ಕುಡಿಯುವ ನೀರಿನ ಗುಣಮಟ್ಟದ ವರದಿ ನೀಡಲು ರೈಲ್ವೆ ಇಲಾಖೆಗೆ  ದೆಹಲಿ ಹೈಕೋರ್ಟ್ ಸೂಚನೆ

Prasthutha|

ನವದೆಹಲಿ: ರೈಲ್ವೆ ಪ್ರಯಾಣಿಕರಿಗೆ ಒದಗಿಸಲಾಗುತ್ತಿರುವ ಕುಡಿಯುವ ನೀರಿನ ಗುಣಮಟ್ಟದ ಕುರಿತ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ದೆಹಲಿ ಹೈಕೋರ್ಟ್ ರೈಲ್ವೆ ಇಲಾಖೆಗೆ ಸೂಚಿಸಿದೆ.

- Advertisement -

ಕಲುಷಿತ ಕುಡಿಯುವ ನೀರನ್ನು ಪ್ರಯಾಣಿಕರಿಗೆ ಪೂರೈಕೆ ಮಾಡಲಾಗುತ್ತಿರುವುದಲ್ಲದೆ,  ಕ್ಲೋರಿನೇಷನ್ ಘಟಕಗಳ ನಿರ್ಮಾಣಕ್ಕಾಗಿ ನೀಡಿರುವ ಗುತ್ತಿಗೆಗಳಲ್ಲಿ ಅವ್ಯವಹಾರ ನಡೆದಿದೆ. ಈ ಸಂಬಂಧ ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ಸ್ವತಂತ್ರ ತನಿಖೆ ಕೈಗೊಳ್ಳಬೇಕೆಂದು ಒತ್ತಾಯಿಸಿ ಸೆಂಟರ್ ಫಾರ್ ಪಬ್ಲಿಕ್ ಇಂಟ್ರೆಸ್ಟ್ ಲಿಟಿಗೇಷನ್ ಎಂಬ ಸ್ವಯಂ ಸೇವಾ ಸಂಸ್ಥೆಯು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು.

ಬುಧವಾರ ಇದರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸುಬ್ರಮಣಿಯಂ ಪ್ರಸಾದ್ ಅವರನ್ನೊಳಗೊಂಡ ಪೀಠವು ಈ ಸಂಬಂಧ ಆರು ವಾರಗಳ ಒಳಗೆ ಹೊಸ ವರದಿಯೊಂದನ್ನು ಸಲ್ಲಿಸುವಂತೆ ರೈಲ್ವೆ ಇಲಾಖೆಗೆ ಸೂಚಿಸಿದೆ. ಹಾಗೂ  ವಿಚಾರಣೆಯನ್ನು 2023ರ ಫೆಬ್ರುವರಿ 15ಕ್ಕೆ ಮುಂದೂಡಿದೆ.

- Advertisement -

ಗುಣಮಟ್ಟದ ಸೌಲಭ್ಯ ಒದಗಿಸದಿದ್ದರೂ ದರ ಹೆಚ್ಚಳ ಮಾಡಿರುವ ಇಲಾಖೆಯ ಕ್ರಮವನ್ನು ಪ್ರಶ್ನಿಸಿದ ನ್ಯಾಯಪೀಠ, ಪ್ರಯಾಣಿಕರಿಗೆ ಕಲುಷಿತ ಕುಡಿಯುವ ನೀರು ಪೂರೈಸುವುದನ್ನು ನಿಲ್ಲಿಸುವಂತೆ ಸೂಚಿಸಿದೆ

Join Whatsapp