ಬೆಂಗಳೂರು; ಈ ಮಕ್ಕಳದ್ದೇನು ಹಟ? ಹಿಜಾಬ್ ತೆಗೆದಿಟ್ಟು ಶಾಲೆಗೆ ಹೋಗಬಾರದಾ? ಎಂದು ಈಗ ನಮ್ಮವರೇ ಕೇಳುತ್ತಾರಲ್ಲಾ, ಇದೇ ರೀತಿ 1992ರಲ್ಲಿ ಹುಬ್ಬಳ್ಳಿ-ಧಾರವಾಡದ ಜನ “ ಈದ್ಗಾ ಮೈದಾನದಲ್ಲಿ ರಾಷ್ಟ್ರಧ್ವಜ ಹಾರಿಸಿದರೆ ಇವರದ್ದೇನು ಗಂಟು ಹೋಗುತ್ತಾ? ಎಂದು ಕೇಳುತ್ತಿದ್ದರು.
ಅವರಿವರು ಮಾತ್ರ ಅಲ್ಲ, ಆ ಕಾಲದಲ್ಲಿ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಬಂದಿದ್ದ ಶಿವರಾಮ ಕಾರಂತರೂ ನನ್ನೊಡನೆ ಕೇಳಿದ್ದರು. ಆಗ ನಾನು ಧಾರವಾಡದಲ್ಲಿ ಪ್ರಜಾವಾಣಿ ಪತ್ರಿಕೆಗೆ ವರದಿಗಾರನಾಗಿದ್ದೆ.
ಈ ಸಣ್ಣ ಪ್ರಶ್ನೆಯ ಕಿಡಿ ದೊಡ್ಡ ಬೆಂಕಿಯಾಗಿ ಈದ್ಗಾ ಮೈದಾನದ ಹೋರಾಟವಾಗಿ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆಯಿತು. ಲಾಲ್ ಕೃಷ್ಣ ಅಡ್ವಾಣಿ, ಮುರಳಿ ಮನೋಹರ ಜೋಷಿ, ಉಮಾ ಭಾರತಿಯವರಿಂದ ಹಿಡಿದು ಬಿಜೆಪಿ ಮತ್ತು ಪರಿವಾರದ
ಘಟಾನುಘಟಿ ನಾಯಕರೆಲ್ಲರೂ ಈದ್ಗಾ ಮೈದಾನಕ್ಕೆ ಧಾಂಗುಡಿ ಇಟ್ಟಿದ್ದರು.
ರಾಜ್ಯದಲ್ಲಿ ಬಿಜೆಪಿಗೆ ಬೇರು ಬಿಡಲು ಈದ್ಗಾ ಮೈದಾನ ಸಂಘರ್ಷ ನೆರವಾಯಿತು. ಈದ್ಗಾ ಮೈದಾನದ ಹೋರಾಟ ರಾಜ್ಯ ಮತ್ತು ರಾಷ್ಟ್ರ ರಾಜಕಾರಣಕ್ಕೆ ಮೂರು ಮುತ್ತುಗಳನ್ನು ನೀಡಿತು, ದಿವಂಗತ ಅನಂತಕುಮಾರ್, ಅನಂತಕುಮಾರ್ ಹೆಗಡೆ ಮತ್ತು ಪ್ರಹ್ಲಾದ ಜೋಷಿ. ಹೋರಾಟದಲ್ಲಿ ಆರು ಮಂದಿ ಪ್ರಾಣ ಕಳೆದುಕೊಂಡಿದ್ದರು. ಅವರ ಕುಟುಂಬ ಹೇಗಿದೆಯೋ ಗೊತ್ತಿಲ್ಲ.
ಮೊನ್ನೆ ಯಾರೋ ಹುಬ್ಬಳ್ಳಿಗೆ ಹೋಗಿ ಬಂದವರು ‘’ ಆ ಈದ್ಗಾ ಮೈದಾನ ಇದೆಯಲ್ಲಾ, ಅದು ಈಗ ಪಾರ್ಕಿಂಗ್ ಸ್ಪೇಸ್ ಆಗಿದೆ. ಒಂದು ಕಾಲದಲ್ಲಿ ಸುತ್ತುವರಿದಿದ್ದ ಪೊಲೀಸರು ಮತ್ತು ಅವರ ವ್ಯಾನ್ ಗಳೇ ಕಾಣುತ್ತಿಲ್ಲಾ’ ಎಂದರು. ಈಗ ಆ ಪೋಲಿಸರೆಲ್ಲ ಈದ್ಗಾ ಮೈದಾನದಿಂದ ವಿಧಾನಸಭೆ, ಲೋಕಸಭೆಗೆ ಹೋಗಿದ್ದಾರಲ್ಲಾ ಅವರನ್ನು ಕಾಯುತ್ತಿದ್ದಾರೆ’ ಎಂದೆ.
