ದ.ಕ.ಜಿಲ್ಲೆಯಲ್ಲಿ ಸೆ.17ರಿಂದ 8- 10ನೇ ತರಗತಿ, ಸೆ.20ರಿಂದ 6-7ನೇ ತರಗತಿ ಆರಂಭ

Prasthutha|

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದೇ 17, ಶುಕ್ರವಾರದಿಂದ 8ರಿಂದ 10ನೇ ತರಗತಿವರೆಗೆ ಹಾಗೂ ಸೆಪ್ಟಂಬರ್ 20ರಿಂದ 6ರಿಂದ 7ನೇ ತರಗತಿ ಆರಂಭಕ್ಕೆ ಸಿದ್ಧತೆ ನಡೆಸಲಾಗಿದೆ. ಈಗಾಗಲೇ ಬೇರೆ ಜಿಲ್ಲೆಗಳಲ್ಲಿ ಈ ತರಗತಿಗಳು ಆರಂಭಗೊಂಡಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ತರಗತಿ ಆರಂಭಕ್ಕೆ ಉತ್ಸುಕವಾಗಿದೆ. ಜಿಲ್ಲೆಯಲ್ಲಿ ವಾರಾಂತ್ಯ ಕರ್ಫ್ಯೂ ರದ್ದುಗೊಂಡಿದ್ದರಿಂದ ಹಾಗೂ ಕೋವಿಡ್ ಪಾಸಿಟಿವಿಟಿ ದರ ಶೇಕಡಾ 2ಕ್ಕಿಂತ ಕಡಿಮೆ ಇರುವುದರಿಂದ ಜಿಲ್ಲಾಡಳಿತ ಕೂಡ ಶಾಲೆ ಆರಂಭಕ್ಕೆ ಒಪ್ಪಿಗೆ ನೀಡಿದೆ.

- Advertisement -


ಜಿಲ್ಲೆಯ ಖಾಸಗಿ, ಸರ್ಕಾರಿ, ಅನುದಾನಿತ ಶಾಲೆಗಳ ಆಡಳಿತ ಮಂಡಳಿಯೊಂದಿಗೆ ಜಿಲ್ಲಾಧಿಕಾರಿ ಸೋಮವಾರ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಎಲ್ಲಾ ಪ್ರತಿನಿಧಿಗಳು ಶಾಲೆ ಆರಂಭಕ್ಕೆ ಒತ್ತಾಯಿಸಿದ್ದಾರೆ ಎಂದು ದಕ್ಷಿಣ ಕನ್ನಡ ಮತ್ತು ಉಡುಪಿ ಆಂಗ್ಲ ಮಾಧ್ಯಮ ಶಾಲೆಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ರವೀಂದ್ರ ಶೆಟ್ಟಿ ಮಾಹಿತಿ ನೀಡಿದ್ದಾರೆ.


ಇದಕ್ಕೂ ಮೊದಲು ಜಿಲ್ಲೆಯ ಇತರ ಹಲವು ಸಂಘಟನೆಗಳು, ಶಿಕ್ಷಣ ತಜ್ಞರು ಕೂಡ ಶಾಲೆ ಆರಂಭಕ್ಕೆ ಒತ್ತಾಯಿಸಿದ್ದರು. ಜಿಲ್ಲಾಧಿಕಾರಿ ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಶಾಲೆ ಆರಂಭಕ್ಕೆ ನಮ್ಮ ತಕರಾರು ಇಲ್ಲ, ಆದರೆ ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಶಾಲೆ ಆರಂಭ ಕೋವಿಡ್ ಹೆಚ್ಚಳಕ್ಕೆ ಹೇತುವಾಗಬಾರದು ಎಂದು ನಿರ್ದೇಶಿಸಿದ್ದಾರೆ ಎನ್ನಲಾಗಿದೆ. ಇಂದಿನ ಸಭೆಯಲ್ಲಿ ಚರ್ಚಿಸಿದಂತೆ ಜಿಲ್ಲೆಯಲ್ಲಿ ಶಾಲಾರಂಭಕ್ಕೆ ಜಿಲ್ಲಾಧಿಕಾರಿಗಳು ಹಸಿರು ನಿಶಾನೆ ನೀಡಿದ್ದಾರೆ. ಈ ಕುರಿತು ಜಿಲ್ಲಾಧಿಕಾರಿಗಳು ಆದಷ್ಟು ಶೀಘ್ರವೇ ಅಧಿಕೃತ ಪ್ರಕಟಣೆ ಹೊರಡಿಸಲಿದ್ದಾರೆ ಎಂದು ತಿಳಿದು ಬಂದಿದೆ.



Join Whatsapp