆ ಹೇಳಿಕೊಟ್ಟಿದೆಯೆ? ಹೇಳಿಕೊಟ್ಟಿರಲು ಸಾಧ್ಯವಿದೆ. ಶೂದ್ರರ ಬಳಿ ವಿದ್ಯೆ, ಹಣ, ಅಧಿಕಾರಗಳು ಇರಬಾರದೆಂಬ ಕಾರಣಕ್ಕೆ ತಾನೆ ಈ ಸಂಘ ಹುಟ್ಟಿಕೊಂಡು ನಮ್ಮ ಮಕ್ಕಳ ಮೆದುಳಿಗೆ ವಿಷ ಹಾಕುತ್ತಿರುವುದು ಎಂದರು.

- Advertisement -


ದಲಿತರು, ಅಲೆಮಾರಿಗಳು, ಹಿಂದುಳಿದವರ ಹಾಗೂ ಎಲ್ಲ ಜಾತಿಯ ಬಡವರ ಮಕ್ಕಳಿಗೆ ಸಣ್ಣ ಸ್ವಾಭಿಮಾನ ಇರಲಿ, ಕಲಿಯುವ ಶಾಲೆಗೆ ಹೋಗುವ ಹುಮ್ಮಸ್ಸು ಬರಲಿ ಎಂಬ ಕಾರಣಕ್ಕೆ ನಾವು ಮಕ್ಕಳ ಸ್ನೇಹಿಯಾದ ಯೋಜನೆಗಳನ್ನು ಜಾರಿಗೆ ತಂದಿದ್ದೆವು. ನಿಮ್ಮ ಸರ್ಕಾರಕ್ಕೆ ಮಕ್ಕಳಿಗೆ ಕೊಡಬೇಕಾದ್ದನ್ನು ಕೊಡುವ ಯೋಗ್ಯತೆ ಇಲ್ಲದಿದ್ದರೆ ಅವರನ್ನು ಹಂಗಿಸುವ ಸಾಹಸ ಮಾಡಬೇಡಿ. ನಿಮ್ಮ ಸರ್ಕಾರಕ್ಕೆ ಕನಿಷ್ಠ ಶೂ, ಸಾಕ್ಸ್, ಸೈಕಲ್ಗಳನ್ನೂ ನೀಡಲಾಗದಷ್ಟು ದರಿದ್ರ ಬಂದಿದೆಯೆ? ಹಾಗಿದ್ದರೆ ನಾಡಿನ ಬಡವನೊಬ್ಬನಿಂದಲೂ ವರ್ಷಕ್ಕೆ 1 ಲಕ್ಷ ರೂಪಾಯಿಗಳಷ್ಟು ತೆರಿಗೆಯನ್ನು ಮೋದಿ ಸರ್ಕಾರ ಮತ್ತು ಬೊಮ್ಮಾಯಿಯವರ ಸರ್ಕಾರಗಳು ವಸೂಲಿ ಮಾಡುತ್ತಿವೆಯೆಂದು ಪತ್ರಿಕೆಗಳು ಸಮೀಕ್ಷೆ ಮಾಡಿದ್ದವು. ಹಾಗೆ ಬಡವರಿಂದ ದೋಚಿಕೊಂಡ ತೆರಿಗೆ ಹಣವನ್ನು ಏನು ಮಾಡುತ್ತಿದ್ದೀರಿ? 40 ಪರ್ಸೆಂಟ್ ಕಮಿಷನ್ ಸರ್ಕಾರಕ್ಕೆ ಮಕ್ಕಳ ಶಿಕ್ಷಣವನ್ನೂ ನೋಡಿಕೊಳ್ಳುವ ಯೋಗ್ಯತೆ ಇಲ್ಲದ ಮೇಲೆ ನೀವು ಯಾರ ಸುಖಕ್ಕಾಗಿ ಸರ್ಕಾರ ನಡೆಸುತ್ತಿದ್ದೀರಿ? ನಿಮಗೆ ಸಣ್ಣ ಕಾಳಜಿಯೇನಾದರೂ ಇದ್ದರೆ ಹೀಗೆಲ್ಲ ಮಾತನಾಡಲು ಸಾಧ್ಯವೆ ಎಂದು ಪ್ರಶ್ನಿಸಿದರು.


