ಕಾಂಗ್ರೆಸ್ ಬಾಗಿಲು ತಟ್ಟಿದ ಬಿಜೆಪಿ ಹಾಲಿ MLC ಪುಟ್ಟಣ್ಣ

Prasthutha|

ಬೆಂಗಳೂರು: ಜೆಡಿಎಸ್​ನಿಂದ ಅಮಾನತುಗೊಂಡು ಬಿಜೆಪಿ ಸೇರ್ಪಡೆಯಾಗಿರುವ ವಿಧಾನಪರಿಷತ್​ ಸದಸ್ಯ ಪುಟ್ಟಣ್ಣ ಕಾಂಗ್ರೆಸ್​ ಬಾಗಿಲು ತಟ್ಟಿದ್ದಾರೆ.

- Advertisement -

ಇತ್ತೀಚೆಗೆ ಅಷ್ಟೇ ಬಿಜೆಪಿ ಸೇರ್ಪಡೆಯಾಗಿ ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಗೆಲುವು ಸಾಧಿಸಿರುವ ಪುಟ್ಟಣ್ಣ  ಎರಡೇ ವರ್ಷಕ್ಕೆ ಬಿಜೆಪಿ ತೊರೆಯಲು ಮುಂದಾಗಿದ್ದಾರೆ.

ಜೆಡಿಎಸ್​ ತೊರೆದು ಬಿಜೆಪಿ ಸೇರ್ಪಡೆಯಾಗಿ ವಿಧಾನಪರಿಷ್ ಸದಸ್ಯರಾಗಿಯೂ ಆಯ್ಕೆಯಾಗಿರುವ ಪುಟ್ಟಣ್ಣ ಅವರು ಕಾಂಗ್ರೆಸ್ ಸೇರ್ಪಡೆಗೆ ಮುಂದಾಗಿದ್ದಾರೆ. ಈಗಾಗಲೇ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರನ್ನು ಭೇಟಿ ಮಾಡಿದ್ದು, ಕಾಂಗ್ರೆಸ್ ಸೇರ್ಪಡೆ ಬಗ್ಗೆ ಒಂದು ಸುತ್ತಿನ ಮಾತುಕತೆ ಮಾಡಿದ್ದಾರೆ ಎಂದು ವರದಿಯಾಗಿದೆ.

- Advertisement -

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಚರ್ಚಿಸಿದ್ದು, ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಟಿಕೆಟ್ ಗೆ ಬೇಡಿಕೆ ಇಟ್ಟಿದ್ದಾರೆ. ಒಂದು ವೇಳೆ ಟಿಕೆಟ್​​ ಕೊಟ್ಟರೆ MLC ಸ್ಥಾನಕ್ಕೆ ರಾಜೀನಾಮೆ ಕೊಡುವುದಾಗಿಯೂ ಸಿದ್ದರಾಮಯ್ಯನವರ ಮುಂದೆ ಹೇಳಿದ್ದಾರೆ. ಅಲ್ಲದೇ ಖುದ್ದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರನ್ನು ಸಹ ಭೇಟಿ ಮಾಡಿದ್ದು, ರಾಜಾಜಿನಗರದ ಟಿಕೆಟ್ ನೀಡುವಂತೆ ಮನವಿ ಮಾಡಿದ್ದಾರೆ. ಆದ್ರೆ, ಇದಕ್ಕೆ ಡಿ.ಕೆ ಶಿವಕುಮಾರ್ ಯಶವಂತಪುರ ಕ್ಷೇತ್ರದಿಂದ ಸ್ಪರ್ಧಿಸುವಂತೆ ಪುಟ್ಟಣ್ಣ ಅವರಿಗೆ ಹೇಳಿದ್ದಾರೆ ಎನ್ನಲಾಗಿದೆ.

ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದಾರೆ ಎಂಬ ಆರೋಪದಲ್ಲಿ ಜೆಡಿಎಸ್, ಪುಟ್ಟಣ್ಣ ಅವರನ್ನು ಪಕ್ಷದಿಂದ ಉಚ್ಛಾಟನೆಗೊಳಿಸಿತ್ತು. ಬಳಿಕ ಪುಟ್ಟಣ್ಣ ಅವರು ಅಂದು ಮುಖ್ಯಮಂತ್ರಿಯಾಗಿದ್ದ ಬಿಎಸ್ ಯಡಿಯೂರಪ್ಪ ಅವರ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದರು. ಅಲ್ಲದೇ ಬಿಎಸ್ ಯಡಿಯೂರಪ್ಪ ಅವರು ಪುಟ್ಟಣ್ಣಗೆ ಬೆಂಗಳೂರು ಶಿಕ್ಷಕರ ಕ್ಷೇತ್ರದ ಟಿಕೆಟ್ ಸಹ ಕೊಡಿಸುವಲ್ಲಿ ಯಶಸ್ವಿಯಾಗಿದ್ದರು. ಬಳಿಕ ನಡೆದ ಚುನಾವಣೆಯಲ್ಲಿ ಪುಟ್ಟಣ್ಣ ಗೆಲುವು ಸಾಧಿಸಿ ಪರಿಷತ್​ಗೆ ಆಯ್ಕೆಯಾದ್ದರು. ಆದ್ರೆ, ಇದೀಗ ಪುಟ್ಟಣ ಎರಡೇ ವರ್ಷಕ್ಕೆ ಬಿಜೆಪಿ ತೊರೆಯಲು ಮುಂದಾಗಿದ್ದಾರೆ.

ಕಳೆದ ಬಾರಿ ಸ್ಪರ್ಧಿಸಿ ಸೋಲುಕಂಡಿದ್ದ ಮಾಜಿ ಮೇಯರ್ ಪದ್ಮಾವತಿ ಅವರು ಈ ಬಾರಿಯೂ ರಾಜಾಜಿನಗರ ಟಿಕೆಟ್​ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಇನ್ನು ಇತ್ತೀಚೆಗೆ ಕಾಂಗ್ರೆಸ್ ಸೇರಿರುವ ಸಿನಿಮಾ ನಿರ್ದೇಶಕ ಎಸ್ ನಾರಾಯಣ್, ಮಾಜಿ ಉಪಮೇಯರ್ ಪುಟ್ಟರಾಜು, ಕಾಂಗ್ರೆಸ್ ಯುವ ನಾಯಕಿ ಭವ್ಯ ನರಸಿಂಹಮೂರ್ತಿ, ಮಹಿಳಾ ಕಾಂಗ್ರೆಸ್​ ಅಧ್ಯಕ್ಷೆಯಾಗಿದ್ದ ಮಂಜುಳಾ ನಾಯ್ಡು ಸೇರಿದಂತೆ ಒಟ್ಟು 9 ಜನರು ಅರ್ಜಿ ಅಲ್ಲಿಸಿದ್ದಾರೆ. ಇದರ ಮಧ್ಯೆ ಇದೀಗ ಬಿಜೆಪಿಯ ಪುಟ್ಟಣ್ಣ ಸಹ ರಾಜಾಜಿನಗರ ಟಿಕೆಟ್​ಗೆ ಬೇಡಿಕೆ ಇಟ್ಟಿದ್ದಾರೆ.

Join Whatsapp