ರಾಜಧಾನಿಯಲ್ಲಿ ಮತ್ತೆ ರೌಡಿಗಳಿಗೆ ಡ್ರಿಲ್: ಮನೆಗಳ ಮೇಲೆ ಸಿಸಿಬಿ ದಾಳಿ

Prasthutha|

ಬೆಂಗಳೂರು,ಜು.23: ಬೆಂಗಳೂರಿನಲ್ಲಿ ಅಪರಾಧ ಚಟುವಟಿಕೆಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಿಸಿಬಿ ಅಧಿಕಾರಿಗಳು ಇಂದು ಮುಂಜಾನೆಯಿಂದ 45 ಕ್ಕೂ ಹೆಚ್ಚು ರೌಡಿಗಳ ಮನೆಗಳ ಮೇಲೆ ದಿಢೀರ್ ದಾಳಿ ನಡೆಸಿ, ಪರಿಶೀಲನೆ ನಡೆಸಿದ್ದಾರೆ.

- Advertisement -


ಪರಪ್ಪನ ಅಗ್ರಹಾರ ಜೈಲಿನಲ್ಲಿ ಕುಳಿತು ಅಪರಾಧ ಚಟುವಟಿಕೆ ನಡೆಸುತ್ತಿರುವ ವಿಲ್ಸನ್ ಗಾರ್ಡನ್ ನ ರೌಡಿಶೀಟರ್ ನಾಗ, ನಟೋರಿಯಸ್ ರೌಡಿಗಳಾದ ಸೈಕಲ್ ರವಿ, ಸೈಲೆಂಟ್ ಸುನೀಲ ಜಿ.ಬಿ.ನಾರಾಯಣ್ ಸೇರಿದಂತೆ ರೌಡಿಗಳ ಸಹಚರರ ನಿವಾಸಗಳ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ ನಗದು, ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ಜೈಲಿನಲ್ಲಿದ್ದರೂ ಪರೋಕ್ಷವಾಗಿ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುತ್ತಿರುವ ರೌಡಿ ನಾಗ ಮನೆಯಲ್ಲಿ ಡ್ರ್ಯಾಗರ್ ಹಾಗೂ 2 ಲಕ್ಷ ರೂ. ಹಣ ಪತ್ತೆಯಾಗಿದ್ದು ಅದನ್ನು ವಶಪಡಿಸಿಕೊಳ್ಳಲಾಗಿದೆ. ಅಲ್ಲದೇ ಸಹಚರರ ಮನೆಯಲ್ಲಿ ಡ್ರ್ಯಾಗರ್ ಗಳು ಪತ್ತೆಯಾಗಿದ್ದು, ಮಾರಕಾಸ್ತ್ರಗಳನ್ನು ಅಧಿಕಾರಿಗಳು ವಶಪಡಿಸಿಕೊಂಡು ಪರಿಶೀಲನೆ ನಡೆಸಿ ಕುಟುಂಬದವರ ವಿಚಾರಣೆ ನಡೆಸಲಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.

ನಗರದಲ್ಲಿ ಅಪರಾಧ ಚಟುವಟಿಕೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದಾಳಿ ನಡೆಸಿ ಸಹಚರರ ತೀವ್ರ ವಿಚಾರಣೆ ನಡೆಸಲಾಗಿದೆ.
ಅಪರಾಧ ಕೃತ್ಯಗಳಲ್ಲಿ ಹಾಗೂ ರೌಡಿ ಚಟುವಟಿಕೆಗಳಲ್ಲಿ ತೊಡಗಿದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ. ಅಲ್ಲದೇ ಕೆಲವರನ್ನು ಠಾಣೆಗೆ ಕರೆಸಿಕೊಂಡು ಮುಚ್ಚಳಿಕೆ ಬರೆಸಿಕೊಳ್ಳಲಾಗಿದ್ದು ರೌಡಿ ಕುಟುಂಬದವರಿಗೂ ಕೂಡ ಎಚ್ಚರಿಕೆ ನೀಡಲಾಗಿದೆ ಎಂದರು.

