ಯಡಿಯೂರಪ್ಪರನ್ನು ಬದಲಾಯಿಸುತ್ತಾರೆ, ಆದರೆ ಮುಖ್ಯಮಂತ್ರಿಯಾಗಿ ಬರುವವನು ಕೂಡ ಭ್ರಷ್ಟನೇ ಆಗಿರುತ್ತಾನೆ: ಸಿದ್ದರಾಮಯ್ಯ ಭವಿಷ್ಯ

Prasthutha|

ಮಂಗಳೂರು, ಜು.23: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪರನ್ನು ಬದಲಾವಣೆ ಮಾಡುತ್ತಾರೆ, ಆದರೆ ಮುಖ್ಯಮಂತ್ರಿಯಾಗಿ ಬರುವವನು ಕೂಡ ಭ್ರಷ್ಟನೇ ಆಗಿರುತ್ತಾನೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಭವಿಷ್ಯ ನುಡಿದಿದ್ದಾರೆ.

- Advertisement -


ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನರ ಬಗ್ಗೆ ಬಿಜೆಪಿಗೆ ಕಾಳಜಿ ಇಲ್ಲ, ಹಿಂದೆಯೂ ಇರಲಿಲ್ಲ, ಈಗ ಅದು ಉಂಟಾಗಲು ಸಾಧ್ಯವಿಲ್ಲ. 2019ರಲ್ಲಿ ಬಂದ ಪ್ರವಾಹದ ಪರಿಹಾರವನ್ನೇ ಮುಖ್ಯಮಂತ್ರಿ ಯಡಿಯೂರಪ್ಪ ಇನ್ನೂ ಕೊಟ್ಟಿಲ್ಲ. ಈಗ ಎಲ್ಲಾ ಕಡೆ ಮಳೆ ಬಂದು ಜನ ಕೊಚ್ಚಿ ಹೋಗಿದ್ದಾರೆ, ಮನೆಗಳು ಬಿದ್ದಿವೆ, ಈಗ ಸರ್ಕಾರ ಯುದ್ಧೋಪಾದಿಯಲ್ಲಿ ಕೆಲಸ ಮಾಡುವ ಬದಲು ಸಿಎಂ ಬದಲಾವಣೆಯಲ್ಲಿದ್ದಾರೆ ಎಂದು ಹೇಳಿದರು.


ಯಾವುದೇ ಮಠಾಧೀಶರು ರಾಜಕಾರಣಕ್ಕೆ ಕೈ ಹಾಕಬಾರದು, ಇಲ್ಲಿ ಜನಾಭಿಪ್ರಾಯ ಬಹಳ ಮುಖ್ಯ, ಪಕ್ಷದ ಒಳಗಿನ ವಿಚಾರದಲ್ಲಿ ಯಾರೂ ಕೈ ಹಾಕಬಾರದು ಎಂದು ಸಿದ್ದರಾಮಯ್ಯ ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ವಲಸಿಗ ಸಚಿವರನ್ನು ಮತ್ತೆ ಕಾಂಗ್ರೆಸ್ ಗೆ ಸೇರಿಸಿಕೊಳ್ಳುವ ವಿಚಾರದ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಕಾಂಗ್ರೆಸ್ ನಿಂದ ಬಿಜೆಪಿ ಹೋದವರು ಮತ್ತೆ ಪಕ್ಷಕ್ಕೆ ಬರುತ್ತಾರೆ ಎಂಬುದರ ಬಗ್ಗೆ ತಮಗೆ ಮಾಹಿತಿ ಇಲ್ಲ. ಈ ಬಗ್ಗೆ ನಾನು ಸದನದಲ್ಲೇ ಅವರನ್ನು ವಾಪಸ್ ತೆಗೆದುಕೊಳ್ಳುವುದಿಲ್ಲ ಎಂದು ಹೇಳಿದ್ದೇನೆ. ಯಾವುದೇ ಕಾರಣಕ್ಕೂ ಅವರನ್ನು ವಾಪಸ್ ತೆಗೆದುಕೊಳ್ಳುವುದಿಲ್ಲ ಎನ್ನುವ ಹೇಳಿಕೆಗೆ ಬದ್ಧನಾಗಿದ್ದೇನೆ ಎಂದರು.

