ಶೂ ವಿಚಾರದಲ್ಲಿ ಸಚಿವರ ಬೇಜವಾಬ್ದಾರಿ ಹೇಳಿಕೆಗೆ ವೆಲ್ಫೇರ್ ಪಾರ್ಟಿ ಖಂಡನೆ

Prasthutha|

►ಸಚಿವರ ಸಂಬಳದ ಹೆಚ್ಚಳಕ್ಕಿಲ್ಲ ಹಣ ಕೊರತೆ, ಮಕ್ಕಳಿಗೆ ಶಿಕ್ಷಣಕ್ಕೆ ಕುಂಟುನೆಪ ಸಲ್ಲದು

- Advertisement -

ಬೆಂಗಳೂರು:  ಮಕ್ಕಳು ಶಾಲೆಗೆ ಕಲಿಯಲು ಬರುತ್ತಾರೆ ಶೂ ಸಾಕ್ಸ್ ಗೆ ಅಲ್ಲ ಎಂದು ಉಡಾಫೆಯಾಗಿ ಮಾತನಾಡಿದ ಶಿಕ್ಷಣ ಸಚಿವರ ಹೇಳಿಕೆ ಖಂಡನೀಯ.ಜವಾಬ್ದಾರಿ ಸ್ಥಾನದಲ್ಲಿರುವ ಸಚಿವರು ಇಂತಹ ಹೇಳಿಕೆ ನೀಡಿದ್ದು ಅವರಿಗೆ ಶೋಭೆ ತರುವಂತಹದ್ದಲ್ಲ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯಾಧ್ಯಕ್ಷರು ತಾಹಿರ್ ಹುಸೇನ್ ಟೀಕಿಸಿದೆ.

ಶಿಕ್ಷಣ ಸಚಿವರು ತಮ್ಮ ದುರ್ಬಲತೆಯನ್ನು ಮುಚ್ಚಿಡಲು ವಿದ್ಯಾರ್ಥಿಗಳ ಕುರಿತು ಹಗುರವಾಗಿ ಮಾತನಾಡದೇ ಮಕ್ಕಳ ವಿಧ್ಯಾಭ್ಯಾಸದ ಬಗ್ಗೆ ಮುತುವರ್ಜಿ ವಹಿಸಬೇಕು.

- Advertisement -

ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಶೂ ಹಾಗೂ ಸಾಕ್ಸ್ ವಿತರಿಸಲು ಬಜೆಟ್‌ನಲ್ಲಿ ಅನುದಾನ ಮೀಸಲಿಡಲಿಲ್ಲ ಎಂಬ ಕಾರಣವೊಡ್ಡಿ ರಾಜ್ಯ ಸರ್ಕಾರ ಈ ವರ್ಷವೂ ಲಕ್ಷಾಂತರ ಮಕ್ಕಳನ್ನು ಜನಪರ  ಯೋಜನೆಗಳಿಂದ ವಂಚಿಸಿದೆ ಎಂದು ಆರೋಪಿಸಿದರು.

ಹಣದ ಕೊರತೆ ಮುಂದಿಟ್ಟು ರಾಜ್ಯ ಸರ್ಕಾರವು ಶಾಲಾ ಮಕ್ಕಳ ಹಕ್ಕುಗಳನ್ನು ಕಸಿಯಲು ಮುಂದಾಗಿರುವುದು ವಿದ್ಯಾರ್ಥಿ ವಿರೋಧಿ ಮತ್ತು ಪ್ರಜಾಸತ್ತಾತ್ಮಕ ವಿರೋಧಿ ನಡೆಯಾಗಿದೆ.

ಈಗಾಗಲೇ ಶಾಲಾ ಮಕ್ಕಳಿಗೆ ಸೈಕಲ್ ವಿತರಿಸುವ ಯೋಜನೆ ಕೈಬಿಡಲಾಗಿದೆ.ಗ್ರಾಮೀಣ ಮತ್ತು ಬಡ ಕುಟುಂಬದ ಸಾವಿರಾರು ವಿದ್ಯಾರ್ಥಿಗಳು ಸೈಕಲ್ ನಿಂದ ವಂಚಿತರಾಗಿದ್ದಾರೆ.

ಈಗ 50 ಲಕ್ಷ ವಿದ್ಯಾರ್ಥಿಗಳು ಶೂ ಹಾಗೂ ಸಾಕ್ಸ್ ನಿಂದ ವಂಚಿತರಾಗುತ್ತಾರೆ. ಕಳೆದೆರಡು ಶೈಕ್ಷಣಿಕ ವರ್ಷಗಳಲ್ಲಿ ಕೋವಿಡ್ ನೆಪವೊಡ್ಡಿ ವಿತರಣೆ ನಿಲ್ಲಿಸಲಾಗಿತ್ತು. ಆದರೆ ವಾಸ್ತವದಲ್ಲಿ, ಅದಕ್ಕೂ ಹಿಂದಿನ ವರ್ಷ, 2019 ರಿಂದಲೇ ಅನುದಾನ ನಿಲ್ಲಿಸಲಾಯಿತು.

ಹಣದ ಕೊರತೆ ನಿಜವಾಗಿದ್ದರೆ, ಶಾಸಕರು ತಮ್ಮ ಸಂಬಳ ಹೆಚ್ಚಿಸಿಕೊಳ್ಳುವುದನ್ನು ಸರ್ಕಾರ ತಡೆಯಬೇಕಿತ್ತು. ವಿದ್ಯಾರ್ಥಿ ಸಮುದಾಯದ ಪರ ನಿಲ್ಲಬೇಕಿದ್ದ ಸರ್ಕಾರ ಅನುದಾನ ವಾಪಸ್ ಪಡೆಯುವ ಕೆಲಸಕ್ಕೆ ಕೈಹಾಕಿರುವುದು ದುರದೃಷ್ಟಕರ ಎಂದು ವೆಲ್ಫೇರ್ ಪಾರ್ಟಿ ಟೀಕಿಸಿದೆ.

ಸರ್ಕಾರವು  ಶಿಕ್ಷಣ ಇಲಾಖೆ ಈ ಕೂಡಲೇ ಅನುದಾನ ಬಿಡುಗಡೆ ಮಾಡಿ ಶಾಲಾ ಮಕ್ಕಳಿಗೆ ಶೂ ಹಾಗೂ ಸಾಕ್ಸ್ ವಿತರಿಸಲು ನಿರ್ದೇಶನ ನೀಡಬೇಕು, ಎಲ್ಲ ವಿದ್ಯಾರ್ಥಿಗಳಿಗೆ ಈ ಯೋಜನೆ ತಲುಪುವಂತೆ ಕ್ರಮ ವಹಿಸಬೇಕು ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಆಗ್ರಹಿಸಿದೆ.

Join Whatsapp