ದೆಹಲಿ ಗಲಭೆಯಲ್ಲಿ ಪೊಲೀಸರ ತಾರತಮ್ಯ ತನಿಖಾ ನೀತಿಯನ್ನು ಪ್ರಶ್ನಿಸಿದ್ದ ನ್ಯಾಯಾಧೀಶರ ವರ್ಗಾವಣೆ !

Prasthutha|

►ದೆಹಲಿ ಗಲಭೆ, CAA ಪ್ರತಿಭಟನಾ ಸಮಯದಲ್ಲಿ ಪೂರ್ವಾಗ್ರಹಪೀಡಿತರಾಗಿದ್ದ ದೆಹಲಿ ಪೊಲೀಸ್ !
►ಈಗ ದೆಹಲಿ ಪೊಲೀಸರನ್ನು ತೀಕ್ಷ್ಣವಾಗಿ ಟೀಕಿಸಿದ್ದ ನ್ಯಾಯಾಧೀಶರೇ ಎತ್ತಂಗಡಿ !

- Advertisement -

ನವದೆಹಲಿ: 2020ರ ದೆಹಲಿ ಗಲಭೆ ಪ್ರಕರಣಗಳಲ್ಲಿ ಕೆಲವೊಂದು ಘಟನೆಗಳಲ್ಲಿ ದೆಹಲಿ ಪೊಲೀಸರ “ನಿರ್ದಯ ಮತ್ತು ವಿಡಂಬನಾತ್ಮಕ” ತನಿಖೆಯನ್ನು ಟೀಕಿಸಿದ್ದ ಮತ್ತು ಸರಿಯಾದ ತನಿಖೆ ನಡೆಸಲು ವಿಫಲವಾದರೆ “ಪ್ರಜಾಪ್ರಭುತ್ವದ ಸೆಂಟಿನೆಲ್”ಗಳನ್ನು ಹಿಂಸಿಸಿದಂತೆ ಎಂದು ಒಮ್ಮೆ ಅಭಿಪ್ರಾಯಪಟ್ಟಿದ್ದ ವಿಚಾರಣಾ ನ್ಯಾಯಾಧೀಶ ವಿನೋದ್ ಯಾದವ್ ರನ್ನು ಬುಧವಾರ ರಾಷ್ಟ್ರ ರಾಜಧಾನಿಯ ಮತ್ತೊಂದು ನ್ಯಾಯಾಲಯಕ್ಕೆ ವರ್ಗಾಯಿಸಲಾಗಿದೆ.

ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ವಿನೋದ್ ಯಾದವ್ ಅವರು ಕರ್ಕರ್ದೂಮಾ ಜಿಲ್ಲಾ ನ್ಯಾಯಾಲಯಗಳಲ್ಲಿ ದೆಹಲಿ ಗಲಭೆಯ ಹಲವಾರು ಪ್ರಕರಣಗಳ ವಿಚಾರಣೆ ನಡೆಸುತ್ತಿದ್ದು, ಅವರನ್ನು ವಿಶೇಷ ನ್ಯಾಯಾಧೀಶರಾಗಿ (ಪಿಸಿ ಕಾಯ್ದೆ) (ಸಿಬಿಐ) ನವದೆಹಲಿ ಜಿಲ್ಲೆಯ ರೂಸ್ ಅವೆನ್ಯೂ ನ್ಯಾಯಾಲಯಕ್ಕೆ ವರ್ಗಾಯಿಸಲಾಗಿದೆ. ಅವರ ಸ್ಥಾನಕ್ಕೆ ನ್ಯಾಯಾಧೀಶ ವಿರೇಂದ್ರ ಭಟ್ ಅವರನ್ನು ಕರ್ಕರ್ದೂಮಾ ನ್ಯಾಯಾಲಯಕ್ಕೆ ನೇಮಿಸಲಾಗಿದೆ.

- Advertisement -

ಎಎಸ್ ಜೆ ಯಾದವ್ ಅವರು ತಮ್ಮ ವರ್ಗಾವಣೆಗೆ ಒಂದು ದಿನ ಮೊದಲಷ್ಟೇ ದೆಹಲಿ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದ್ದರು. “ಪೊಲೀಸ್ ಸಾಕ್ಷಿಗಳು ತಮ್ಮ ಪ್ರಮಾಣವಚನಕ್ಕೆ ವಿರುದ್ಧವಾಗಿ  ಸುಳ್ಳು ಹೇಳುತ್ತಿದ್ದಾರೆ ಮತ್ತು ವಿರೋಧಾಭಾಸದ ಹೇಳಿಕೆಗಳನ್ನು ನೀಡುತ್ತಿದ್ದಾರೆ” ಎಂದು ತೀಕ್ಷ್ಣವಾಗಿ ಹೇಳಿದ್ದರು.

