‘ಕಾಶ್ಮೀರ್ ಫೈಲ್ಸ್’ ನೋಡಿ ಕಣ್ಣೀರು ಸುರಿಸಿದವರು ದಲಿತ ದೌರ್ಜನ್ಯಕ್ಕೆ ಎಷ್ಟು ಬಾರಿ ಅತ್ತಿದ್ದಾರೆ? : ಸಂತೋಷ್ ಬಜಾಲ್

Prasthutha|

ಮಂಗಳೂರು: ‘ದಿ ಕಾಶ್ಮೀರ್ ಫೈಲ್ಸ್’ ಸಿನೆಮಾವನ್ನು ನೋಡಿ ಪಂಡಿತರಿಗೆ ಭಾರೀ ಅನ್ಯಾಯವಾಗುತ್ತಿದೆ ಎಂದು ಕಣ್ಣೀರು ಸುರಿಸುತ್ತಿದ್ದಾರೆ. ಆದರೆ ದೇಶದಲ್ಲಿ ಪಂಡಿತರಿಗಿಂತಲೂ ಜಾಸ್ತಿ ದಲಿತರ ಮೇಲೆ ನಿರಂತರ ದೌರ್ಜನ್ಯಗಳು ನಡೆಯುತ್ತಿದೆ. ಆದರೆ ‘ಕಾಶ್ಮೀರ್ ಫೈಲ್ಸ್’ ಸಿನೆಮಾವನ್ನು ಕಂಡು ಕಣ್ಣೀರು ಸುರಿಸಿದವರು ದಲಿತರ ಮೇಲಿನ ದೌರ್ಜನ್ಯಕ್ಕೆ ಎಷ್ಟು ಬಾರಿ ಕಣ್ಣೀರು ಸುರಿಸಿದ್ದೀರಿ ಅಂತಾ ಡಿವೈಎಫ್ಐ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಕುಮಾರ್ ಬಜಾಲ್ ಪ್ರಶ್ನಿಸಿದರು.

- Advertisement -

ದಲಿತ ಹಕ್ಕುಗಳ ಸಮಿತಿ ಮಂಗಳೂರು ನಗರ ಸಮಿತಿ ವತಿಯಿಂದ ನಗರದ ಬಲ್ಮಠದಲ್ಲಿ ನಡೆದ ದಲಿತ ಚೈತನ್ಯ ಸಮಾವೇಶದಲ್ಲಿ ಅವರು ಮಾತನಾಡಿದರು.

“ದಲಿತರ ಮೇಲೆ ಸವರ್ಣೀಯರಿಂದ ನಿರಂತರವಾಗಿ ದೌರ್ಜನ್ಯವಾಗುತ್ತಿದ್ದರೂ ಸಂಘ ಪರಿವಾರ ಧ್ವನಿಯೆತ್ತಿರಲಿಲ್ಲ. ಆದರೆ, ಇದೀಗ ಕೊರಗಜ್ಜನಿಗೆ ಅವಮಾನವಾಗಿದೆ ಎಂದು ಕದ್ರಿಯಿಂದ ಕುತ್ತಾರ್ ವರೆಗೆ ಪಾದಯಾತ್ರೆ ನಡೆಸುತ್ತಿದೆ. ಅದೇ ಕದ್ರಿಯಲ್ಲಾಗಿತ್ತು ಕೊರಗಜ್ಜನಿಗೆ ಪ್ರವೇಶ ನಿರಾಕರಿಸಿ ಹತ್ಯೆಗೈದಿರುವುದು. ಮಾತ್ರವಲ್ಲದೇ, ಕೊರಗಜ್ಜನಿಗೆ ಅನ್ಯಾಯವಾಗಿದೆ ಎಂದು ಪಾದಯಾತ್ರೆ ನಡೆಸುವವರು ಕೋಟತಟ್ಟು, ಪುತ್ತೂರು ಘಟನೆ ಬಗ್ಗೆಯಾಗಲೀ, ಮಲೆಕುಡಿಯರ ಪರವಾಗಲೀ ಪಾದಯಾತ್ರೆ ನಡೆಸಿದ ಉದಾಹರಣೆಗಳಿಲ್ಲ” ಎಂದು ಹರಿಹಾಯ್ದರು.

- Advertisement -

ದಲಿತ ಹಕ್ಕುಗಳ ಸಮಿತಿ ರಾಜ್ಯ ಸಂಚಾಲಕ ಗೋಪಾಲಕೃಷ್ಣ ಅರಳಹಳ್ಳಿ ಮಾತನಾಡಿ, “ರಾಜ್ಯದಲ್ಲಿ ದಲಿತರ ಮೇಲೆ ದೌರ್ಜನ್ಯಗಳು ಹೆಚ್ಚಾಗುತ್ತಿವೆ. ಕೇಂದ್ರ ಹಾಗೂ ರಾಜ್ಯ ಸರಕಾರದ ಅನುದಾನದಲ್ಲಿ ಕಡಿತಗೊಳಿಸಲಾಗುತ್ತಿದೆ. ಸಂಘಪರಿವಾರದ ಅಣತಿಯಂತೆ ರಾಜ್ಯವನ್ನು ಕೋಮುವಾದದ ಉಗ್ರಾಣವನ್ನಾಗಿಸುತ್ತಿದ್ದು, ದಲಿತರು ಎಚ್ಚೆತ್ತುಕೊಳ್ಳಬೇಕಿದೆ” ಎಂದರು.  

ಸಭೆಯಲ್ಲಿ ದಲಿತ ಹಕ್ಕುಗಳ ಸಮಿತಿ ದ.ಕ. ಜಿಲ್ಲಾ ಸಮಿತಿ ಅಧ್ಯಕ್ಷ ತಿಮ್ಮಯ್ಯ ಕೆ., ಅಹ್ಮದ್ ಬಶೀರ್, ನಾಗೇಂದ್ರ ಉರ್ವ ಸ್ಟೋರ್, ಕೃಷ್ಣಪ್ಪ ಕೊಣಾಜೆ ಉಪಸ್ಥಿತರಿದ್ದರು.

Join Whatsapp