ಅವರಿಗೂ ಈಗ ಗೊತ್ತಾಗಿ ಹೋಗಿದೆ. ಸ್ಟ್ರಾಟಜಿ ಸ್ಪಷ್ಟ.
ಬೀದಿಯಲ್ಲಿ ಹೋಗುವ ಒಬ್ಬ ಮುಸ್ಲಿಮನ ಕುತ್ತಿಗೆಗೆ ಕತ್ತಿ ಇಟ್ಟು ‘ ಭಾರತ ಮಾತಾ ಕೀ ಜೈ ಹೇಳೋ’ ಎಂದು ಗದರಿಸುವುದು. ಅವನು ನಿರಾಕರಿಸಿದ ಕೂಡಲೇ ‘ ನೋಡ್ರಿ ಈ ಸಾಬಿ ಭಾರತ್ ಮಾತಾ ಕೀ ಜೈ ಹೇಳೊಲ್ಲ’ ಅಂತಾನೆ ಎಂದು ಬೊಬ್ಬೆ ಹಾಕುವುದು. ಜನ ಸೇರುತ್ತಾರೆ.
ಅವಮಾನಿತನಾದ ಆ ಮುಸ್ಲಿಮ್ ವ್ಯಕ್ತಿ ‘ ನೀವು ಹೀಗೆ ಬಲವಂತ ಮಾಡಿದರೆ ಪ್ರಾಣ ಹೋದರೂ ಭಾರತ ಮಾತಾ ಕೀ ಜೈ ಅನ್ನೊಲ್ಲ’’ ಅಂತಾನೆ. ಆಗ ಇನ್ನೂ ಜೋರು ಬೊಬ್ಬೆ ಹಾಕುವುದು. ಇನ್ನಷ್ಟು ಜನ ಸೇರುತ್ತಾರೆ.
ಅಷ್ಟರಲ್ಲಿ ವಾಟ್ಸಪ್ ಗ್ರೂಪ್ ಗಳಲ್ಲಿ ‘ದೇಶದ್ರೋಹಿ’ ವಿಡಿಯೋಗಳು ಚಕಚಕನೆ ಹರಿದಾಡತೊಡಗಿ,ದೇಶದ್ರೋಹಿಯ ವಿರುದ್ದ ಜನಾಂದೋಲನ ಶುರುವಾಗಿರುತ್ತದೆ. ಟಿವಿ ಚಾನೆಲ್ ಕ್ಯಾಮೆರಾಗಳು ಬಂದು ಮುತ್ತಿಕೊಳ್ಳುತ್ತಿವೆ. ಮುಂದೆ ದೇಶದ್ರೋಹ, ಪಾಕಿಸ್ತಾನ, ಬೆಂಕಿ,ಬಿರುಗಾಳಿ, ಕಾಡ್ಗಿಚ್ಚು ಎಲ್ಲವೂ ಟಿವಿ ಪರದೆ ಮೇಲೆ ರಾರಾಜಿಸತೊಡಗುತ್ತದೆ.
ನಿನ್ನೆ ರಾಷ್ಟ್ರಧ್ವಜ, ಇಂದು ಹಿಜಾಬ್, ನಾಳೆ ಇನ್ನೊಂದು…
ಯಾರು ಹೇಳಿದ್ದು ಚುನಾವಣೆಯ ಕಾಲದಲ್ಲಿ ಪ್ರಜೆಗಳು
ಪ್ರಜಾ ಪ್ರತಿನಿಧಿಗಳಲ್ಲಿ ಶಾಲೆ,ಆಸ್ಪತ್ರೆ, ರಸ್ತೆ, ನೀರು, ಉದ್ಯೋಗಗಳ ಲೆಕ್ಕ ಕೇಳುತ್ತಾರೆಂದು..?
