ದೇಶದ ಭವಿಷ್ಯ ಅಧೋಗತಿ

Prasthutha|

ಕೋವಿಡ್ -19 ಸೋಂಕಿನಿಂದ ಜರ್ಜರಿತಗೊಂಡಿರುವ ಭಾರತೀಯ ಬಡ ಮತ್ತು ಮಧ್ಯಮ ವರ್ಗ ಪುನಶ್ಚೇತನಗೊಳ್ಳಲು ಯತ್ನಿಸುತ್ತಿರುವಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಸುವ ಮೂಲಕ ಕೇಂದ್ರದ ಬಿಜೆಪಿ ಸರ್ಕಾರ ಈ ವರ್ಗವನ್ನು ಹಿಂಡಿ ಹಿಪ್ಪೆ ಮಾಡಿದೆ. ಅಡುಗೆ ಅನಿಲ ಬೆಲೆ ಏರಿಕೆಯಿಂದ ಗ್ರಾಮೀಣ ಭಾಗದ ಜನರು ಮತ್ತೆ ಹಳೆಯ ಒಲೆ ಅಡುಗೆಯತ್ತ ಮುಖ ಮಾಡುತ್ತಿದ್ದಾರೆ.

- Advertisement -

ಕಳೆದ ಒಂದು ತಿಂಗಳ ಅವಧಿಯಲ್ಲೇ ಗ್ಯಾಸ್ ಸಿಲಿಂಡರ್ ಬೆಲೆ 50 ರೂ.ಏರಿಕೆ ಕಂಡು 900 ರೂ. ಆಸುಪಾಸಿನಲ್ಲಿ ಬಂದು ನಿಂತಿದೆ. ಈ ವರ್ಷಾಂತ್ಯಕ್ಕೆ ಇದು ಒಂದು ಸಾವಿರ ದಾಟಿದರೂ ಅಚ್ಚರಿಪಡಬೇಕಿಲ್ಲ. ಏಕೆಂದರೆ ನಿರಂತರ ಬೆಲೆ ಏರಿಕೆಯಾಗುತ್ತಿದ್ದರೂ ಅದರ ನಿಯಂತ್ರಣಕ್ಕೆ ಕಡಿವಾಣ ಹಾಕುವ ಅಥವಾ ಸುಂಕ ಕಡಿಮೆ ಮಾಡುವ ಪ್ರಯತ್ನಕ್ಕೆ ಕೇಂದ್ರ ಸರ್ಕಾರವಾಗಲೀ ರಾಜ್ಯ ಸರ್ಕಾರವಾಗಲೀ ಪ್ರಯತ್ನಿಸಿಲ್ಲ. ಬದಲಾಗಿ ಬಿಜೆಪಿ ನಾಯಕರು ಒಂದಿಲ್ಲೊಂದು ಸಬೂಬು ನೀಡುತ್ತಾ ಬೆಲೆ ಏರಿಕೆಯನ್ನು ಸಮರ್ಥಿಸುತ್ತಿದ್ದಾರೆ. ಕರ್ನಾಟಕದ ಬಿಜೆಪಿ ಶಾಸಕ ಅರವಿಂದ ಬೆಲ್ಲದ್ ಅವರು ಪೆಟ್ರೋಲ್ ಬೆಲೆ ಏರಿಕೆಗೆ ತಾಲಿಬಾನ್ ಕಾರಣ, ಮಧ್ಯಪ್ರದೇಶದ ಬಿಜೆಪಿ ನಾಯಕ ರಾಮ್ ರತನ್ ಪಯಾಲ್, ಕಡಿಮೆ ಬೆಲೆಯಲ್ಲಿ ಡೀಸೆಲ್, ಪೆಟ್ರೋಲ್ ಬೇಕಾದವರು ಅಫ್ಘಾನಿಸ್ತಾನಕ್ಕೆ ಹೋಗಲಿ ಮುಂತಾದ ಉದ್ಧಟತನದ ಹೇಳಿಕೆಗಳು, ಅವರ ಬೌದ್ಧಿಕ ಅಧಃಪತನವನ್ನು ತೋರಿಸುತ್ತದೆ. ಇತ್ತ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ಕಾಂಗ್ರೆಸ್ ಪ್ರತಿಭಟನೆ ಮಾಡುವಷ್ಟರ ಮಟ್ಟಿಗೆ ಬೆಲೆ ಏರಿಕೆಯಾಗಿಲ್ಲ ಎಂದು ಹೇಳಿದರೆ, ಸಚಿವ ಮುರುಗೇಶ್ ನಿರಾಣಿ, ಮೋದಿ ಇದ್ದುದರಿಂದ ಪೆಟ್ರೋಲ್ ಬೆಲೆ 100ರ ಗಡಿಯಲ್ಲಿದೆ, ಬೇರೆಯವರು ಇದ್ದಿದ್ದರೆ ಇನ್ನೂ ಜಾಸ್ತಿಯಾಗುತ್ತಿತ್ತು ಎಂಬ ದಾಷ್ಟ್ಯತನದ ಹೇಳಿಕೆ ನೀಡಿ ಜನರ ಆಕ್ರೋಶಕ್ಕೆ ಕಾರಣರಾಗಿದ್ದಾರೆ. ಈ ಮಧ್ಯೆ ಬಿಜೆಪಿಯ ನಾಯಕ ವರ್ಗ ಮತ್ತು ಐಟಿ ಸೆಲ್ ಬೆಲೆ ಏರಿಕೆಗೆ ಹಿಂದಿನ ಸರ್ಕಾರ ಕಾರಣ ಎಂಬಂತೆ ಸುಳ್ಳು ಅಂಕಿಅಂಶಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಡಿ ಜನರ ದಾರಿತಪ್ಪಿಸುತ್ತಿದೆ. ಪೆಟ್ರೋಲ್ ಬೆಲೆ ಏರಿಕೆ ಕೇವಲ ವಾಹನ ಇದ್ದವರಿಗಷ್ಟೇ ಹೊಡೆತ ಎಂಬುದು ಸುಳ್ಳು. ಏಕೆಂದರೆ ಪೆಟ್ರೋಲ್ ಬೆಲೆ ಏರಿದರೆ ಸಾರಿಗೆ ದರ ಏರಿಕೆಯಾಗಿ ಅದರೊಂದಿಗೆ ಸಂಬಂಧ ಹೊಂದಿರುವ ಇತರ ಎಲ್ಲಾ ಕ್ಷೇತ್ರಗಳಲ್ಲಿಯೂ ಬೆಲೆ ಏರಿಕೆಯಾಗುತ್ತದೆ. ಇದರ ಅಂತಿಮ ಪರಿಣಾಮ ಜನಸಾಮಾನ್ಯರ ಮೇಲೆ ತಟ್ಟುತ್ತಿರುವುದರಿಂದ ದೇಶದ ಒಟ್ಟಾರೆ ಆರ್ಥಿಕ ಸ್ಥಿತಿ ಕುಸಿಯುತ್ತದೆ. ಬಡತನ ಪ್ರಮಾಣ ಹೆಚ್ಚಾಗಿ ದೇಶದಲ್ಲಿ ಆತ್ಮಹತ್ಯೆ ಪ್ರಕರಣಗಳು ಜಾಸ್ತಿಯಾಗುತ್ತಿವೆ.

