ದೇವಾಲಯ ಉಳಿಸಲು ನ್ಯಾಯಾಲಯಕ್ಕೆ ಬಂದ ಜಾಮಿಯಾ ನಗರದ ಮುಸ್ಲಿಮರು

Prasthutha|

ನವದೆಹಲಿ: ದೆಹಲಿಯ ಜಾಮಿಯಾ ನಗರದ ಮುಸ್ಲಿಮ್ ನಿವಾಸಿಗಳು ದೇವಾಲಯದ ಅತಿಕ್ರಮಣ ಒತ್ತುವರಿ ತಡೆಯುವಂತೆ ದೆಹಲಿ ಉಚ್ಚ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಸೆಪ್ಟೆಂಬರ್ 24ರಂದು ದೆಹಲಿ ಉಚ್ಚ ನ್ಯಾಯಾಲಯವು ಜಾಮಿಯಾ ನಗರದ ನೂರ್ ನಗರ್ ಪ್ರದೇಶದಲ್ಲಿ ಇರುವ ದೇವಸ್ಥಾನದ ರಕ್ಷಣೆಯನ್ನು ಖಚಿತ ಪಡಿಸುವಂತೆ ಪೊಲೀಸರಿಗೆ ಆದೇಶ ನೀಡಿದೆ.

- Advertisement -

ನೂರ್ ನಗರದ ಹೃದಯ ಭಾಗದಲ್ಲಿ ಇರುವ ದೇವಸ್ಥಾನದ ಪಕ್ಕದ ಧರ್ಮಶಾಲಾವನ್ನು ಕೆಲವು ಕಿಡಿಗೇಡಿಗಳು ಒಡೆದು ಹಾಕಿದ್ದಾರೆ. ಸೆಪ್ಟೆಂಬರ್ 26ರಂದು ತನಿಖೆಗೆ ಪೊಲೀಸ್ ತಂಡವನ್ನು ರಚಿಸಿ 50 ವರ್ಷಗಳ ಹಳೆಯ ದೇವಾಲಯದ ಸುತ್ತ ಮೂವರು ಪೊಲೀಸರನ್ನು ಕಾವಲಿಗೆ ಹಾಕಿದ್ದಾರೆ.

ದೇವಾಲಯದ ಗೇಟಿಗೆ ಬೀಗ

- Advertisement -

ಸ್ಥಳೀಯ ನಿವಾಸಿಗಳು ಮುಸ್ಲಿಮರಾಗಿರುವುದರಿಂದ ಪೊಲೀಸರು ಕಾವಲು ಹಾಕಿದ್ದಾರೆ. “ಕಿಡಿಗೇಡಿಗಳು ನಮ್ಮ ಧಾರ್ಮಿಕ ನೆಲೆಗಳ ಮೇಲೆ ಕಣ್ಣು ಹಾಕಿದ್ದಾರೆ. ಖಾಸಗಿ ಬಿಲ್ಡರುಗಳು ಜಾಗ ಹೊಡೆಯಲು ಈ ಹುನ್ನಾರ ನಡೆಸಿದ್ದಾರೆ” ಎಂದು ಜೈಪ್ರಕಾಶ್ ಎಂಬ ಆಟೋ ಚಾಲಕ ಹೇಳುತ್ತಾರೆ.

