ಕತಾರ್: ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಸೋಮವಾರ ತಡರಾತ್ರಿ ನಡೆದ ಪಂದ್ಯದಲ್ಲಿ ಪೋರ್ಚುಗಲ್ ತಂಡ 2-0 ಅಂತರದಲ್ಲಿ ಉರುಗ್ವೆ ತಂಡವನ್ನು ಮಣಿಸಿತ್ತು. ಆ ಮೂಲಕ ಫ್ರಾನ್, ಬ್ರೆಜಿಲ್ ಬಳಿಕ ಟೂರ್ನಿಯಲ್ಲಿ ಮೂರನೇ ತಂಡವಾಗಿ ಅಂತಿಮ 16ಘಟ್ಟ ಪ್ರವೇಶಿಸಿದೆ.
ಲುಸೈಲ್ ಸ್ಟೇಡಿಯಂನಲ್ಲಿ ನಡೆದ ಗ್ರೂಪ್ ಎಚ್ನ ನಿರ್ಣಾಯಕ ಪಂದ್ಯದಲ್ಲಿ ಪೋರ್ಚುಗಲ್ ಪರ ಬ್ರೂನೋ ಫೆರ್ನಾಂಡಿಸ್, 54 ಮತ್ತು ಹೆಚ್ಚುವರಿ ಸಮಯದಲ್ಲಿ (90+3) ದೊರೆತ ಪೆನಾಲ್ಟಿ ಅವಕಾಶವನ್ನು ಗೋಲಾಗಿ ಪರಿವರ್ತಿಸಿದ್ದರು.
ಪಂದ್ಯದ ದ್ವಿತಿಯಾರ್ಧದ 54ನೇ ನಿಮಿಷದಲ್ಲಿ ಫೆರ್ನಾಂಡಿಸ್ ಕಾಲಿನಿಂದ ಒದ್ದ ಚೆಂಡನ್ನು ರೊನಾಲ್ಡೊ ಹೆಡ್ಡರ್ ಮೂಲಕ ಗೋಲಾಗಿ ಪರಿವರ್ತಿಸಲು ಪ್ರಯತ್ನಿಸಿದ್ದರು. ಚೆಂಡು ಗೋಲ್ ಕೀಪರ್ ಕೈಗೆ ಸಿಗದೆ ನೇರವಾಗಿ ಗೋಲು ಬಲೆಯೊಳಗೆ ಸೇರಿತ್ತು. ಈ ವೇಳೆ ಕ್ರಿಸ್ಟಿಯಾನೋ ರೊನಾಲ್ಡೊ, ತಾವೇ ಗೋಲು ಬಾರಿಸಿದ ರೀತಿಯಲ್ಲಿ ಸಂಭ್ರಮಾಚರಣೆ ನಡೆಸಿದ್ದರು. ಸಹ ಆಟಗಾರರು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ರೊನಾಲ್ಡೊಗೆ ತಕ್ಷಣವೇ ಅಭಿನಂದನೆಗಳ ಸುರಿಮಳೆಯಾಗಿತ್ತು.
ಆದರೆ ಈ ಸಂಭ್ರಮ ಕೆಲ ಸೆಕೆಂಡ್ಗಳ ಅಂತರದಲ್ಲೇ ಮಾಯವಾಯಿತು. ಇದಕ್ಕೆ ಕಾರಣವಾಗಿದ್ದು ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಇದೇ ಮೊದಲ ಬಾರಿ ಬಳಸಲಾಗುತ್ತಿರುವ ವಿಶೇಷ ತಂತ್ರಜ್ಞಾನಗಳನ್ನು ಒಳಗೊಂಡ ʻಅಲ್ ರಿಹ್ಲಾʼ ಚೆಂಡು. ಅಡಿಡಾಸ್ ಕಂಪನಿ ತಯಾರಿಸಿದ ಇ ವಿಶೇಷ ಚೆಂಡಿನಲ್ಲಿ ಬಳಸಲಾಗಿರುವ 500ಎಚ್ಝಡ್ ಸೆನ್ಸಾರ್ ತಂತ್ರಜ್ಞಾನದಿಂದಾಗಿ, ಫೆರ್ನಾಂಡಿಸ್ ಕಾಲಿನಿಂದ ಒದ್ದ ಚೆಂಡು ಗೋಲು ಬಲೆ ಸೇರುವ ಮುನ್ನ, ರೊನಾಲ್ಡೊ ತಲೆಗೆ ಸವರಿಲ್ಲ ಎಂಬುದನ್ನು ಸ್ಪಷ್ಟವಾಗಿ ತೋರಿಸಿದೆ.
ಮೈದಾನದಲ್ಲಿ ಅಳವಡಿಸಲಾಗಿದ್ದ ದೊಡ್ಡ ಪರದೆಯಲ್ಲಿ ಗೋಲು ಬಾರಿಸಿದ್ದು ಫೆರ್ನಾಂಡಿಸ್ ಎಂದು ತೋರಿಸಿತ್ತು. ಇದನ್ನು ನೋಡಿದ ರೊನಾಲ್ಡೊ ನಿರಾಸೆಯ ಪ್ರತಿಕ್ರಿಯೆ ತೋರಿದ್ದರು. ಪಂದ್ಯ ಮುಗಿದ ಬಳಿಕವೂ ಈ ಕುರಿತು ಮ್ಯಾಚ್ ರೆಫರಿ ಜೊತೆ ರೊನಾಲ್ಡೊ ಚರ್ಚಿಸುತ್ತಿರುವುದರ ಚಿತ್ರಗಳು ವೈರಲ್ ಆಗಿದೆ.
ಕ್ರಿಕೆಟ್ನಲ್ಲಿ ಬಳಸಲಾಗುವ ಅಲ್ಟ್ರಾ ಎಡ್ಜ್ ತಂತ್ರಜ್ಞಾನವನ್ನೇ ಹೋಲುವ ಸೆನ್ಸಾರ್ ಗೆರೆಗಳ ಫೋಟೋಗಳನ್ನು ಅಡಿಡಾಸ್ ಬಿಡುಗಡೆ ಮಾಡಿದ್ದು, ಇದರಲ್ಲಿ ಚೆಂಡಿಗೂ-ರೊನಾಲ್ಡೊ ನಡುವೆ ಯಾವುದೇ ಸಂಪರ್ಕ ಕಂಡುಬಂದಿಲ್ಲ