ಕರ್ನಾಟಕದಲ್ಲಿ ಪ್ರತಿ 46 ನಿಮಿಷಕ್ಕೆ ಒಬ್ಬ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ. 2015-2019 ಅವಧಿಯಲ್ಲಿ ರಾಜ್ಯದಲ್ಲಿ 54,038 ಮಂದಿ ಆತ್ಮಹತ್ಯೆಗೆ ಶರಣಾಗಿದ್ದು, ದೇಶದಲ್ಲೇ ಕರ್ನಾಟಕ ರಾಜ್ಯ ಆತ್ಮಹತ್ಯೆಯಲ್ಲಿ 5ನೇ ಸ್ಥಾನದಲ್ಲಿರುವುದು ಅತ್ಯಂತ ಕಳವಳಕಾರಿ ವಿಷಯ. ಬಿಜೆಪಿಯ ಆರ್ಥಿಕ ನೀತಿಯಿಂದಾಗಿ ಜನರ ಮಾನಸಿಕ ಸ್ಥೈರ್ಯ ಕುಸಿದಿದ್ದು, ನಿರುದ್ಯೋಗ, ಖಿನ್ನತೆಯಿಂದ ಜನ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇಂತಹ ದುರಿತ ಕಾಲದಲ್ಲಿ ಪ್ರಧಾನಿ ಮೋದಿಯವರ ಹುಟ್ಟುಹಬ್ಬವನ್ನು ದೇಶಾದ್ಯಂತ ಮೂರು ವಾರಗಳ ಕಾಲ ಸಂಭ್ರಮದಿಂದ ಆಚರಿಸಲು ಬಿಜೆಪಿ ನಿರ್ಧರಿಸಿರುವುದು ಹಾಸ್ಯಾಸ್ಪದ ಮಾತ್ರವಲ್ಲ ಖಂಡನೀಯ.

