ಬೆಂಗಳೂರು : ‘ಅಚ್ಛೇ ದಿನ್’ ಕನಸು ಹೊತ್ತು ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರಕಾರವನ್ನು ಬೆಂಬಲಿಸಿದ ಜನಸಾಮಾನ್ಯರಿಂದ ಹಿಡಿದು, ಮಧ್ಯಮ ವರ್ಗದ ಎಲ್ಲರಿಗೂ ಈಗ ತಮ್ಮ ಕನಸು ನುಚ್ಚುನೂರಾದ ಅನುಭವವಾದ ಹಾಗಿದೆ. ಹೀಗಾಗಿ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಮತ್ತು ಸಿಎಂ ಯಡಿಯೂರಪ್ಪ ನೇತೃತ್ವದ ರಾಜ್ಯ ಸರಕಾರದ ವಿರುದ್ಧ ಪ್ರತಿಭಟನೆಯ ಮೇಲೆ ಪ್ರತಿಭಟನೆ ನಡೆಯುತ್ತಲೇ ಇವೆ. ಇದೀಗ ಬಿಜೆಪಿ ಸರಕಾರದ ವಿರುದ್ಧ ವೈದ್ಯರೂ ತಮ್ಮ ಆಕ್ರೋಶವನ್ನು ಹೊರಹಾಕಲು ಪ್ರತಿಭಟನೆಯ ಮೊರೆ ಹೋಗಿದ್ದಾರೆ.
ಆಯುಷ್ ವೈದ್ಯರಿಗೆ ಹಲವು ಶಸ್ತ್ರ ಚಿಕಿತ್ಸೆಗಳನ್ನು ನೀಡಲು ಅವಕಾಶ ನೀಡಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ, ಅಲೋಪಥಿ ವೈದ್ಯರು ಇಂದು ಬೆಳಗ್ಗಿನಿಂದ ಪ್ರತಿಭಟನೆಗೆ ಕರೆ ನೀಡಿದ್ದಾರೆ. ಹೀಗಾಗಿ ಬಹುತೇಕ ಖಾಸಗಿ ಆಸ್ಪತ್ರೆಗಳ ಒಪಿಡಿ ಬಂದ್ ಆಗಲಿವೆ.
ಕೋವಿಡ್ 19 ಸೇರಿದಂತೆ ತುರ್ತು ಸೇವೆಗಳಿಗೆ ಮಾತ್ರ ಹಾಜರಾಗುವುದಾಗಿ ವೈದ್ಯರು ಹೇಳಿದ್ದಾರಾದರೂ, ಈಗಾಗಲೇ ತಾವು ಸಲ್ಲಿಸಿರುವ ಬೇಡಿಕೆಗಳು ಈಡೇರಿಕೆಯಾಗದಿದ್ದಲ್ಲಿ, ಈ ಅಗತ್ಯ ಸೇವೆಗಳಿಗೂ ಬಹಿಷ್ಕಾರ ಹಾಕುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಭಾರತೀಯ ವೈದ್ಯಕೀಯ ಸಂಘ ಮುಷ್ಕರಕ್ಕೆ ಕರೆ ನಿಡಿದೆ. ಸ್ಥಳಿಯ ವೈದ್ಯಕೀಯ ಸಂಘಗಳೂ ಈ ಮುಷ್ಕರಕ್ಕೆ ಬೆಂಬಲ ಸೂಚಿಸಿವೆ. ಆಯುರ್ವೇದಿಕ್ ವೈದ್ಯರಿಗೆ ತಾಂತ್ರಿಕವಾಗಿ ಅನುಭವವಿಲ್ಲದ ಹೊರತಾಗಿಯೂ, ಹಲವು ಶಸ್ತ್ರಚಿಕಿತ್ಸೆಗಳಿಗೆ ಅನುಮತಿ ನೀಡಲಾಗಿದೆ. ಇದು ರೋಗಿಗಳ ಹಿತಾಸಕ್ತಿಗೆ ಆತಂಕಿತವಾದುದು ಎಂದು ವೈದ್ಯರು ಅಭಿಪ್ರಾಯ ಪಟ್ಟಿದ್ದಾರೆ.