ಮಂಗಳೂರು, ಜು.23: ಈ ಹಿಂದೆಯೇ ತಾವು ಜು.26 ಕ್ಕೆ ಮಾತಾಡುತ್ತೇನೆ ಎಂದು ಹೇಳಿದ್ದೆ. ಈ ರಾಜ್ಯದಲ್ಲಿ ಒಳ್ಳೆಯ ಸರ್ಕಾರ ಕೊಡಲು ಬಿಜೆಪಿಗೆ ಆಗಿಲ್ಲ. ಹೀಗಾಗಿ ಮುಖ್ಯಮಂತ್ರಿ ಬದಲಾವಣೆ ಮಾಡುತ್ತಿದ್ದಾರೆ. ಡಬಲ್ ಇಂಜಿನ್ ಸರ್ಕಾರ ಇದ್ದರೂ ಉತ್ತಮ ಆಡಳಿತ ನೀಡಿಲ್ಲ ಎಂದು ಕೆ.ಪಿ.ಸಿ.ಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಆರೋಪಿಸಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರಕ್ಕೆ ಗೌರವ ಎಲ್ಲಿದೆ? ಬಿಜೆಪಿಯವರು ಎಷ್ಟೇ ಮುಖ್ಯಮಂತ್ರಿಗಳನ್ನು ಬದಲಾಯಿಸಿದರೂ ಅವರ ಪಕ್ಷದ ಬಗ್ಗೆ ಮಾತಾಡುವುದಿಲ್ಲ. ಆದರೆ ಆಡಳಿತ ವ್ಯವಸ್ಥೆಯ ಕಥೆಯೇನು? ಯಾವ ಅಧಿಕಾರಿಗಳೂ ಸಚಿವರ ಮಾತು ಕೇಳುತ್ತಿಲ್ಲ. ತರಾತುರಿಯಲ್ಲಿ ಎಲ್ಲಾ ಕಡತ ಗಳಿಗೆ ಸಹಿ ಹಾಕಲಾಗುತ್ತಿದೆ. ಅದರಲ್ಲೂ ನೀರಾವರಿ ಇಲಾಖೆಯಲ್ಲಿ ಎಷ್ಟೋ ಫೈಲ್ ಕ್ಲಿಯರ್ ಆಗುತ್ತಿವೆ. ಅಧಿವೇಶನ ಬಂದಾಗ ಈ ಬಗ್ಗೆ ದಾಖಲೆಯೊಂದಿಗೆ ಮಾತನಾಡುತ್ತೇನೆ ಎಂದರು.
ಯಾರಾದರೂ ಕಾಂಗ್ರೆಸ್ ಗೆ ಸೇರುವುದಾದರೆ ಮೊದಲು ಅರ್ಜಿ ಸಲ್ಲಿಸಲಿ. ಆಮೇಲೆ ಕೂತು ಮಾತಾಡೋಣ. ಕಾಂಗ್ರೆಸ್ ಪಾರ್ಟಿಗೆ ಸೇರಲು ಇಷ್ಟ ಇರುವವರು ಬಹಳಷ್ಟು ಜನ ಇದ್ದಾರೆ. ಅವರ ಹೆಸರು ಹೇಳುವುದಿಲ್ಲ. ಪಕ್ಷದ ಕಾನೂನಿನಡಿ ನಿರ್ಧಾರ ತೆಗೆದುಕೊಳುತ್ತೇವೆ ಎಂದರು.
ಯಡಿಯೂರಪ್ಪ ಅವರಿಗೆ ಮಠಾಧೀಶರ ಬೆಂಬಲ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಮಠಾಧೀಶರು ಅವರ ಅಭಿಪ್ರಾಯ ಹೇಳುತ್ತಿದ್ದಾರೆ ಎಂದು ಹೇಳಿದರು.