- Advertisement -

ಅವೈಜ್ಞಾನಿಕ ಲಾಕ್ ಡೌನ್‌ನಿಂದ ನಿರುದ್ಯೋಗ, ಬಡತನ ಹೆಚ್ಚಾಗಿ ಜನರು ತತ್ತರಿಸಿರುವಾಗ ಈ ಸಂಭ್ರಮ ಯಾತಕ್ಕಾಗಿ ಎಂದು ಜನಸಾಮಾನ್ಯ ಪ್ರಶ್ನಿಸುವಂತಾಗಿದೆ. ಬಿಜೆಪಿಯ ಆರ್ಥಿಕ ನೀತಿಯಿಂದ ಭಾರತ ಅಭಿವೃದ್ಧಿಶೀಲ ದೇಶಗಳ ಪಟ್ಟಿಯಿಂದ ನಿಧಾನವಾಗಿ ಬಡತನದ ದೇಶದ ಪಟ್ಟಿಗೆ ಜಾರುತ್ತಿದೆ. ನೆರೆಯ ಶ್ರೀಲಂಕಾ, ಬಾಂಗ್ಲಾದೇಶ, ಪಾಕಿಸ್ತಾನ ಕೂಡ ಆರ್ಥಿಕ ಸ್ಥಿರತೆಯನ್ನು ಕಾಪಾಡಿಕೊಂಡು ಪ್ರಗತಿಯೆಡೆಗೆ ಮುನ್ನುಗ್ಗುತ್ತಿದ್ದರೆ ಭಾರತದ ಆರ್ಥಿಕತೆ ಕುಸಿಯುತ್ತಿದೆ. ಮೂಲಭೂತವಾದಿ ಆರೆಸ್ಸೆಸ್ ಸಂಘಟನೆಯ ಹಿಡನ್ ಅಜಂಡಾವನ್ನು ತರಲು ಉತ್ಸುಕವಾಗಿರುವ ಕೇಂದ್ರದ ಬಿಜೆಪಿ ಸರ್ಕಾರ, ಜನರು ಬಡತನದಲ್ಲೇ ಇರಲಿ ಎಂಬಂತೆ ವರ್ತಿಸುತ್ತಿದೆ. ಜನ ಹಸಿವು, ಬಡತನದಲ್ಲೇ ಇರಬೇಕು, ಇತರ ಸಮಸ್ಯೆಗಳ ಬಗ್ಗೆ ಮಾತನಾಡಬಾರದು, ಯಾವುದೇ ಪ್ರತಿಭಟನೆ, ಪ್ರತಿರೋಧ ತೋರಬಾರದು, ಹಾಗಿದ್ದರೆ ಮಾತ್ರ ತಮ್ಮ ಹಿಡನ್ ಅಜಂಡಾ ಜಾರಿ ಮಾಡಲು ಸಾಧ್ಯ ಎಂಬ ದುರಾಲೋಚನೆಯೇ ಬೆಲೆ ಏರಿಕೆಯನ್ನು ತಡೆಯದಿರುವ ಕಾರಣ ಎಂಬುದನ್ನು ಅರಿಯಲು ಹೆಚ್ಚಿನ ಬುದ್ಧಿವಂತಿಕೆಯ ಅಗತ್ಯವಿಲ್ಲ.

ದೇಶದ ಒಂದೊಂದೇ ಸಂಪತ್ತನ್ನು ಖಾಸಗೀಕರಣಗೊಳಿಸುವ ಮತ್ತು ಮಾರುತ್ತಿರುವ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಪ್ರಜಾಪ್ರಭುತ್ವ ಮತ್ತು ಒಕ್ಕೂಟ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟಿರುವವರು ಎಚ್ಚೆತ್ತುಕೊಂಡು ಜನಾಂದೋಲನ ರೂಪಿಸದಿದ್ದರೆ ದೇಶದ ಭವಿಷ್ಯ ಅಧೋಗತಿಗೆ ಇಳಿಯುವುದರಲ್ಲಿ ಯಾವುದೇ ಸಂಶಯವಿಲ್ಲ.

Join Whatsapp