ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಸರಕಾರದ ನೂತನ ಕೃಷಿ ಮಸೂದೆ ವಿರೋಧಿಸಿ ರೈತರ ಪ್ರತಿಭಟನೆ ತೀವ್ರಗೊಂಡಿದ್ದು, ಇಂದು ಬಹುತೇಕ ರೈತರು ದೆಹಲಿ ತಲುಪಿದ್ದಾರೆ.
ರೈತರು ರಾಷ್ಟ್ರರಾಜಧಾನಿಗೆ ತಲುಪುತ್ತಿದ್ದಂತೆ ಅಲ್ಲಿನ ವಾಹನ ಸಂಚಾರ ದಟ್ಟಣೆ ತೀವ್ರಗೊಂಡಿದೆ. ಹೀಗಾಗಿ ಪರ್ಯಾಯ ಮಾರ್ಗಗಳನ್ನು ಕಲ್ಪಿಸಲಾಗಿದೆ. ರಾಜಧಾನಿಯಾದ್ಯಂತ ಬಿಗಿ ಭದ್ರತೆ ಏರ್ಪಡಿಸಲಾಗಿದೆ.
ಕೆಲವೆಡೆ ಇನ್ನೂ ರಸ್ತೆಗಳಲ್ಲಿ ಪೊಲೀಸರು ಸಂಚಾರ ಬಂದ್ ಮಾಡಿದ್ದಾರೆ. ಪೊಲೀಸರ ತೀವ್ರ ಒತ್ತಡದ ನಡುವೆಯೂ, ಜಲ ಫಿರಂಗಿ, ಅಶ್ರುವಾಯು ಪ್ರಯೋಗವನ್ನೂ ಹಿಮ್ಮೆಟ್ಟಿಸಿ, ರೈತರು ದೆಹಲಿಗೆ ಸಾಗಿಬಂದಿದ್ದಾರೆ. ರಾಜಸ್ಥಾನ, ಹರ್ಯಾಣ, ಪಂಜಾಬ್, ಉತ್ತರ ಪ್ರದೇಶದ ರೈತರು ದೊಡ್ಡ ಸಂಖ್ಯೆಯಲ್ಲಿ ದೆಹಲಿಯಲ್ಲಿ ಪ್ರತಿಭಟನೆ ನಡೆಸಲಿದ್ದಾರೆ.