ನಮ್ಮ ಸರ್ಕಾರದ ಅವಧಿಯಲ್ಲಿ 7905 ಪ್ರಾಥಮಿಕ ಶಾಲಾ ಶಿಕ್ಷಕರು, 1689 ಪ್ರೌಢಶಾಲಾ ಶಿಕ್ಷಕರ ನೇಮಕಾತಿ ಮಾಡಿದ್ದೆವು. ಜೊತೆಗೆ 10000 ಪಧವೀಧರ ವಿಷಯವಾರು ಶಿಕ್ಷಕರು, ದೈಹಿಕ ಶಿಕ್ಷಕರು ಹಾಗೂ ಗ್ರಂಥ ಪಾಲಕರ ನೇಮಕಾತಿಯು ಅಂತಿಮಗೊಳಿಸುವ ಹಂತಕ್ಕೆ ಬಂದಿತ್ತು. ಇದರಿಂದಾಗಿ ಒಟ್ಟು 20000 ಶಿಕ್ಷಕರ ನೇಮಕಾತಿ ಮಾಡಿದಂತಾಗಿತ್ತು. ಇದರ ಜೊತೆಗೆ ನಮ್ಮ ಅವಧಿಯಲ್ಲಿ 20000 ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಂಡಿದ್ದೆವು ಎಂದರು.
ನಮ್ಮ ಅವಧಿಯಲ್ಲಿ 1763 ಪಿಯು ಕಾಲೇಜುಗಳ ಉಪನ್ಯಾಸಕರನ್ನು ನೇಮಕಾತಿ ಮಾಡಿದ್ದೆವು.
ನಮ್ಮ ಅವಧಿಯಲ್ಲಿ 47 ಲಕ್ಷ ಮಕ್ಕಳಿಗೆ ಸಮವಸ್ತ್ರ, ಶೂ ಮತ್ತು ಸಾಕ್ಸ್ ಹಾಗೂ 5 ಲಕ್ಷ ಮಕ್ಕಳಿಗೆ ಬೈಸಿಕಲ್ ನೀಡಿದ್ದೆವು.
ನಾವು ಮಕ್ಕಳ ಪೌಷ್ಟಿಕತೆ ಹೆಚ್ಚಿಸುವುದಕ್ಕಾಗಿಯೆ ಕ್ಷೀರಭಾಗ್ಯ ಯೋಜನೆಯನ್ನು ಜಾರಿಗೆ ತಂದು ವಾರದಲ್ಲಿ 5 ದಿನ ಕೆನೆಭರಿತ ಹಾಲನ್ನು ನೀಡಿದ್ದೆವು.
ನಾವು ಕೈಗೊಂಡ ಕ್ರಮಗಳಿಂದಾಗಿ ಭಾರತ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ ಮತ್ತು ಎನ್ಸಿಇಆರ್ಟಿಯು ರಾಜ್ಯದ ಶಾಲೆಗಳಲ್ಲಿ 3,5,8 ನೇ ತರಗತಿಗಳಲ್ಲಿ ಕಲಿಯುತ್ತಿದ್ದ 1.29 ಲಕ್ಷ ವಿದ್ಯಾರ್ಥಿಗಳಿಗೆ ನಡೆಸಿದ ರಾಷ್ಟ್ರೀಯ ಸಾಧನೆ ಸಮೀಕ್ಷೆಯಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲೆ ಇತ್ತು.
ನಾವು ಮಕ್ಕಳ ಶಿಕ್ಷಣಕ್ಕಾಗಿಯೆ 1400 ಕ್ಕೂ ಹೆಚ್ಚು ಹಾಸ್ಟೆಲ್ಗಳು, ಆಶ್ರಮ ಶಾಲೆಗಳು, ಮತ್ತು ವಸತಿ ಶಾಲೆಗಳನ್ನು ನಿರ್ಮಿಸಿದ್ದೆವು. ಬಿಜೆಪಿ ಸರ್ಕಾರ ಎಷ್ಟನ್ನು ನಿರ್ಮಿಸಿದೆ ಎಂಬುದನ್ನು ನಾಡಿಗೆ ತಿಳಿಸಬೇಕು.