‘ರಾಜ್ಯ ಸರ್ಕಾರವನ್ನು ವಜಾ ಮಾಡಿ ರಾಷ್ಟ್ರಪತಿ ಆಳ್ವಿಕೆ ಹೇರಿ’
ಕೆದಕಿದಷ್ಟು ಕೆರಳುತ್ತಿರುವ ಬುರ್ಖಾ-ಹಿಜಾಬ್ ವಿವಾದ, ಸಂಘ ಪರಿವಾರ ನಿರ್ದೇಶಿತ ಯೋಜನೆಯಂತೆಯೇ ನಡೆಯುತ್ತಿದೆ. ಆಗಲೇ ಟಿವಿ ಚಾನೆಲ್ ಗಳು ಬೆಂಕಿ,ಭುಗಿಲು, ಕಾಡ್ಗಿಚ್ಚು ಎಂದೆಲ್ಲ ಬೊಬ್ಬಿಡತೊಡಗಿವೆ. ಧರ್ಮದ ಅಫೀಮ್ ತಲೆಗೇರಿಸಿಕೊಂಡ ಒಂದಷ್ಟು ಕಿಡಿಗೇಡಿಗಳು ಹುಟ್ಟು ಹಾಕಿದ ವಿವಾದದ ಕಿಡಿಯನ್ನು ಬೆಂಕಿಯನ್ನಾಗಿಸಿ ರಾಜ್ಯದಾದ್ಯಂತ ಹರಡುವ ಪ್ರಯತ್ನ ವ್ಯವಸ್ಥಿತವಾಗಿ ನಡೆಯುತ್ತಿದೆ.
ನನ್ನ ಪ್ರಕಾರ ರಾಜ್ಯ ಸರ್ಕಾರವನ್ನು ವಜಾ ಮಾಡಿ ರಾಷ್ಟ್ರಪತಿ ಆಳ್ವಿಕೆ ಹೇರಲು ಇದೊಂದು ಫಿಟ್ ಕೇಸ್. ಯಾಕೆಂದರೆ ಈ ವಿವಾದ ಹುಟ್ಟಿಕೊಂಡದ್ದೇ, ಸಂವಿಧಾನದ ಉಲ್ಲಂಘನೆಯ ಮೂಲಕ. ಸಂವಿಧಾನದಡಿಯಲ್ಲಿ ಕಾರ್ಯನಿರ್ವಹಿಸುವುದು ಪ್ರತಿಯೊಂದು ಸರ್ಕಾರದ ಮೂಲಭೂತ ಕರ್ತವ್ಯ. ಅದರಲ್ಲಿ ವಿಫಲವಾದರೆ ಅದು ಸಂವಿಧಾನದ ಉಲ್ಲಂಘನೆಯಲ್ಲದೆ ಮತ್ತೇನು?
ಶಿಕ್ಷಣ ಸಚಿವರಾಗಿರುವ ಬಿಜೆಪಿ ‘ಇಮ್ಮಡಿ ಸಜ್ಜನ’ ಸಚಿವ ಬಿ.ಸಿ.ನಾಗೇಶ್ ಮತ್ತು ಗೃಹ ಸಚಿವ ಅರಗ ಜ್ಞಾನೇಂದ್ರ ಅವರೂ ತಮ್ಮ ಬೇಜವಾಬ್ದಾರಿ ಹೇಳಿಕೆಗಳ ಮೂಲಕ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಶುರುಮಾಡಿದ್ದಾರೆ. ಸಂವಿಧಾನವನ್ನು ಸಾಕ್ಷಿಯಾಗಿಟ್ಟುಕೊಂಡು ಪ್ರಮಾಣ ಮಾಡಿ ಸಚಿವರಾದ ಇವರ ನಡವಳಿಕೆ ಸಂವಿಧಾನದ ವಿರೋಧಿಯಲ್ಲವೇ?
ಸಂವಿಧಾನದ ಪರಿಚ್ಚೇದ 25ರ ಪ್ರಕಾರ ಈ ದೇಶದ ಪ್ರತಿಯೊಬ್ಬ ಪ್ರಜೆಗೂ ಯಾವುದೇ ಧರ್ಮವನ್ನು ಸ್ವೀಕರಿಸುವ, ಆಚರಿಸುವ ಮತ್ತು ಪ್ರಸಾರ ಮಾಡುವ ಹಕ್ಕು ಇದೆ. ಧರ್ಮದ ಆಚರಣೆ ಎಂದರೆ ದೇವರ ಪೂಜೆ,ಆರಾಧನೆ ಮಾತ್ರವಲ್ಲ ಧಾರ್ಮಿಕ ಚಿಹ್ನೆ-ಲಾಂಛನಗಳನ್ನು ಧರಿಸುವ ಹಕ್ಕು ಕೂಡಾ ಆಗಿದೆ
ಸಂವಿಧಾನದ ಒಪ್ಪಿಗೆಯ ಹಿನ್ನೆಲೆಯಲ್ಲಿ ನೋಡಿದರೆ ಹಿಜಾಬ್ ಧರಿಸಿ ಶಾಲೆ-ಕಾಲೇಜುಗಳಿಗೆ ಹೋಗುವುದು ಮುಸ್ಲಿಮ್ ವಿದ್ಯಾರ್ಥಿನಿಯರ ಮೂಲಭೂತ ಹಕ್ಕು. ಇದನ್ನೇ ನ್ಯಾಯಾಲಯಗಳು ಕೂಡಾ ಹೇಳಿವೆ. ಕೇರಳ ಹೈಕೋರ್ಟ್ 2015ರಲ್ಲಿಯೇ ಈ ಬಗ್ಗೆ ತೀರ್ಪು ನೀಡಿದೆ.
