ಕೋಲ್ಕತ್ತ: ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ ತಂಡದ ನಾಯಕ ಪ್ರಶಸ್ತಿ ಸ್ವೀಕರಿಸಲು ಬಂದ ವೇಳೆ, ಫೋಟೋಗೆ ಪೋಸ್ ಕೊಡುವ ಧಾವತಂದಲ್ಲಿ ರಾಜ್ಯಪಾಲರೊಬ್ಬರು ನಾಯಕನನ್ನೇ ಪಕ್ಕಕ್ಕೆ ತಳ್ಳಿದ ಘಟನೆ ಕೋಲ್ಕತ್ತದಲ್ಲಿ ನಡೆದಿದೆ.
ಕೋಲ್ಕತ್ತದ ಸಾಲ್ಟ್ ಲೇಕ್ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಡುರಾಂಡ್ ಕಪ್ ಫುಟ್ಬಾಲ್ ಟೂರ್ನಿಯ ಫೈನಲ್ ಹಣಾಹಣಿಯಲ್ಲಿ ಬಲಿಷ್ಠ ಮುಂಬೈ ಸಿಟಿ ಎಫ್ಸಿ ತಂಡವನ್ನು ಮಣಿಸಿದ ಬೆಂಗಳೂರು ಫುಟ್ಬಾಲ್ ಕ್ಲಬ್ (ಬಿಎಫ್ಸಿ), ಮೊದಲ ಬಾರಿಗೆ ಚಾಂಪಿಯನ್ ಪಟ್ಟವನ್ನಲಂಕರಿಸಿತ್ತು.
ಪಂದ್ಯದ ಬಳಿಕ ನಡೆದ ಪ್ರಶಸ್ತಿ ಪ್ರಧಾನ ಸಮಾರಂಭದ ವೇಳೆ ಬಿಎಫ್ಸಿ ತಂಡದ ನಾಯಕ, ಸುನಿಲ್ ಛೆಟ್ರಿ, ಪಶ್ಚಿಮ ಬಂಗಾಳದ ಕ್ರೀಡಾ ಸಚಿವ ಅರೂಪ್ ಬಿಸ್ವಾಸ್ ಅವರಿಂದ ಟ್ರೋಫಿ ಸ್ವೀಕರಿಸುತ್ತಿದ್ದ ವೇಳೆ, ಪಕ್ಕದಲ್ಲಿದ್ದ ಮಣಿಪುರ ಮತ್ತು ಪಶ್ಚಿಮ ಬಂಗಾಳ ರಾಜ್ಯಪಾಲ ಲಾ ಗಣೇಶನ್ ಅವರು ಛೆಟ್ರಿಯನ್ನು ಪಕ್ಕಕ್ಕೆ ತಳ್ಳಿದ್ದಾರೆ. ತಾನು ಫೋಟೋದಲ್ಲಿ ಕಾಣಿಸುತ್ತಿಲ್ಲ ಎಂದು ತಿಳಿದ ರಾಜ್ಯಪಾಲ ಗಣೇಶನ್ ಅವರು ಕ್ಯಾಮರಾಗಳಿಗೆ ಅಡ್ಡಿ ಬರದಂತೆ ಛೆಟ್ರಿ ಅವರನ್ನು ಪಕ್ಕಕ್ಕೆ ಸರಿಸಿದ್ದರು. ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ರಾಜ್ಯಪಾಲರ ವರ್ತನೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ರಾಜ್ಯಪಾಲರ ಗಣೇಶನ್ ಅವರು ಸುನಿಲ್ ಛೆಟ್ರಿ ಅವರಲ್ಲಿ ಕ್ಷಮೆ ಕೇಳಬೇಕು ಎಂದು ನೆಟ್ಟಿಗರು ಒತ್ತಾಯಿಸಿದ್ದಾರೆ.
ʻಭಾರತದ ಕ್ರೀಡಾ ಕ್ಷೇತ್ರದಲ್ಲಿ ಏನಾಗುತ್ತಿದೆ ಎಂಬುದನ್ನು ತಿಳಿಯಲು ಈ ಐದು ಸೆಕೆಂಡ್ಗಳ ವಿಡಿಯೊ ಸಾಕು. ಇವರ ನಡೆಯನ್ನು ನೋಡಿದರೆ ಇವರೇ ಡುರಾಂಡ್ ಕಪ್ ಗೆದ್ದಿರುವ ರೀತಿ ತೋರುತ್ತದೆ. ಸುನಿಲ್ ಛೆಟ್ರಿ ಮತ್ತು ಬೆಂಗಳೂರು ಎಫ್ಸಿ ಅಲ್ಲʼ ಎಂದು ಪ್ರಶಾಂತ್ ಧವನ್ ಎಂಬುವವರು ಟ್ವೀಟ್ ಮಾಡಿದ್ದಾರೆ.
ಡುರಾಂಡ್ ಕಪ್ ಗೆದ್ದ ಪಶ್ಚಿಮ ಬಂಗಾಳ ರಾಜ್ಯಪಾಲ ಲಾ ಗಣೇಶನ್ ಅವರಿಗೆ ಅಭಿನಂದನೆಗಳು ಎಂದು ಅನ್ಶುಲ್ ಸೆಕ್ಸೆನಾ ಟ್ವೀಟ್ ಮಾಡಿದ್ದಾರೆ.
‘ಈ ಕಾರಣಕ್ಕೆ ನಾವು ಭಾರತದ ರಾಜಕಾರಣಿಗಳಿಗೆ ತಲೆಯಲ್ಲಿ ಬುದ್ದಿ ಇಲ್ಲ ಎನ್ನುವುದು. ಅವರು ಕೇವಲ ಖ್ಯಾತಿ ಗಳಿಸುವ ಸಲುವಾಗಿ ಕ್ಯಾಮರಾಗೆ ಮುಖ ತೋರಿಸಲು ಬರುತ್ತಾರೆ. ಈ ವ್ಯಕ್ತಿ (ಲಾ ಗಣೇಶನ್) ತಾವೇ ಪ್ರಶಸ್ತಿ ಗೆದ್ದ ರೀತಿಯಲ್ಲಿ ಪ್ರಶಸ್ತಿ ಹಿಡಿದುಕೊಳ್ಳಲು ಸುನಿಲ್ ಛೆಟ್ರಿ ಅವರನ್ನು ಪಕ್ಕಕ್ಕೆ ನಿಲ್ಲಲು ಹೇಳಿದ್ದಾರೆ’ ಎಂದು ಆಲ್ವನ್ ಟೀಕಿಸಿದ್ದಾರೆ.
ಸುನಿಲ್ ಛೆಟ್ರಿಯ ಸ್ಥಾನದಲ್ಲಿ ಕ್ರಿಕೆಟ್ ಆಟಗಾರ ಇದ್ದಿದ್ದರೆ ಪರಿಸ್ಥಿತಿ ಬೇರೆಯೇ ಆಗಿರುತ್ತಿತ್ತು ನೆಟ್ಟಿಗರೊಬ್ಬರು ಹೇಳಿದ್ದಾರೆ.