ಧರ್ಮಶಾಲಾದ ಮೇಲೆ ಬಿಲ್ಡರ್ ಗಳ ಕಣ್ಣು ಹಿಂದಿನಿಂದಲೂ ಇದ್ದು ನಿಧಾನವಾಗಿ ಅದನ್ನು ಆಕ್ರಮಿಸಿಕೊಳ್ಳುತ್ತಿದ್ದಾರೆ ಎನ್ನುತ್ತಾರೆ ಸ್ಥಳೀಯ ಮುಸ್ಲಿಮರು. ಈ ದೇವಾಲಯವನ್ನು ಒಂದು ದಶಕದಷ್ಟು ಹಿಂದೆ ಮುಚ್ಚಿದ್ದು, ಖಾಸಗಿ ಬಿಲ್ಡರ್ ಗಳ ಜನರು ಹೊರಗೆ ಕಾವಲು ಕಾಯುತ್ತಿದ್ದರು. ಧರ್ಮಶಾಲಾ ಸ್ಥಳೀಯರಿಗೆ ತಮ್ಮ ಕಾರ್ಯಕ್ರಮ ನಡೆಸಲು ಇರುವ ಸ್ಥಳಗಳಲ್ಲಿ ಒಂದು. ಮುಸ್ಲಿಮರು ಸಮಾರಂಭ ನಡೆಸಿದ್ದಾರೆ. ಇತ್ತೀಚೆಗೆ ಮುಸ್ಲಿಮರೊಬ್ಬರು ತಮ್ಮ ಮಗಳ ನಿಖಾ ಕಾರ್ಯಕ್ರಮವನ್ನು ಕೂಡ ಇಲ್ಲಿ ನಡೆಸಿದ್ದರು ಎಂದು ಪ್ರಕಾಶ್ ಹೇಳುತ್ತಾರೆ.

ನಲವತ್ತು ವರುಷಗಳ ಹಿಂದೆ ರಾಂ ನರೇಶ್ ರಂತೆಯೇ ಪ್ರಕಾಶ್ ಈ ನೂರ್ ನಗರದಲ್ಲಿ ಹುಟ್ಟಿದವರು. ಮೊದಲಿನಿಂದಲೂ ಹಿಂದೂಗಳ ಜೊತೆ ಸೌಹಾರ್ದದಿಂದ ಇರುವ ಮುಸ್ಲಿಮರು ಧರ್ಮಶಾಲಾ ಉಳಿಸುವಂತೆ ಮುಂಚೂಣಿಯಲ್ಲಿ ನಿಂತು ಹೋರಾಡುತ್ತಿದ್ದಾರೆ. ದೆಹಲಿ ಹೈಕೋರ್ಟಿನಲ್ಲಿ ಈ ಬಗೆಗೆ ಪಿಟಿಶನ್ ಸಲ್ಲಿಸಿದವರಲ್ಲಿ ಸಯ್ಯದ್ ಫೈಜುಲ್ ಅಝೀಮ್ ಅಲಿಯಾಸ್ ಆರ್ಶಿ ಸಹ ಒಬ್ಬರು.

ದೇವಾಲಯದ ಮಂಡಳಿಯಾಗಲಿ, ಧರ್ಮಶಾಲಾದ ಸಮಿತಿಯಾಗಲಿ ಯಾವುದೇ ಕ್ರಮ ತೆಗೆದುಕೊಳ್ಳುವ ಲಕ್ಷಣ ಕಾಣದ್ದರಿಂದ ಸ್ಥಳೀಯ ನಾಗರಿಕರೇ ಧರ್ಮಶಾಲಾ ಉಳಿಸಲು ಟೊಂಕ ಕಟ್ಟಿದ್ದಾರೆ. ಸಯ್ಯದ್ ಫೈಜುಲ್ ಅಝೀಮ್.
ಅವರು ದೇವಾಲಯದ ರಕ್ಷಣೆ ಕೋರಿ ಕೋರ್ಟಿಗೆ ಹೋಗಿದ್ದಾರೆ. ಈ ಬಗೆಗೆ ಪೊಲೀಸರಿಗೆ ಮತ್ತೆ ಮತ್ತೆ ದೂರು ನೀಡಿದರೂ ಯಾವುದೇ ರೀತಿಯ ಕ್ರಮ ಬದ್ಧ ತನಿಖೆ ಆರಂಭಿಸಿಲ್ಲ.