- Advertisement -

ರಾಹುಲ್ ಗಾಂಧಿಯವರು ಎಲ್ಲರೂ ಒಟ್ಟಾಗಿ ಭ್ರಷ್ಟ ಬಿಜೆಪಿ ಸರ್ಕಾರ ಬದಲಾಯಿಸಿ ಎಂದು ಕರೆ ನೀಡಿದ್ದಾರೆ. ನಾನು ತಿಂಗಳ ಹಿಂದೆಯೇ ಯಡಿಯೂರಪ್ಪ ಬದಲಾಗುತ್ತಾರೆ ಎಂದು ಹೇಳಿದ್ದೆ. ನನಗೆ ಹೈಕಮಾಂಡ್ ಮೂಲದ ಮಾಹಿತಿ ಇತ್ತು, ಆದರೆ ಯಾರು ಬರುತ್ತಾರೆ ಎನ್ನುವ ಮಾಹಿತಿಯಿಲ್ಲ ಎಂದು ಸಿದ್ದರಾಮಯ್ಯ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಸಂಸದ ನಳಿನ್ ಗೆ ಸಿದ್ದರಾಮಯ್ಯ ಸವಾಲು :

ಸಿದ್ದರಾಮಯ್ಯ ದಲಿತರನ್ನು ಮುಖ್ಯಮಂತ್ರಿ ಮಾಡಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಮಗೆ ಸವಾಲು ಹಾಕಿದ್ದರು ಆದರೆ ನಮ್ಮಲ್ಲಿ ಬಹಳ ಜನ ದಲಿತರು ಮುಖ್ಯಮಂತ್ರಿ ಆಗಿದ್ದಾರೆ. ಹೀಗಾಗಿ ಸದ್ಯ ಅವರಿಗೆ ಆ ಅವಕಾಶ ಇದೆ, ಕಟೀಲ್ ದಲಿತರನ್ನು ಸಿಎಂ ಮಾಡಲಿ ಎಂದು ಸಿದ್ದರಾಮಯ್ಯ ಪ್ರತಿ ಸವಾಲು ಹಾಕಿದರು.

ಯಡಿಯೂರಪ್ಪರನ್ನು ಹೇಗಿದ್ದರೂ ತೆಗೆಯುತ್ತಿದ್ದಾರೆ, ಈಗ ದಲಿತರನ್ನು ಮುಖ್ಯಮಂತ್ರಿ ಮಾಡಲಿ. ಅವರ ಬಗ್ಗೆ ಕಟೀಲ್ ಗೆ ಪ್ರೀತಿ ಇದೆ ಅಲ್ಲವೇ. ಹಾಗಾದರೆ ದಲಿತ ಸಮುದಾಯಕ್ಕೆ ಸೇರಿದವರನ್ನೇ ಸಿಎಂ ಮಾಡಲಿ ಎಂದು ಹೇಳಿದರು.

ಫೋನ್ ಕದ್ದಾಲಿಕೆಯಿಂದ ಸಮ್ಮಿಶ್ರ ಸರ್ಕಾರ ಪತನ ಆರೋಪದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಫೋನ್ ಕದ್ದಾಲಿಕೆ ಇದೇ ಮೊದಲಲ್ಲ, ಬಿಜೆಪಿ ಇದಕ್ಕೂ ಮೊದಲು ಮಾಡಿದೆ. 2019ರಲ್ಲಿ ನನ್ನ ಪಿಎ ವೆಂಕಟೇಶ್ ಫೋನ್ ಕದ್ದಾಲಿಕೆ ಮಾಡಿದ್ದಾರೆ.
ಎಚ್ ಡಿ ಕುಮಾರಸ್ವಾಮಿ, ಜಿ.ಪರಮೇಶ್ವರ್ ಸೇರಿ ಹಲವರ ಫೋನ್ ಕದ್ದಾಲಿಕೆ ಮಾಡಿದ್ದಾರೆ. ಸಮ್ಮಿಶ್ರ ಸರ್ಕಾರ ಕಿತ್ತು ಹಾಕಲು ಏನು ಬೇಕೋ ಅದೆಲ್ಲಾ ಮಾಡಿದ್ದಾರೆ. ನಾನು ಈ ಬಗ್ಗೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಮೂಲಕ ತನಿಖೆಗೆ ಆಗ್ರಹಿಸುತ್ತೇನೆ. ಇದೊಂದು ಪ್ರಜಾಪ್ರಭುತ್ವದ ಕೊಲೆ, ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ಜಡ್ಜ್ ಗಳದ್ದೇ ಕದ್ದಾಲಿಸುವುದು ದೇಶದ್ರೋಹದ ಕೆಲಸ. ಇವರಿಗೆ ಸರ್ಕಾರ ನಡೆಸಲು ಯೋಗ್ಯತೆ ಇಲ್ಲ, ನಾಲಾಯಕ್ ಗಳು ಎಂದು ವಾಗ್ದಾಳಿ ನಡೆಸಿದರು.

Join Whatsapp