ಹೊಸದಿಲ್ಲಿ: ಕೊರೋನಾದ ವೇಳೆ ಪ್ರಾಣ ತೆತ್ತ ಅಥವಾ ಈ ಸೋಂಕಿನಿಂದ ಬಾಧಿತರಾದ ವೈದ್ಯರ ಹಾಗೂ ಇತರ ವೈದ್ಯಕೀಯ ಸಿಬ್ಬಂದಿಯ ಮಾಹಿತಿಯಿಲ್ಲ ಎಂದು ಕೇಂದ್ರ ಸರಕಾರವು ಸಂಸತ್ತಿನಲ್ಲಿ ನೀಡಿದ ಹೇಳಿಕೆಗೆ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ (IMA) ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ IMA, ‘‘ಒಂದು ವೇಳೆ ಸರಕಾರವು ಕೊರೋನ ಬಾಧಿತರಾದ ವೈದ್ಯರು ಅಥವಾ ಆರೋಗ್ಯ ಕಾರ್ಯಕರ್ತರ ಮಾಹಿತಿ ಸಂಗ್ರಹಿಸುವುದಿಲ್ಲ ಮತ್ತು ಈ ಜಾಗತಿಕ ಮಹಾಮಾರಿಯ ಕಾರಣದಿಂದಾಗಿ ಎಷ್ಟು ಮಂದಿ ಪ್ರಾಣ ತೆತ್ತಿದ್ದಾರೆ ಎಂಬ ಅಂಕಿಅಂಶ ಇಟ್ಟುಕೊಳ್ಳುವುದಿಲ್ಲವಾದರೆ, ಅದು ಸಾಂಕ್ರಾಮಿಕ ರೋಗಗಳ ಕಾಯ್ದೆ 1897 ಮತ್ತು ವಿಕೋಪ ನಿರ್ವಹಣಾ ಕಾಯ್ದೆಯನ್ನು ಜಾರಿಗೊಳಿಸುವ ನೈತಿಕತೆಯನ್ನು ಕಳೆದುಕೊಳ್ಳುತ್ತದೆ. ಒಂದೆಡೆ ಇವರನ್ನು ಕೊರೋನ ವಾರಿಯರ್ ಎಂದು ಕರೆಯಲಾಗುತ್ತದೆ, ಮತ್ತೊಂದೆಡೆ ಅವರ ಮತ್ತು ಅವರ ಕುಟುಂಬಗಳಿಗೆ ಹುತಾತ್ಮತೆಯ ಸ್ಥಾನ ಮತ್ತು ಲಾಭವನ್ನು ನಿರಾಕರಿಸಲಾಗುತ್ತದೆ. ಇದು ಸರಕಾರದ ಬೂಟಾಟಿಕೆಯನ್ನು ಬಹಿರಂಗಪಡಿಸುತ್ತದೆ’’ ಎಂದು ಹೇಳಿದೆ.
‘’ಗಡಿಯಲ್ಲಿ ಹೋರಾಡುವ ನಮ್ಮ ಧೈರ್ಯಶಾಲಿ ಸೈನಿಕರು ತಮ್ಮ ಪ್ರಾಣವನ್ನು ಅಪಾಯಕ್ಕೊಡ್ಡಿ ಶತ್ರುಗಳೊಂದಿಗೆ ಸೆಣಸಾಡುತ್ತಾರೆ. ಆದರೆ ಯಾವುದೇ ಗುಂಡನ್ನು ತನ್ನ ಮನೆಗೆ ತರುವುದಿಲ್ಲ ಮತ್ತು ತನ್ನ ಕುಟುಂಬದೊಂದಿಗೆ ಹಂಚಿಕೊಳ್ಳುವುದಿಲ್ಲ. ಆದರೆ ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರು ರಾಷ್ಟ್ರೀಯ ಕರ್ತವ್ಯವನ್ನು ಪಾಲಿಸುತ್ತಾ, ಸ್ವತಃ ಸೋಂಕಿಗೆ ಒಳಗಾಗುವುದು ಮಾತ್ರವಲ್ಲ, ಅದನ್ನು ತನ್ನ ಮನೆಗೆ ತಂದು ಕುಟುಂಬ ಮತ್ತು ಮಕ್ಕಳಿಗೆ ನೀಡುತ್ತಾರೆ’’ ಎಂದು IMA ಪ್ರತಿಕ್ರಿಯಿಸಿದೆ.
“ಸಾರ್ವಜನಿಕ ಆರೋಗ್ಯ ಮತ್ತು ಆಸ್ಪತ್ರೆಗಳು ರಾಜ್ಯಗಳಡಿಯಲ್ಲಿ ಬರುತ್ತವೆ. ಆದ ಕಾರಣ ವಿಮಾ ಪರಿಹಾರದ ಅಂಕಿಅಂಶ ಕೇಂದ್ರ ಸರಕಾರ ಬಳಿ ಇಲ್ಲ ಎಂದು ಕೇಂದ್ರೀಯ ಆರೋಗ್ಯದ ರಾಜ್ಯ ಸಚಿವ ಅಶ್ವಿನಿ ಕುಮಾರ್ ಚೌಬೆ ಹೇಳಿದ್ದಾರೆ. ಇದು ಪಲಾಯನವಾದ ಮತ್ತು ತಮ್ಮ ಜನರೊಂದಿಗೆ ನಿಂತ ರಾಷ್ಟ್ರೀಯ ನಾಯಕರ ಅಪಮಾನವಾಗಿದೆ’’ ಎಂದು ಅಸೋಸಿಯೇಷನ್ ಹೇಳಿದೆ. ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಕೊರೋನಾದ ವೇಳೆ ಪ್ರಾಣ ತೆತ್ತ 382 ಮಂದಿ ವೈದ್ಯರ ಪಟ್ಟಿಯನ್ನು ಬಿಡುಗಡೆಗೊಳಿಸಿದೆ.