ಭುವನೇಶ್ವರ್: ವೈದ್ಯರು ಬರೆಯುವ ಔಷಧ ಚೀಟಿಯ ಬರವಣಿಗೆ ಮೆಡಿಕಲ್ ಶಾಪ್ ಸಿಬ್ಬಂದಿಗೆ ಮಾತ್ರ ಓದಲು ಸಾಧ್ಯವಾಗುತ್ತೆ ಎಂಬುದು ಜನರ ಸಾಮಾನ್ಯ ನಂಬಿಕೆಯಾಗಿದೆ. ಇದನ್ನು ಬದಲಾಯಿಸುವ ಮಹತ್ವದ ತೀರ್ಪನ್ನು ಒಡಿಶಾ ಹೈಕೋರ್ಟ್ ನೀಡಿದೆ.
ಎಲ್ಲ ವೈದ್ಯರು ವೈದ್ಯಕೀಯ ಚೀಟಿ, ಮರಣೋತ್ತರ ವರದಿ ಮತ್ತು ವೈದ್ಯಕೀಯ ಅಧಿಕೃತ ದಾಖಲೆಗಳನ್ನು ಸ್ಪಷ್ಟವಾದ ಕೈಬರಹ ಅಥವಾ ಕ್ಯಾಪಿಟಲ್ ಲೆಟರ್ಗಳಲ್ಲಿ ಬರೆಯುವುದನ್ನು ಆರೋಗ್ಯ ಇಲಾಖೆ ಖಚಿತಪಡಿಸಿಕೊಳ್ಳಬೇಕೆಂದು ಒಡಿಶಾ ಹೈಕೋರ್ಟ್ ಆದೇಶ ಹೊರಡಿಸಿದೆ.
ಪ್ರಕರಣವೊಂದರ ವಿಚಾರಣೆ ನಡೆಸಿದ ಮುಖ್ಯ ನ್ಯಾ. ಎಸ್.ಕೆ. ಪಾಣಿಗ್ರಹಿ ಒಡಿಶಾ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಹೀಗೆ ನಿರ್ದೇಶನ ನೀಡಿದ್ದಾರೆ. ಸಾರ್ವಜನಿಕರು ಮತ್ತು ನ್ಯಾಯಾಂಗ ವ್ಯವಸ್ಥೆಗೆ ಸುಲಭವಾಗುವಂತೆ ಸ್ಪಷ್ಟ ಕೈಬರಹ ಇರಬೇಕು ಎಂದು ಎಲ್ಲ ವೈದ್ಯಕೀಯ ಕೇಂದ್ರ, ಖಾಸಗಿ ಕ್ಲೀನಿಕ್ಗಳು ಮತ್ತು ವೈದ್ಯಕೀಯ ಕಾಲೇಜುಗಳಿಗೂ ಕೂಡ ನ್ಯಾಯಾಲಯ ಸೂಚಿಸಿದೆ.