ನೋಟು ರದ್ದತಿ ಭಿನ್ನ ತೀರ್ಪು: ಮೋದಿ ಸರಕಾರಕ್ಕೆ ತಪರಾಕಿ ಎಂದ ಕಾಂಗ್ರೆಸ್

Prasthutha|

ನವದೆಹಲಿ: ನೋಟು ರದ್ದು ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ ಒಮ್ಮತದ ತೀರ್ಮಾನ ನೀಡಿಲ್ಲವಾದ್ದರಿಂದ ಇದು ಮೋದಿ ಸರಕಾರಕ್ಕೆ ಬಿದ್ದ ತಪರಾಕಿ ಎಂದು ಕಾಂಗ್ರೆಸ್ ಕುಟುಕಿದೆ.

- Advertisement -


ಅಲ್ಲದೆ ನೋಟು ರದ್ದು ವಿಷಯದಲ್ಲಿ ಸುಪ್ರೀಂ ಕೋರ್ಟ್ ಮೋದಿಯವರ ಸರಕಾರವನ್ನು ತೀರಾ ಸಮರ್ಥಿಸಿದೆ ಎಂದು ಹೇಳುವಂತೆಯೂ ಇಲ್ಲ ಎಂದು ಸಹ ಕಾಂಗ್ರೆಸ್ ಹೇಳಿದೆ.
“ಸುಪ್ರೀಂ ಕೋರ್ಟ್ ತೀರ್ಪು ಕೊಟ್ಟಿದೆ ಎಂದ ಮೇಲೆ ನಾವು ಅದನ್ನು ಒಪ್ಪಿಕೊಳ್ಳುತ್ತೇವೆ. ಆದರೆ ಯಾವ ನ್ಯಾಯಾಧೀಶರು ಕೂಡ ನೋಟು ರದ್ದಿನಿಂದ ಸಮಸ್ಯೆ ಪರಿಹಾರವಾಗಿದೆ, ಸರಕಾರದ ಉದ್ದೇಶ ನೆರವೇರಿದೆ ಎಂದು ಹೇಳಿಲ್ಲ. ನ್ಯಾಯಾಧೀಶರು ತಪ್ಪೆಂದು ಹೇಳಲಾಗದು ಎಂದು ಹೇಳಿದ್ದಾರೆಯೇ ಹೊರತು, ಸರಕಾರವು ಸಾಧನೆ ಮಾಡಿದೆ ಎಂದು ಹೇಳಿಲ್ಲ” ಎಂದು ರಾಜ್ಯ ಸಭಾ ಸದಸ್ಯ ಪಿ. ಚಿದಂಬರಂ ತೀರ್ಪನ್ನು ವಿಶ್ಲೇಷಿಸಿ ಹೇಳಿಕೆ ನೀಡಿದ್ದಾರೆ.


“ಒಬ್ಬರು ನೀಡಿದ ತೀರ್ಪು ಸ್ಪಷ್ಟವಾಗಿ ನೋಟು ರದ್ದತಿ ಕಾನೂನು ಬಾಹಿರ ಎಂದು ಹೇಳಿದ್ದಾರೆ, ಇದರಿಂದಾದ ಅವ್ಯವಸ್ಥೆಯತ್ತ ಬೊಟ್ಟು ಮಾಡಿದೆ, ಅದನ್ನು ನಾವು ಸ್ವಾಗತಿಸುತ್ತೇವೆ. ಇದು ಸರಕಾರಕ್ಕೆ ತಪರಾಕಿಯಾಗಿದೆ ಹಾಗೂ ಸ್ವಾಗತಾರ್ಹ ಪೆಟ್ಟು. ಸುಪ್ರೀಂ ಕೋರ್ಟಿನ ಇತಿಹಾಸದಲ್ಲಿ ಹಲವು ಚಾರಿತ್ರಿಕ ಭಿನ್ನ ತೀರ್ಪುಗಳು ಬಂದಿದ್ದು, ಅದರಲ್ಲಿ ಇದು ಒಂದು. ಮುಖ್ಯವಾಗಿ ಇಲ್ಲಿ ಭಿನ್ನ ತೀರ್ಪು ಸಂಸತ್ತಿನ ಪರಮಾಧಿಕಾರ ಮತ್ತು ಆಡಳಿತದ ಮಿತಿಯಾಧಿಕಾರದ ಬಗ್ಗೆ ಸ್ಪಷ್ಟಪಡಿಸಿದೆ” ಎಂದು ಮಾಜಿ ಹಣಕಾಸು ಮಂತ್ರಿಗಳೂ ಆದ ಚಿದಂಬರಂ ತಿಳಿಸಿದರು.

- Advertisement -


ಈ ಕಾರಣಕ್ಕೆ ಮುಂದೆ ಸಂಸತ್ತಿನ ಪರಮಾಧಿಕಾರವನ್ನು ಮೀರಿ ಆಳುವವರು ತಮ್ಮದೇ ತೀರ್ಮಾನ ತೆಗೆದುಕೊಳ್ಳುವ ಕೆಟ್ಟ ಸಾಹಸ ಮಾಡಲಾರರು ಎಂದೂ ಚಿದಂಬರಂ ಹೇಳಿದರು.
ಜಸ್ಟಿಸ್ ನಾಗರತ್ನ ಅವರು ಆರ್’ಬಿಐ ಕಾಯ್ದೆಯ 26(ಎ) ಸೆಕ್ಷನ್ ಪ್ರಕಾರ ಸಂಸತ್ತಿನ ಕಾಯ್ದೆಯ ಮೂಲಕ ನೋಟು ರದ್ದು ಆಗಬೇಕೇ ಹೊರತು ಆಳುವ ಕೆಲವರ ತೀರ್ಮಾನದಿಂದ ಅಲ್ಲ ಎಂದು ಸ್ಪಷ್ಟ ಪಡಿಸಿರುವುದನ್ನು ಚಿದಂಬರಂ ಒತ್ತಿ ಹೇಳಿದರು.
“ನೋಟು ರದ್ದು ಎತ್ತಿ ಹಿಡಿದ ಸರ್ವೋಚ್ಚ ನ್ಯಾಯಾಲಯ ಎಂಬ ವಿವರಣೆ ಸಂಪೂರ್ಣವಾಗಿ ತಪ್ಪು. ಸರಕಾರದ ನಿರ್ಣಯ ತಪ್ಪು ಎನ್ನಲಾಗದು ಎಂದಷ್ಟೆ ಸುಪ್ರೀಂ ಕೋರ್ಟು ಬಹುಮತದಿಂದ ತೀರ್ಪು ನೀಡಿದೆ” ಎಂದು ಕಾಂಗ್ರೆಸ್ ನಾಯಕ ಜೈರಾಂ ರಮೇಶ್ ಹೇಳಿದರು.



Join Whatsapp