ಐಪಿಎಲ್ ಹಾಗೂ ಟಿ-20 ವಿಶ್ವಕಪ್ ನಿಂದ ಸ್ಯಾಮ್ ಕರನ್ ‘ಔಟ್’ !

Prasthutha|

ಲಂಡನ್:  ಚೆನ್ನೈ ಸೂಪರ್ ಕಿಂಗ್ಸ್  ಹಾಗೂ ಇಂಗ್ಲೆಂಡ್ ತಂಡದ ಪ್ರಮುಖ ಯುವ ಆಲ್​ರೌಂಡರ್ ಸ್ಯಾಮ್ ಕರನ್ ಪ್ರಸಕ್ತ  ನಡೆಯುತ್ತಿರುವ  ಐಪಿಎಲ್​ ಟೂರ್ನಿಯಿಂದ  ಹೊರ ನಡೆದಿದ್ದಾರೆ. ರಾಜಸ್ಥಾನ ರಾಯಲ್ಸ್ ವಿರುದ್ಧ ಶನಿವಾರ ನಡೆದ ಪಂದ್ಯದ ವೇಳೆ ಕರನ್ ಬೆನ್ನು ನೋವಿನ ಸಮಸ್ಯೆಗೆ ತುತ್ತಾಗಿದ್ದರು.

- Advertisement -

ಮುಂದಿನ ಎರಡು ದಿನಗಳಲ್ಲಿ ಸ್ಯಾಮ್ ಇಂಗ್ಲೆಂಡ್‌ಗೆ ವಾಪಸಾಗಲಿದ್ದು, ಹೆಚ್ಚಿನ ವೈದ್ಯಕೀಯ ತಪಾಸಣೆಗೆ ಒಳಪಡಲಿದ್ದಾರೆ. ಹೀಗಾಗಿ ಚೆನ್ನೈ ಸೂಪರ್ ಕಿಂಗ್ಸ್​ ತಂಡದ ಉಳಿದ ಪಂದ್ಯಗಳಿಗೆ ಹಾಗೂ ಮುಂಬರುವ ಟಿ-20 ವಿಶ್ವಕಪ್​ಟೂರ್ನಿಗೂ ಅಲಭ್ಯರಾಗಲಿದ್ದಾರೆ ಎಂದು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಪ್ರಕಟಣೆಯಲ್ಲಿ ತಿಳಿಸಿದೆ.

ಸ್ಯಾಮ್ ಕರನ್  ಸ್ಥಾನಕ್ಕೆ ಅವರ ಹಿರಿಯ ಸಹೋದರ ಟಾಮ್ ಕರನ್ ಅವರನ್ನು ಇಂಗ್ಲೆಂಡ್ ವಿಶ್ವಕಪ್ ತಂಡಕ್ಕೆ ಆಯ್ಕೆ ಮಾಡಲಾಗಿದೆ.  23 ವರ್ಷದ ಕರನ್‌, ಈ ಬಾರಿ ಐಪಿಎಲ್‌ ಟೂರ್ನಿಯಲ್ಲಿ ಆಡಿರುವ ಒಂಬತ್ತು ಪಂದ್ಯಗಳಲ್ಲಿ 56 ರನ್ ಗಳಿಸಿದ್ದು, ಒಂಬತ್ತು ವಿಕೆಟ್ ಪಡೆದಿದ್ದಾರೆ.

- Advertisement -

ಸದ್ಯ ಚೆನ್ನೈ ಸೂಪರ್ ಕಿಂಗ್ಸ್​ ಪ್ಲೇ ಆಫ್ ಪ್ರವೇಶಿಸಿದೆ. ಆದರೆ  ನಾಕೌಟ್ ಹಂತದ ಪಂದ್ಯದ ವೇಳೆ ಸ್ಯಾಮ್ ಕರನ್ ಅಲಭ್ಯತೆಯು ತಂಡದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಇದೀಗ ಅಂತಿಮ ಹಂತದಲ್ಲಿ ಹೊರಗುಳಿಯುತ್ತಿರುವುದರಿಂದ ಬದಲಿ ಆಟಗಾರನಾಗಿ ಪ್ರಸ್ತುತ ತಂಡದಲ್ಲಿರುವವರನ್ನೇ ಸಿಎಸ್’ಕೆ ಮುಂದುವರಿಸಬೇಕಾಗುತ್ತದೆ.

ಮತ್ತೊಂದೆಡೆ  ಇಂಗ್ಲೆಂಡ್‌ನ ಟಿ-20 ವಿಶ್ವಕಪ್​ನಿಂದ ಈಗಾಗಲೇ ಆಲ್​ರೌಂಡರ್​ ಬೆನ್​ ಸ್ಟೋಕ್ಸ್​ ಕೂಡ ಹೊರಗುಳಿದಿದ್ದು, ಇದೀಗ ತಂಡದಲ್ಲಿದ್ದ ಯುವ ಆಲ್​ರೌಂಡರ್ ಗಾಯದ ಕಾರಣ ಅಲಭ್ಯರಾಗಿರುವುದು ತಂಡದ ಚಿಂತೆಯನ್ನು ಹೆಚ್ಚಿಸಿದೆ.

‘ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅಭಿಮಾನಿಗಳಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಕಳೆದ ಎರಡು ಆವೃತ್ತಿಗಳಲ್ಲಿ ನಾನು ನಿಮ್ಮ ಬೆಂಬಲವನ್ನು ಸಂಪೂರ್ಣವಾಗಿ ಇಷ್ಟಪಟ್ಟಿದ್ದೇನೆ’ ಎಂದು ಕರನ್‌ ಹೇಳಿದ್ದಾರೆ.



Join Whatsapp