ನಮ್ಮ ಸರ್ಕಾರದ ಅವಧಿಯಲ್ಲಿ ನನ್ನ ಮಾಹಿತಿಯ ಪ್ರಕಾರ 71279 ಕೊಠಡಿಗಳ ನವೀಕರಣ, ಪುನರ್ನವೀಕರಣ ಕಾರ್ಯಗಳನ್ನು ಮಾಡಿ ಮುಗಿಸಿದ್ದೆವು. ಈ ಕುರಿತು ಇನ್ನಷ್ಟು ಮಾಹಿತಿಯನ್ನು ಮುಂದೆ ಬಿಡುಗಡೆ ಮಾಡುವೆ ಎಂದು ಹೇಳಿದರು.
ಬಿಜೆಪಿ ಸರ್ಕಾರ ಎಷ್ಟು ಜನ ಶಿಕ್ಷಕರನ್ನು ನೇಮಕ ಮಾಡಿದೆ? ಎಷ್ಟು ಜನ ಮಕ್ಕಳಿಗೆ ಸೈಕಲ್ ನೀಡಿದೆ? ಎಷ್ಟು ಶಾಲೆಗಳನ್ನು, ವಸತಿ ಶಾಲೆಗಳನ್ನು ನಿರ್ಮಿಸಿದೆ ಎಂದು ಹೇಳಬೇಕು. ಮಕ್ಕಳಿಗೆ ಶೂ, ಸಾಕ್ಸ್, ಪುಸ್ತಕ, ಸೈಕಲ್ ಅಷ್ಟೆ ಅಲ್ಲ ಸಮರ್ಪಕವಾಗಿ ವಿದ್ಯಾರ್ಥಿ ವೇತನಗಳನ್ನೂ ಬಿಜೆಪಿ ಸರ್ಕಾರಕ್ಕೆ ನೀಡಲು ಸಾಧ್ಯವಾಗಿಲ್ಲ.ನಮ್ಮ ಸರ್ಕಾರ ತೆಗೆದುಕೊಂಡ ಕ್ರಮಗಳಿಂದ ಮಕ್ಕಳ ಅಪೌಷ್ಟಿಕತೆ ಕಡಿಮೆಯಾಗಿತ್ತು. ಶಾಲೆಗಳ ಹಾಜರಾತಿ ಹೆಚ್ಚಿತ್ತು. ಆದರೆ ಈಗ ಸರ್ಕಾರವೆ ಹೈ ಕೋರ್ಟಿಗೆ ಸಲ್ಲಿಸಿರುವ ವರದಿ ಪ್ರಕಾರ ಸುಮಾರು 10.12 ಲಕ್ಷ ಮಕ್ಕಳು ಶಾಲೆಯಿಂದ ಹೊರಗೆ ಇದ್ದಾರೆ. ಈ ಮಕ್ಕಳ ಭವಿಷ್ಯವೇನಾಗಬಹುದು ಎಂದು ಸರ್ಕಾರ ಯೋಚಿಸಿದೆಯೆ? ಆಡಳಿತ ಪಕ್ಷದಲ್ಲಿರುವ ಸಚಿವರು ವಿರೋಧ ಪಕ್ಷಗಳಿಗೆ ಪ್ರಶ್ನೆ ಕೇಳುವುದಲ್ಲ. ಸರ್ಕಾರದ ಕೆಲಸಗಳು ಉತ್ತರ ನೀಡುವಂತೆ ಇರಬೇಕೆ ಹೊರತು, ಮಂತ್ರದಿಂದ ಮಾವಿನ ಉದುರಿಸಲು ಸಾಧ್ಯವಿಲ್ಲ ಎಂದರು.


ಅಷ್ಟಕ್ಕೂ ಶಿಕ್ಷಣ ಸಚಿವರಿಗೆ ಕಾಳಜಿ, ಬದ್ಧತೆ ಹಾಗೂ ಧಮ್ ಇದ್ದರೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆಯಲ್ಲಿ 2008 ರಿಂದ ಇದುವರೆಗೆ ಏನೇನಾಗಿದೆ? ಯಾವ ಸಾಧನೆಗಳಾಗಿವೆ ಎಂಬ ಕುರಿತು ಹಾಗೂ ಈ 14 ವರ್ಷಗಳಲ್ಲಿ ಸದರಿ ಇಲಾಖೆಯಲ್ಲಿ ಖರ್ಚು ಮಾಡಿದ ಪ್ರತಿ ಪೈಸೆಗೂ ಸಂಬಂಧಿಸಿದಂತೆ ಶ್ವೇತ ಪತ್ರ ಹೊರಡಿಸಬೇಕೆಂದು ಆಗ್ರಹಿಸುತ್ತೇನೆ ಹಾಗೂ ಮಕ್ಕಳ ಕಲ್ಯಾಣಕ್ಕಾಗಿ ಇರುವ ಎಲ್ಲ ಹಿಂದಿನ ಯೋಜನೆಗಳನ್ನು ಮುಂದುವರೆಸಬೇಕು, ಶೂ, ಸಾಕ್ಸ್, ಸೈಕಲ್, ಹಾಲು, ಸಮವಸ್ತ್ರ, ಪುಸ್ತಕ, ವ್ಯವಸ್ಥಿತ ಕೊಠಡಿಗಳನ್ನು ಕೂಡಲೆ ಒದಗಿಸಬೇಕು, ಪ್ರವಾಹ, ಅತಿವೃಷ್ಟಿಯಿಂದ ಹಾನಿಯಾದ ಶಾಲೆಗಳನ್ನು ಪೂರ್ಣ ಪ್ರಮಾಣದಲ್ಲಿ ನಿರ್ಮಿಸುವ ಕೆಲಸ ಇನ್ನೂ ಆಗಿಲ್ಲ, ಅವುಗಳನ್ನು ಶೀಘ್ರವಾಗಿ ಪುನರ್ನಿರ್ಮಿಸಬೇಕು. ಖಾಲಿ ಇರುವ ಎಲ್ಲ ಶಿಕ್ಷಕ ಹುದ್ದೆಗಳನ್ನು ಭರ್ತಿ ಮಾಡಬೇಕೆಂದು ಒತ್ತಾಯಿಸಿದ್ದಾರೆ.



Join Whatsapp