ಮಹಿಳೆಯನ್ನು ನಾಲ್ಕು ಕಿ.ಮೀ. ಎಳೆದೊಯ್ದ ದಿಲ್ಲಿ ಸುಲ್ತಾನ್ ಪುರಿ ಅಪಘಾತ, ಭಾರೀ ಪ್ರತಿಭಟನೆ

Prasthutha|

ನವದೆಹಲಿ: ನವದೆಹಲಿ ಸುಲ್ತಾನ್’ಪುರಿ ಕಂಜಾವಾಲದಲ್ಲಿ ಅಪಘಾತವೆಸಗಿ, ಮಹಿಳೆಯ ಸಾವಿಗೆ ಕಾರಣವಾದುದಲ್ಲದೆ, 4 ಕಿಮೀ ದೂರ ಶವವನ್ನು ಕಾರಿನಡಿ ಎಳೆದೊಯ್ದ ಪಾಪಿಗಳಿಗೆ ಕಠಿಣ ಶಿಕ್ಷೆ ಕೊಡಿಸುವುದಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಟ್ವೀಟ್’ನಲ್ಲಿ ಹೇಳಿದ್ದಾರೆ. ಸಾರ್ವಜನಿಕರು ಇಂದು ಬೀದಿಗಿಳಿದು ಪ್ರತಿಭಟನೆ ಮಾಡಿದರು.

- Advertisement -


20ರ ಹರೆಯದ ಮಹಿಳೆಯ ಸ್ಕೂಟಿಗೆ ಡಿಕ್ಕಿ ಹೊಡೆದ ಕಾರು ಆಕೆಯನ್ನು ಸುಲ್ತಾನ್ ಪುರಿಯಿಂದ ಕಂಜಾವಾಲದವರೆಗೆ ನಾಲ್ಕು ಕಿಲೋಮೀಟರ್ ಎಳೆದೊಯ್ದಿರುವುದು ತೀರಾ ಖಂಡನೀಯ ಎಂದು ಅವರು ಹೇಳಿದರು.


ಇದು ಅಪರಾಧಿಗಳ ಒಂದು ನಾಚಿಕೆಗೇಡಿನ ಕೃತ್ಯವಾಗಿದ್ದು, ಅವರಿಗೆ ಕಠಿಣ ಶಿಕ್ಷೆ ಕೊಡಿಸಲು ನಾವೆಲ್ಲ ಒಂದಾಗಬೇಕಾಗಿದೆ ಎಂದೂ ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.
“ನಮ್ಮ ಸಹೋದರಿಗೆ ಕಂಜಾವಾಲದಲ್ಲಿ ಏನು ಆಯಿತು. ಅದು ನಾವೆಲ್ಲರೂ ನಾಚಿಕೆ ಪಡಬೇಕಾದ ಸಂಗತಿಯಾಗಿದೆ. ಕಾನೂನು ಅಪರಾಧಿಗಳಿಗೆ ಅತಿ ಕಠಿಣ ಶಿಕ್ಷೆ ನೀಡುವಲ್ಲಿ ಸಫಲವಾಗುತ್ತದೆ ಎಂಬುದು ನನ್ನ ಗ್ರಹಿಕೆ” ಎಂದು ಕೇಜ್ರಿವಾಲ್ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

- Advertisement -


ಈ ಸಂಬಂಧ ಕಾರಿನಲ್ಲಿದ್ದ ಐದು ಮಂದಿಯನ್ನು ಬಂಧಿಸಲಾಗಿದೆ. ಸಾವಿಗೀಡಾದ ಮಹಿಳೆಯ ಬಟ್ಟೆಯಿಲ್ಲದ, ಕಾಲುಗಳಿಲ್ಲದ ಶವವು ಸಾಮಾಜಿಕ ಜಾಲತಾಣದಲ್ಲಿ ಎಲ್ಲ ನಾಗರಿಕರನ್ನು ಅಣಕಿಸುತ್ತಿದೆ. ಜಾಲತಾಣಗಳಲ್ಲಿ ಕೆಲವರು ಇದನ್ನು ಅತ್ಯಾಚಾರ ಮಾಡಿ ಕೊಲೆ ಎಂದು ಬರೆದಿದ್ದಾರೆ. ಆದರೆ ಇದು ಅಪಘಾತ ಎಂದು ಪೋಲೀಸರು ಹೇಳಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಡಿಸಿಡಬ್ಲ್ಯು- ದಿಲ್ಲಿ ಮಹಿಳಾ ಆಯೋಗವು ದಿಲ್ಲಿ ಪೊಲೀಸ್ ಕಮಿಷನರ್’ರಿಗೆ ನೋಟಿಸ್ ನೀಡಿದೆ.


ಪೊಲೀಸರು ತೀರಾ ನಜ್ಜುಗುಜ್ಜಾದ ದೇಹವನ್ನು ಶವ ಪರೀಕ್ಷೆಗೆ ಸಂಜಯ್ ಗಾಂಧಿ ಮೆಮೋರಿಯಲ್ ಆಸ್ಪತ್ರೆಗೆ ಕಳುಹಿಸಿದ್ದಾರೆ. ಮಹಿಳೆಯ ಒಂದು ಕಾಲು ಸ್ಕೂಟಿಯ ಚಕ್ರದೊಳಕ್ಕೆ ಸಿಕ್ಕಿಕೊಂಡಿದ್ದು, ಹಾಗೆಯೇ ಅಪಘಾತ ಮಾಡಿದ ಕಾರು ಆಕೆಯನ್ನು ನಾಲ್ಕು ಕಿಲೋಮೀಟರ್ ಎಳೆದುಕೊಂಡು ಹೋಗಿದೆ ಎಂದು ವೈದ್ಯರು ತಿಳಿಸಿದ್ದಾರೆ.