ಸಿಬಿಐ, ಇಡಿ ದುರ್ಬಳಕೆಯ ಹಿಂದೆ ಪ್ರಧಾನಿ ಮೋದಿ ಇದ್ದಾರೆ ಎಂದು ನಾನು ನಂಬುವುದಿಲ್ಲ: ಮಮತಾ ಬ್ಯಾನರ್ಜಿ

Prasthutha|

ಕೋಲ್ಕತ್ತಾ: ಸಿಬಿಐ, ಇಡಿ ದುರ್ಬಳಕೆಯ ಹಿಂದೆ ಪ್ರಧಾನಿ ಮೋದಿ ಅವರ ಕೈವಾಡವಿರುವುದನ್ನು ನಾನು ನಂಬುವುದಿಲ್ಲ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ತಿಳಿಸಿದ್ದಾರೆ.

- Advertisement -

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕೇಂದ್ರೀಯ ತನಿಖಾ ಸಂಸ್ಥೆಗಳ ಆಟಾಟೋಪಗಳ ಹಿಂದೆ ಪ್ರಧಾನಿ ಮೋದಿ ಅವರ ಕೈವಾಡವಿದೆ ಎಂದು ನಾನು ನಂಬುವುದಿಲ್ಲ ಮತ್ತು ಬಿಜೆಪಿಯ ಕೆಲವು ನಾಯಕರು ತಮ್ಮ ಸ್ವ ಹಿತಾಸಕ್ತಿಗಾಗಿ ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.

ತನಿಖಾ ಸಂಸ್ಥೆಗಳ ದುರುಪಯೋಗದ ವಿರುದ್ಧ ವಿಧಾನಸಭೆಯಯಲ್ಲಿ ನಿರ್ಣಯ ಅಂಗೀಕರಿಸಲಾಗಿದ್ದು, ಸಿಬಿಐ ಮತ್ತು ಇಡಿ ವಿರುದ್ಧ ಸರ್ಕಾರದ ಈ ನಿರ್ಣಯವು ನಿರ್ದಿಷ್ಟವಾಗಿ ಯಾರ ವಿರುದ್ಧವೂ ಅಲ್ಲ. ಆದರೆ ಕೇಂದ್ರೀಯ ಸಂಸ್ಥೆಗಳ ಪಕ್ಷಪಾತದ ಕಾರ್ಯನಿರ್ವಹಣೆಯು ವಿರುದ್ಧವಾಗಿದೆ ಎಂದು ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ. ನಿರ್ಣಯವನ್ನು ವಿಭಜನೆಯ ಮೂಲಕ ಅಂಗೀಕರಿಸಲಾಗಿದ್ದು, ಸರ್ಕಾರದ ಪರವಾಗಿ 189 ಮತ್ತು ವಿರುದ್ಧವಾಗಿ 69 ಮತಗಳು ಚಲಾವಣೆಯಾಗಿದ್ದವು.

- Advertisement -

ಸಿಬಿಐ ಮತ್ತು ಇಡಿ ವಿರುದ್ಧದ ನಿರ್ಣಯವು ವಿಧಾನಸಭೆಯ ನಿಯಮ ಮತ್ತು ನಿಬಂಧನೆಗಳಿಗೆ ವಿರುದ್ಧವಾಗಿದೆ ಎಂದು ವಿಪಕ್ಷ ನಾಯಕ ಸುವೆಂದು ಅಧಿಕಾರಿ ಇತ್ತೀಚೆಗೆ ಆರೋಪಿಸಿದ್ದರು.

ಕೇಂದ್ರೀಯ ತನಿಖಾ ಸಂಸ್ಥೆ ಸಿಬಿಐ ಮತ್ತು ಇಡಿ ಪಶ್ಚಿಮ ಬಂಗಾಳದಲ್ಲಿನ ಹಲವು ಪ್ರಕರಣಗಳನ್ನು ತನಿಖೆ ನಡೆಸುತ್ತಿದ್ದು, ಇದರಲ್ಲಿ ಹಿರಿಯ ಟಿಎಂಸಿ ನಾಯಕರು ಆರೋಪಿಗಳಾಗಿದ್ದಾರೆ.

Join Whatsapp