2015ರಲ್ಲಿ ಕೇರಳದಲ್ಲಿ ಹಿಜಾಬ್ ಧರಿಸಿದ್ದ ವಿದ್ಯಾರ್ಥಿನಿಗೆ ವೈದ್ಯಕೀಯ ಪ್ರವೇಶ ಪರೀಕ್ಷೆಗೆ ಕೂರಲು ಅವಕಾಶ ನಿರಾಕರಿಸಿದಾಗ ಆಕೆ ಹೈಕೋರ್ಟ್ ಮೆಟ್ಟಿಲು ಹತ್ತಿದ್ದರು. ಆಗ ಕೇರಳ ಹೈಕೋರ್ಟ್ “ ನಿರ್ದಿಷ್ಠವಾದ ವಸ್ತ್ರಸಂಹಿತೆ ಪಾಲಿಸಿದರೆ ಮಾತ್ರ ಪರೀಕ್ಷಾ ಕೊಠಡಿಗೆ ಪ್ರವೇಶಕ್ಕೆ ಅವಕಾಶ ನೀಡಲಾಗುವುದು ಎಂಬ ಶಿಕ್ಷಣ ಸಂಸ್ಥೆಯ ಷರತ್ತನ್ನು ಒಪ್ಪಲಾಗದು “ ಎಂದು ತನ್ನ ಆದೇಶದಲ್ಲಿ ಹೇಳಿತ್ತು.
ಮರು ವರ್ಷ ಇದೇ ಪ್ರಕರಣ ವಿಚಾರಣೆಗೆ ಬಂದಾಗ ಕೇರಳ ಹೈಕೋರ್ಟ್ “…ಕುರಾನ್ ಮತ್ತು ಹದೀಸ್ ಪ್ರಕಾರ ಹಿಜಾಬ್ ಮತ್ತು ತುಂಬುತೋಳಿನ ಉಡುಗೆಯನ್ನು ಮಹಿಳೆಯರು ಧರಿಸಬೇಕಾಗಿರುವುದು ಇಸ್ಲಾಂ ಧರ್ಮದ ಕರ್ತವ್ಯವಾಗಿದೆ. ಹಿಜಾಬ್ ಧರಿಸಿ ಪರೀಕ್ಷಾ ಕೊಠಡಿಗೆ ಪ್ರವೇಶ ಮಾಡಬಹುದಾದರೆ ಆ ವಿದ್ಯಾರ್ಥಿನಿ ಕಾಲೇಜಿನ ತರಗತಿಗಳಿಗೆ ಯಾಕೆ ಹೋಗಬಾರದು ಎಂದು ಕೇಳಿತ್ತು..
ಅದೇ ವರ್ಷ ಈ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಅರ್ಜಿದಾರರನ್ನು ‘ ಯಾಕೆ ವಿದ್ಯಾರ್ಥಿನಿಗಳು ಮೂರು ಗಂಟೆಗಳ ಕಾಲ (ಪರೀಕ್ಷಾ ಸಮಯ) ಹಿಜಾಬ್ ತೆಗೆಯಬಾರದು? ಎಂದು ಕೇಳಿ ಅರ್ಜಿಯನ್ನು ಹಿಂದಕ್ಕೆ ಪಡೆಯುವಂತೆ ಅರ್ಜಿದಾರರ ಮನವೊಲಿಸುವಲ್ಲಿ ಯಶಸ್ವಿಯಾಗಿತ್ತು.