ಈಶಾನ್ಯ ದೆಹಲಿ ಗಲಭೆ ಪ್ರಕರಣದ ವಿಚಾರಣೆಯ ಸಮಯದಲ್ಲಿ ಒಬ್ಬ ಪೊಲೀಸ್ ಮೂವರು ಗಲಭೆಕೋರರನ್ನು ಗುರುತಿಸಿದ್ದು, ಮತ್ತೊಬ್ಬ ಪೊಲೀಸ್ ಅವರನ್ನು ಗುರುತಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿಕೆ ನೀಡಿದ್ದರು. ಈ ಕುರಿತು ಪ್ರತಿಕ್ರಿಯಿಸಿದ್ದ ವಿನೋದ್ ಯಾದವ್, “ಸರಕಾರ ತನಿಖೆಯನ್ನು ನಡೆಸಿದ ರೀತಿ ಅತ್ಯಂತ ವಿಷಾದಕರ” ಎಂದು ಹೇಳಿದ್ದರು. ಈ ಸಂಬಂಧ ಈಶಾನ್ಯ ದೆಹಲಿಯ ಉಪ ಪೊಲೀಸ್ ಆಯುಕ್ತರಿಂದ  ವರದಿ ಕೇಳಿದ್ದರು.

ಕೆಲವು ಗಲಭೆ ಪ್ರಕರಣಗಳಲ್ಲಿ ದೆಹಲಿ ಪೊಲೀಸರು ನಡೆಸಿದ ತನಿಖೆಯನ್ನು ನ್ಯಾಯಾಧೀಶರು ಒಪ್ಪಿಕೊಳ್ಳಲು  ನಿರಾಕರಿಸಿದ್ದರು. ಕೆಲವೊಮ್ಮೆ ಅವರನ್ನು “ನಿರ್ದಯ ಮತ್ತು ವಿಡಂಬನಾತ್ಮಕ” ತನಿಖೆಗಾಗಿ ದಂಡವನ್ನು ಸಹ ವಿಧಿಸಿದ್ದರೆನ್ನುವುದು ಇಲ್ಲಿ ಗಮನಾರ್ಹ. ಅದೇ ರೀತಿ ಮತ್ತೊಂದು ದೆಹಲಿ ಗಲಭೆ ಪ್ರಕರಣದಲ್ಲಿಗಲಭೆಯ ಹೆಚ್ಚಿನ ಪ್ರಕರಣಗಳಲ್ಲಿ ಪೊಲೀಸರ ತನಿಖಾ ಮಾನದಂಡವು “ಅತ್ಯಂತ ಕಳಪೆ’ ಎಂದು ನ್ಯಾಯಾಧೀಶ ಯಾದವ್ ಅವರು ಹೇಳಿದ್ದರು.

ಪೊಲೀಸರು ಹಲವು ಎಫ್ ಐ ಆರ್ ಗಳನ್ನು ಒಟ್ಟು ಸೇರಿಸಿ ಚಾರ್ಜ್ ಶೀಟ್ ಸಲ್ಲಿಸಿದ್ದನ್ನು ಕೂಡಾ ವಿರೋಧಿಸಿದ್ದರು. ಮಾತ್ರವಲ್ಲ ಪ್ರಕರಣಗಳನ್ನು ಧರ್ಮದ ಆಧಾರದಲ್ಲಿ ವಿಚಾರಣೆ ನಡೆಸದಂತೆ ಆದೇಶಿಸಿದ್ದರು. ದೆಹಲಿ ಗಲಭೆ ಪ್ರಕರಣ ಮತ್ತು ಸಿಎಎ ಪ್ರತಿಭಟನೆಯ ನೆಪದಲ್ಲಿ ಪೊಲೀಸ್ ಹಿಂಸೆ ಈ ಎಲ್ಲಾ ಪ್ರಕರಣಗಳಲ್ಲಿ ದೆಹಲಿ ಪೊಲೀಸರು ಬಿಜೆಪಿ ಸರಕಾರದ ಪರವಾಗಿಯೇ ಕಾರ್ಯನಿರ್ವಹಿಸುತ್ತಾ  ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದ್ದವು. ಆದರೆ ನ್ಯಾಯಾಧೀಶ ವಿನೋದ್ ಯಾದವ್ ದೆಹಲಿ ಪೊಲೀಸರನ್ನೇ ತರಾಟೆಗೆ ತೆಗೆದುಕೊಂಡು ಬಿಜೆಪಿ ಸರಕಾರದ ಕೆಂಗಣ್ಣಿಗೆ ಗುರಿಯಾಗಿದ್ದರು. ಇದೀಗ ಅವರ ವರ್ಗಾವಣೆ ದೆಹಲಿ ಗಲಭೆ ಪ್ರಕರನಗಳ ವಿಚಾರಣೆ ಪಾರದರ್ಶಕವಾಗಿ ನಡೆಯುತ್ತದೆ ಎನ್ನುವುದರ ಕುರಿತು ಸಂಶಯ ಮೂಡಿಸಿದಂತಾಗಿದೆ.



Join Whatsapp