ಇರಾನ್ ನ ಪ್ರಮುಖ ಅಣುವಿಜ್ಞಾನಿಯ ಹತ್ಯೆ | ಕಾರಿನ ಮೇಲೆ ಗುಂಡಿನ ದಾಳಿ | ಇಸ್ರೇಲ್ ಕೈವಾಡದ ಆರೋಪ

Prasthutha|

ಟೆಹರಾನ್ : ಇರಾನ್ ನ ಪ್ರಮುಖ ಅಣುವಿಜ್ಞಾನಿಗಳಲ್ಲಿ ಓರ್ವರಾದ ಮೊಹ್ಸೆನ್ ಫಖ್ರಿಜಾದೆಹ್ ಅವರನ್ನು ಶುಕ್ರವಾರ ಗುಂಡಿನ ದಾಳಿಯಲ್ಲಿ ಹತ್ಯೆ ಮಾಡಲಾಗಿದೆ. ಈ ಕೃತ್ಯದ ಹಿಂದೆ ಇಸ್ರೇಲ್ ಕೈವಾಡವಿದೆ ಎಂದು ಇರಾನ್ ಆಪಾದಿಸಿದೆ.

ಮೊಹ್ಸೆನ್ ಅವರ ಕಾರನ್ನು ಗುರಿಯಾಗಿಸಿಕೊಂಡು ದುಷ್ಕರ್ಮಿಗಳು ದಾಳಿ ನಡೆಸಿದ್ದರು. ಈ ವೇಳೆ ಮೊಹ್ಸೆನ್ ಅವರ ಭದ್ರತಾ ಸಿಬ್ಬಂದಿ ಮತ್ತು ದಾಳಿಕೋರರ ನಡುವೆ ಗುಂಡಿನ ಚಕಮಕಿ ನಡೆಯಿತು.

- Advertisement -

ಗುಂಡೇಟಿನಿಂದ ಗಂಭೀರ ಗಾಯಗೊಂಡಿದ್ದ ಮೊಹ್ಸೆನ್ ಅವರನ್ನು ತಕ್ಷಣವೇ ಸೇನಾ ಸಂಶೋಧನಾ ಆಸ್ಪತ್ರೆಗೆ ಸಾಗಿಸಲಾಗಿಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ. ಮೊಹ್ಸೆನ್ ಅವರು ಹುತಾತ್ಮರಾದರೆಂದು ಇರಾನ್ ಸೇನಾ ಮೂಲಗಳು ದೃಢಪಡಿಸಿವೆ.

ಮೊಹ್ಸೆನ್ ಅವರು ಇರಾನ್ ನಲ್ಲಿ ಪ್ರಮುಖ ಅಣುವಿಜ್ಞಾನಿಗಳಲ್ಲಿ ಒಬ್ಬರಾಗಿದ್ದು, 2000ರ ಇಸವಿಯಲ್ಲಿ ‘ಅಮದ್’ ಎಂಬ ಪರಮಾಣು ಕಾರ್ಯಕ್ರಮವನ್ನು ನಿರ್ವಹಿಸಿದ್ದರು. ಇರಾನ್ ಅಣ್ವಸ್ತ್ರ ಸಾಧಿಸುವಲ್ಲಿ ಮೊಹ್ಸೆನ್ ಪಾತ್ರ ಪ್ರಮುಖವಾದುದು.

- Advertisement -