“ಜಾಮಿಯಾ ನಗರ ಪೊಲೀಸ್ ಠಾಣೆಯ ಠಾಣಾಧಿಕಾರಿಯನ್ನು ನಾನು ಹಲವು ಬಾರಿ ಈ ಬಗೆಗೆ ಕೇಳಿದೆ. ಅದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಮೊದಲಿಗೆ ಹೇಳಿದರು. ಮತ್ತೊಮ್ಮೆ ನಾಳೆ ಬರುತ್ತೇನೆ ಎಂದರು, ಆದರೆ ಬರಲಿಲ್ಲ. ಆಮೇಲೆ ನಾನು ಎಸಿಪಿ, ಡಿಸಿಪಿ ಹಾಗೂ ದೆಹಲಿ ಪೊಲೀಸ್ ಆಯುಕ್ತರಿಗೆ ಅರ್ಜಿಗಳನ್ನು ಸಲ್ಲಿಸಿದೆ. ಏನೂ ಆಗಲಿಲ್ಲ. ದೇವಾಲಯ ಧರ್ಮಶಾಲಾ ತೊಂದರೆಯಲ್ಲಿದೆ ಎಂದು ಖಚಿತವಾದ ಮೇಲೆ ಕೋರ್ಟಿಗೆ ಹೋದೆ” ಎಂದು ವಿವರಿಸುತ್ತಾರೆ ಸಯ್ಯದ್ ಫೈಜುಲ್ ಅಝೀಮ್.

ಅದಾದ ಮೇಲೆ ಅಝೀಮ್ ರಿಗೆ ಜೀವ ಬೆದರಿಕೆಯ ಫೋನ್ ಕರೆಗಳು ಬರತೊಡಗಿದವು. “ಎಲ್ಲ ವಶೀಲಿಬಾಜಿ ಇರುವ ಶಕ್ತಿಶಾಲಿ ಜನರ ಜೊತೆ ನಿಮಗೆ ತಾಕಲಾಟ ಏಕೆ?” ಎಂದು ಬುದ್ಧಿವಾದ ಹೇಳುವವರು ಹೆಚ್ಚಿದರು ಎಂದರು ಅಝೀಮ್.
ಈಗ ಉಚ್ಚ ನ್ಯಾಯಾಲಯವು ದೇವಾಲಯವು ಉಳಿಯಬೇಕು, ರಕ್ಷಿಸಲ್ಪಡಬೇಕು, ಒತ್ತುವರಿ ತಡೆಯಬೇಕು ಎಂದು ಸ್ಪಷ್ಟ ಆದೇಶ ನೀಡಿದೆ.

ಜನರ ನಂಬಿಕೆಯ ಆಲಯಗಳನ್ನು ಒಡೆಯಲಾಗುತ್ತಿದೆ, ನಮ್ಮ ಜನ ಕೋಮು ಸಮಸ್ಯೆಗಳಲ್ಲಿ ಮುಳುಗಿದ್ದಾರೆ ಎನ್ನುತ್ತಾರೆ ಅಝೀಮ್. 2020ರ ದೆಹಲಿ ಗಲಭೆಯ ಕಾಲದಲ್ಲಿ ತಾನಾಗಿಯೆ ಹಿಂಸಾಚಾರಕ್ಕೆ ಸಂತ್ರಸ್ತರ ಪರ ಓಡಾಡಿ ಸೇವೆ ಮಾಡಿದ್ದಾರೆ ಅಝೀಮ್.
“ನಾನು ಮಾನವೀಯ ದೃಷ್ಟಿಯಿಂದ ದೇವಾಲಯದ ಉಳಿವಿಗಾಗಿ ಬದ್ಧತೆಯಿಂದ ನಿಂತಿದ್ದೇನೆ. ಹಾಗೆಯೇ ನಮ್ಮ ಹಿಂದೂ ಸಹೋದರರು ಮಸೀದಿಗಳ ಪರ ನಿಲ್ಲಬೇಕು.” ಎಂಬುದು ಅವರ ಅಭಿಮತ.

ಎರಡು ಸಮುದಾಯಗಳ ನಡುವೆ ಕಂದರ ಆಳವಾಗುತ್ತಿದೆ. ಶಾಂತಿ ಮತ್ತು ಬಾಂಧವ್ಯ ಬಲಿಯಲು ಎರಡೂ ಕಡೆಯವರು ಪ್ರಯತ್ನ ನಡೆಸಬೇಕು. ಈ ದೇವಾಲಯದ ವಿಷಯದಲ್ಲಿ ಸ್ಥಳೀಯರು ಒಗ್ಗಟ್ಟಿನಿಂದ ಅದನ್ನು ಉಳಿಸಿಕೊಳ್ಳಬೇಕು ಎನ್ನುವುದು ಅಝೀಮ್ ನಿಲುವು.



Join Whatsapp