ಸೇನೆಯಲ್ಲಿ ಸಿಖ್ ಗಳ ಟರ್ಬನ್ ಬಿಟ್ಟರೆ ಬೇರೆ ಯಾವುದೇ ಧರ್ಮಗಳ ಚಿಹ್ನೆ-ಲಾಂಛನಗಳನ್ನು ಧರಿಸುವಂತಿಲ್ಲ. ಇದಕ್ಕಾಗಿ ಸಂಸತ್ ಪ್ರತ್ಯೇಕ ಕಾನೂನನ್ನು ಅಂಗೀಕರಿಸಿದೆ. ಹಿಂದೂ ಧರ್ಮೀಯರು ಕುಂಕುಮ, ಶಿಲುಬೆ, ಬಳೆ, ಕಾಲುಂಗರ, ಮಂಗಳಸೂತ್ರವನ್ನು ಧರಿಸಲು ಇರುವ ಸ್ವಾತಂತ್ರ್ಯ ಮುಸ್ಲಿಮ್ ಮಹಿಳೆಗೆ ಹಿಜಾಬ್-ಬುರ್ಖಾ ಧರಿಸಲು ಇದೆ ಎನ್ನುವುದು ಈಗಿನ ನ್ಯಾಯಾಂಗದ ಅಭಿಪ್ರಾಯವಾಗಿದೆ. ಇದರ ಸರಿ-ತಪ್ಪುಗಳ ವಿಶ್ಲೇಷಣೆ ನಂತರದ್ದು.
ಈಗ ಉಳಿದಿರುವುದು ಒಂದೇ ದಾರಿ ಅದು ನ್ಯಾಯಾಲಯ. ಈ ದೇಶದಲ್ಲಿ ಮನಪರಿವರ್ತನೆಯ ಮೂಲಕ ಸಾಮಾಜಿಕ ಬದಲಾವಣೆ ಸಾಧ್ಯ ಎನ್ನುವುದು ಅರ್ಧ ಭ್ರಮೆ, ಅದು ಸಾಧ್ಯವಾಗುವುದು ಕಾನೂನಿನ ಮೂಲಕ ಎನ್ನುವುದು ಮತ್ತೆ ಮತ್ತೆ ಸಾಬೀತಾಗಿದೆ. ಸಮಾಜದಲ್ಲಿ ಅಸ್ಪೃಶ್ಯತೆ ಕಡಿಮೆಯಾಗಿದ್ದರೆ ಮುಖ್ಯ ಕಾರಣ ಅಸ್ಪೃಶ್ಯತಾ ವಿರೋಧಿ ಕಾಯಿದೆಯೇ ಹೊರತು ಜನರ ಮನಪರಿವರ್ತನೆ ಅಲ್ಲ ಎನ್ನುವುದು ಕೂಡಾ ಸತ್ಯ. ಬಚ್ಚಿಟ್ಟುಕೊಂಡದ್ದು ಆಗಾಗ ಹೊರಬರುವುದನ್ನು ನಾವು ನೋಡುತ್ತಲೇ ಇದ್ದೇವೆ.
ಈ ಹಿಜಾಬ್ ವಿವಾದಕ್ಕೆ ತೆರೆಎಳೆಯುವ ಶಕ್ತಿ ಮತ್ತು ಅವಕಾಶ ಇರುವುದು ಸಂವಿಧಾನಕ್ಕೆ ಮಾತ್ರ. ಅದು ನ್ಯಾಯಾಲಯದ ಮೂಲಕ ಆಗಬೇಕಾಗಿದೆ. ಈಗಾಗಲೇ ಒಬ್ಬಳು ವಿದ್ಯಾರ್ಥಿನಿ ಹೈಕೋರ್ಟ್ ಮೆಟ್ಟಿಲು ಹತ್ತಿದ್ದಾಳೆ. ಶೀಘ್ರವಾಗಿ ಆಕೆಯ ಮೂಲಕ ಹಿಜಾಬ್ ಧರಿಸಿದ ಹೆಣ್ಣುಮಕ್ಕಳಿಗೆಲ್ಲರಿಗೂ ನ್ಯಾಯ ಸಿಗಲಿ ಎಂದು ಹಾರೈಸುತ್ತೇನೆ. ಈ ಕಾನೂನಿನ ಹೋರಾಟಕ್ಕೆ ರಾಜ್ಯದ ಹಿರಿಯ ವಕೀಲರು ಸಹಕಾರ ನೀಡಬೇಕು.
[ ದಿನೇಶ್ ಅಮೀನ್ ಮಟ್ಟು ಅವರ ಫೇಸ್ ಬುಕ್ ಗೋಡೆಯಿಂದ ]