- Advertisement -

ಪ್ರತ್ಯೇಕ ತಂಡ ರಚನೆ:
ಈ ನಡುವೆ ರೌಡಿಗಳ ಮೇಲೆ ನಿಗಾವಹಿಸಲು ಆಯಾ ಠಾಣಾ ವ್ಯಾಪ್ತಿಯಲ್ಲಿ ಇಬ್ಬರು ಸಬ್ ಇನ್ ಸ್ಪೆಕ್ಟರ್ ನೇತೃತ್ವದಲ್ಲಿ 2 ಪ್ರತ್ಯೇಕ ತಂಡ ರಚಿಸಲು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಸೂಚನೆ ನೀಡಿದ್ದಾರೆ. ಕಮೀಷನರ್ ಸೂಚನೆಯಂತೆ ನಗರದ ಎಲ್ಲಾ ಠಾಣೆಗಳಲ್ಲೂ ಪ್ರತ್ಯೇಕ ತಂಡ ರಚಿಸಲಾಗಿದ್ದು ತಂಡಗಳು ತಮ್ಮ ಠಾಣಾ ವ್ಯಾಪ್ತಿಯ ರೌಡಿ ಗಳ ಪಿನ್ ಟು ಪಿನ್ ಮಾಹಿತಿ ಕಲೆ ಹಾಕಲಿವೆ. ಠಾಣಾ ವ್ಯಾಪ್ತಿಯಲ್ಲಿರುವ ರೌಡಿಗಳು ಅವರ ವಿಳಾಸ, ಪ್ರಸ್ತುತ ಉದ್ಯೋಗ, ಎಲ್ಲಿ ಕೆಲಸ ಅವರ ಹಿನ್ನೆಲೆ ಏನು? ತಮ್ಮ ವ್ಯಾಪ್ತಿಯ ರೌಡಿಶೀಟರ್ಗಳ ವಿರೋಧಿ ಬಣದವರು ಯಾರು? ಅವರು ಎಲ್ಲಿದ್ದಾರೆ? ಹೀಗೆ ವಿವಿಧ ವಿಷಯಗಳನ್ನು ಸಂಗ್ರಹಿಸುತ್ತಿದ್ದಾರೆ.

ಜೈಲಿನಲ್ಲಿ ಗ್ಯಾಂಗ್ ಕಟ್ಟಿಕೊಂಡು ಸಕ್ರಿಯರಾಗಿರುವ ನಟೋರಿಯಸ್ ರೌಡಿಗಳನ್ನು ಬೆಳಗಾವಿ ಹಿಂಡಲಗಾ ಹಾಗೂ ಬಳ್ಳಾರಿ ಜೈಲು ಸೇರಿದಂತೆ ಇತರೆ ಕಾರಾಗೃಹಕ್ಕೆ ಸ್ಥಳಾಂತರಿಸಲು ಮುಂದಾಗಿದ್ದಾರೆ. ರೌಡಿಗಳು ಮತ್ತವರ ಸಹಚರರನ್ನು ಒಂದೇ ಕಡೆ ಇರಿಸದೆ ಬೇರೆ ಬೇರೆ ಬ್ಯಾರಕ್ಗಳಲ್ಲಿ ಇರಿಸಲು ಚಿಂತನೆ ನಡೆಸಿದ್ದಾರೆ. ಅಲ್ಲದೆ ಜೈಲಿನ ಒಳಗೆ ಹಾಗೂ ಹೊರಗೆ ರೌಡಿಶೀಟರ್ಗಳ ಸಂಪರ್ಕದಲ್ಲಿ ಪೊಲೀಸ್ ಸಿಬ್ಬಂದಿ ಕಂಡುಬಂದರೆ, ಶಿಸ್ತುಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.

ಮೊಬೈಲ್ ಚೂರಿ ಪತ್ತೆ:
ಇತ್ತೀಚೆಗೆ ಸಿಸಿಬಿ ಅಧಿಕಾರಿಗಳು ಜೈಲಿನ ಮೇಲೆ ದಾಳಿ ನಡೆಸಿದಾಗ ಮೊಬೈಲ್, ಸಣ್ಣ ಚಾಕು-ಚೂರಿ ಪತ್ತೆಯಾಗಿದ್ದವು. ಅಷ್ಟೇ ಅಲ್ಲದೇ ತಟ್ಟೆ, ಚಮಚಗಳನ್ನು ಕೂಡ ಆಯುಧಗಳಾಗಿ ಪರಿವರ್ತನೆ ಮಾಡಿಕೊಂಡಿದ್ದರು. ದಾಳಿ ನಡೆಸಿ ಬಿಸಿ ಮುಟ್ಟಿಸಿದರೂ ಕೂಡ ಯಾವುದೇ ಪ್ರಯೋಜನವಾದಂತೆ ಕಾಣುತ್ತಿಲ್ಲ.ಈ ನಿಟ್ಟಿನಲ್ಲಿ ಜೈಲಿನಲ್ಲಿರುವ ರೌಡಿಗಳಿಗೆ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಶಾಕ್ ನೀಡಲು ಮುಂದಾಗಿದ್ದಾರೆ.

Join Whatsapp