‘ಲವ್ ಜಿಹಾದ್’ ವದಂತಿ | ಮುಸ್ಲಿಂ ಜೋಡಿಯನ್ನೇ ಠಾಣೆಗೆ ಕರೆತಂದು ಕೂಡಿ ಹಾಕಿ, ಹಿಂಸಿಸಿದ ಪೊಲೀಸರು!

Prasthutha|

ಲಖನೌ : ‘ಲವ್ ಜಿಹಾದ್’ ವದಂತಿಯೊಂದನ್ನು ನಂಬಿದ ಪೊಲೀಸರು ನೈಜ್ಯ ಮುಸ್ಲಿಂ ಜೋಡಿಯ ವಿವಾಹವನ್ನು ತಡೆದ ಘಟನೆ ಉತ್ತರ ಪ್ರದೇಶದ ಖುಷಿನಗರದಲ್ಲಿ ನಡೆದಿದೆ.

ಮುಸ್ಲಿಂ ವ್ಯಕ್ತಿಯೊಬ್ಬರು ಹಿಂದೂ ಮಹಿಳೆಯನ್ನು ಮತಾಂತರಿಸಿ ವಿವಾಹವಾಗುತ್ತಿದ್ದಾನೆ ಎಂಬ ದೂರವಾಣಿ ಕರೆಯೊಂದು ಬಂದ ಹಿನ್ನೆಲೆಯಲ್ಲಿ, ವರನ ಮನೆಗೆ ತೆರಳಿದ ಪೊಲೀಸರು. ಯಾವುದೇ ವಿಚಾರಣೆ ನಡೆಸದೆ ವಧು-ವರರಿಬ್ಬರನ್ನೂ ಠಾಣೆಗೆ ಕರೆದೊಯ್ದಿದ್ದಾರೆ. ಅಲ್ಲಿ ತಾವಿಬ್ಬರೂ ಮುಸ್ಲಿಂ ಧರ್ಮಕ್ಕೆ ಸೇರಿದವರು ಎಂದರೂ ಪೊಲೀಸರು ಕೇಳಿಸಿಕೊಳ್ಳಲಿಲ್ಲ. ಬದಲಾಗಿ, ಇಬ್ಬರಿಗೂ ಥಳಿಸಿದ್ದಲ್ಲದೆ, ಹಿಂಸೆ ನೀಡಿದ್ದಾರೆ.

- Advertisement -

ಕಾಸ್ಯ ಪೊಲೀಸ್ ಠಾಣೆಯ ಸಿಬ್ಬಂದಿ ತನಗೆ ಬೆಲ್ಟ್ ನಿಂದ ಥಳಿಸಿದುದಲ್ಲದೆ, ಗಂಟೆಗಟ್ಟಲೆ ಕೂಡಿ ಹಾಕಿ ಹಿಂಸೆ ನೀಡಿದ್ದಾರೆ ಎಂದು ವರ 39ರ ಹರೆಯದ ಹೈದರ್ ಅಲಿ ಆಪಾದಿಸಿದ್ದಾರೆ.

ವಿವಾಹವಾಗಲಿದ್ದ ವಧುವಿನ ಅಣ್ಣ ಪೊಲೀಸ್ ಠಾಣೆಯಿಂದ 150 ಕಿ.ಮೀ. ದೂರದಿಂದ ಬರುವವರೆಗೂ ಪೊಲೀಸರು, ಮದುವೆಯಾಗಲಿದ್ದ ಜೋಡಿಯ ಯಾವುದೇ ವಿವರಣೆಯನ್ನು ಕೇಳಲು ಸಿದ್ಧರಿರಲಿಲ್ಲ. ಕೊನೆಗೆ ವಧುವಿನ ಅಣ್ಣ ಶಬೀಲಾ ಖತೂನ್ (28) ಆಗಮಿಸಿ, ತಾವು ಮುಸ್ಲಿಮರು, ತಮ್ಮ ಸಹೋದರಿಯ ವಿವಾಹಕ್ಕೆ ತಮ್ಮದೇನೂ ಅಭ್ಯಂತರವಿಲ್ಲವೆಂದು ತಿಳಿಸಿದ ಬಳಿಕ, ಪೊಲೀಸರು ಅವರನ್ನು ಬಿಡುಗಡೆಗೊಳಿಸಿದರು.

ಆದರೆ, ವಶಕ್ಕೆ ಪಡೆಯಲಾಗಿದ್ದ ವಧುವರರಿಗೆ ಠಾಣೆಯಲ್ಲಿ ಯಾವುದೇ ಹಿಂಸೆ ನೀಡಿಲ್ಲ, ವಿಷಯ ಇತ್ಯರ್ಥ ಪಡಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಕೊನೆಗೂ ಜೋಡಿಯ ವಿವಾಹ ನಡೆದಿದೆ.

- Advertisement -