ಫಿಫಾ ವಿಶ್ವಕಪ್‌ | ಗೆಲುವಿನ ಖಾತೆ ತೆರೆಯದೆ ಅಭಿಯಾನ ಮುಗಿಸಿದ ಆತಿಥೇಯ ಕತಾರ್ !

Prasthutha|

ಆತಿಥೇಯ ರಾಷ್ಟ್ರವೆಂಬ ಕಾರಣಕ್ಕೆ ಫಿಫಾ ವಿಶ್ವಕಪ್‌ ಟೂರ್ನಿಯಲ್ಲಿ ಆಡುವ ಅವಕಾಶ ಪಡೆದಿದ್ದ ಕತಾರ್‌, ಗ್ರೂಪ್‌ ಹಂತದ ಮೂರನೇ ಪಂದ್ಯದಲ್ಲೂ ಸೋಲಿಗೆ ಶರಣಾಗುವ ಮೂಲಕ ನಿರಾಸೆ ಅನುಭವಿಸಿದೆ. ಅಲ್‌ ಬೈತ್‌ ಸ್ಟೇಡಿಯಂನಲ್ಲಿ ಮಂಗಳವಾರ ರಾತ್ರಿ ನಡೆದ ಎ ಗುಂಪಿನ ಪಂದ್ಯದಲ್ಲಿ ನೆದರ್‌ಲ್ಯಾಂಡ್ಸ್‌ ತಂಡ 2-0 ಗೋಲುಗಳ ಅಂತರದಲ್ಲಿ ಕತಾರ್‌ ತಂಡವನ್ನು ಮಣಿಸಿತು.

- Advertisement -

ಗುಂಪು ಹಂತದಲ್ಲಿ ಆಡಿದ 3 ಪಂದ್ಯಗಳಲ್ಲಿ 2 ಜಯ ಮತ್ತು 1 ಪಂದ್ಯಗಳಲ್ಲಿ ಡ್ರಾ ಸಾಧಿಸಿದ ನೆದರ್‌ಲ್ಯಾಂಡ್ಸ್‌, 7 ಅಂಕಗಳೊಂದಿಗೆ ಮೊದಲ ಸ್ಥಾನಿಯಾಗಿ  ಅಂತಿಮ 16ರ ಘಟ್ಟ ಪ್ರವೇಶಿಸಿದೆ. ಮಂಗಳವಾರ ಏಕಕಾಲದಲ್ಲಿ ನಡೆದ ಮತ್ತೊಂದು ಪಂದ್ಯದಲ್ಲಿ  ಸೆನೆಗಲ್‌, ಇಕ್ವೆಡಾರ್‌ ತಂಡವನ್ನು 2-1 ಅಂತರದಲ್ಲಿ ಮಣಿಸಿದೆ. ಖಲೀಫಾ ಇಂಟರ್‌ನ್ಯಾಷನಲ್‌ ಸ್ಟೇಡಿಯಂನಲ್ಲಿ ನಡೆದ ಆಫ್ರಿಕನ್‌ ಶಕ್ತಿಗಳ ನಡುವಿನ ಸೆಣಸಾಟವು ಅಭಿಮಾನಿಗಳಿಗೆ ರೋಚಕ ಅನುಭವ ನೀಡಿತ್ತು.

ಮೊದಲಾರ್ಧದ ಅಂತಿಮ ನಿಮಿಷದಲ್ಲಿ (44ನೇ ನಿಮಿಷ) ದೊರೆತ ಪೆನಾಲ್ಟಿಯನ್ನು ಗೋಲಾಗಿ ಪರಿವರ್ತಿಸಿದ ಇಸ್ಮಾಯ್ಲಾ ಸರ್ರ್‌,  ಸೆನೆಗಲ್‌ಗೆ ಮುನ್ನಡೆ ತಂದುಕೊಟ್ಟಿದ್ದರು. 67ನೇ ನಿಮಿಷದಲ್ಲಿ ಮೊಯಿಸೆಸ್ ಕೈಸೆಡೊ ಗೋಲಿನ ಮೂಲಕ ಇಕ್ವೆಡಾರ್‌ ಸಮಬಲ ಸಾಧಿಸಿತ್ತು. ಆದರೆ ಇದಾದ ಮೂರೇ ನಿಮಿಷದಲ್ಲಿ ಆಕರ್ಷಕ ಗೋಲು ಬಾರಿಸಿದ ಕಾಲಿದೌ ಕೌಲಿಬಾಲಿ, ಸೆನೆಗಲ್‌ ತಂಡವನ್ನು  ಅಂತಿಮ 16ರ ಘಟ್ಟಕ್ಕೆ ಕೊಂಡೊಯ್ದರು.

- Advertisement -

3 ಪಂದ್ಯಗಳಿಂದ ಸೆನೆಗಲ್‌  6 ಅಂಕಗಳಿಸಿದರೆ, ಇಕ್ವೆಡಾರ್‌ 4 ಅಂಕಗಳಿಸಿದೆ. ಕತಾರ್‌ ಖಾತೆ ತೆರೆಯುವಲ್ಲಿ ವಿಫಲವಾಯಿತು.

Join Whatsapp